ನವದೆಹಲಿ: ದೇಶಾದ್ಯಂತ ಹೃದಯಾಘಾತಗಳಿಗೆ ಯುವಕರೇ ಬಲಿಯಾಗುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಗುಜರಾತ್‌ನಲ್ಲಿ ಕೆಲವೇ ದಿನಗಳಲ್ಲಿ 10 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅದರಲ್ಲೂ, ಕೊರೊನಾ ವೈರಸ್ ಬಳಿಕ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಲಸಿಕೆಯಿಂದಲೇ ಹಾರ್ಟ್ ಅಟ್ಯಾಕ್, ಹೃದಯ ಸ್ತಂಭನ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಮಹತ್ವದ ಸೂಚನೆ ನೀಡಿದೆ. “ಕೊರೊನಾ ವೇಳೆ ಸಾವು ಗೆದ್ದು ಬಂದವರು ಜಾಸ್ತಿ ಕೆಲಸ ಮಾಡಬಾರದು” ಎಂದು ಸೂಚಿಸಿದೆ.
“ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ ತಿಳಿಸಿದ್ದಾರೆ. ಗುಜರಾತ್‌ನಲ್ಲಿ ಇತ್ತೀಚೆಗೆ ನವರಾತ್ರಿ ಹಿನ್ನೆಲೆ ಗಾರ್ಬಾ ನೃತ್ಯ ಮಾಡುವ ವೇಳೆ ಹೃದಯಾಘಾತದಿಂದ 10 ಜನ ಮೃತಪಟ್ಟಿರುವ ಕುರಿತು ಪ್ರತಿಕ್ರಿಯಿಸುವ ವೇಳೆ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
#WATCH | Bhavnagar, Gujarat: On heart attack cases during the Garba festival, Union Health Minister Mansukh Mandaviya says, "ICMR has done a detailed study recently. The study says that those who have had severe covid and enough amount of time has not passed, should avoid… pic.twitter.com/qswGbAHevV
— ANI (@ANI) October 30, 2023
ಕೊರೊನಾ ಬಳಿಕ ಹೃದಯಾಘಾತ ಹೆಚ್ಚಳ; ಐಸಿಎಂಆರ್ ವರದಿ ಹೇಳುವುದೇನು?
ಕೊರೊನಾ ನಂತರ ಹೃದಯಾಘಾತಕ್ಕೀಡಾಗುವವರ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಈಗಾಗಲೇ ಸಂಶೋಧನೆ (ICMR) ಆರಂಭಿಸಿದೆ. ಹಾಗೆಯೇ, ಕೊರೊನಾ ಪಿಡುಗಿನ ನಂತರ ಹೃದಯಾಘಾತಕ್ಕೀಡಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಐಸಿಎಂಆರ್ ತಜ್ಞರೇ ಒಪ್ಪಿಕೊಂಡಿದ್ದಾರೆ.
ಆದರೆ, ಕೊರೊನಾ ಸೋಂಕು ತಗುಲಿ, ನಂತರ ಗುಣಮುಖರಾದವರಲ್ಲಿ ಪ್ರಮಾಣ ಜಾಸ್ತಿ ಇದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. ಆದಾಗ್ಯೂ, ಕೊರೊನಾ ಲಸಿಕೆಯಿಂದಲೂ ಹೃದಯಾಘಾತ ಆಗುತ್ತಿದೆಯೇ ಎಂಬ ಕುರಿತು ಕೂಡ ಐಸಿಎಂಆರ್ ತಜ್ಞರು ಸಂಶೋಧನೆ, ಅಧ್ಯಯನ ಆರಂಭಿಸಿದ್ದಾರೆ. ಇದರ ವರದಿ ಬಳಿಕವೇ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣ ಹೌದೋ, ಅಲ್ಲವೋ ಎಂಬುದು ತಿಳಿಯಲಿದೆ.
ಇದನ್ನೋ ಓದಿ: Keep Your Heart Healthy: ಹೀಗೆ ಮಾಡಿ ಹೃದಯವನ್ನು ಭದ್ರವಾಗಿಟ್ಟುಕೊಳ್ಳಿ!
ಹೃದಯಾಘಾತ ಪ್ರಮಾಣ ಎಷ್ಟು ಏರಿಕೆ?
ಕೊರೊನಾ ಸೋಂಕಿನ ನಂತರದಲ್ಲಿ ಹೃದಯಾಘಾತ ಪ್ರಮಾಣ ಏರಿಕೆಯಾಗಿರುವುದನ್ನು ಜಾಗತಿಕ ವರದಿಗಳೇ ದೃಢಪಡಿಸಿವೆ. ಜಾಗತಿಕ ವರದಿಯೊಂದರ ಪ್ರಕಾರ, ಸಾಂಕ್ರಾಮಿಕದ ನಂತರ 24-45 ವರ್ಷದೊಳಗಿನವರಲ್ಲಿ ಹೃದಯಾಘಾತ ಪ್ರಮಾಣವು ಶೇ.30ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ. ಆ ಮೂಲಕ ಅಂತಾರಾಷ್ಟ್ರೀಯವಾಗಿಯೂ ಕೊರೊನಾ ನಂತರ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ ಎಂಬುದು ದೃಢಪಟ್ಟಿದೆ.
ಶೇ.3-5ರಷ್ಟು ಏರಿಕೆ: ಡಾ.ಸಿ.ಎನ್. ಮಂಜುನಾಥ್
ಕೊರೊನಾ ನಂತರ ಹೃದಯಾಘಾತ ಪ್ರಮಾಣವು ಶೇ.3ರಿಂದ ಶೇ.5ರಷ್ಟು ಏರಿಕೆಯಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ. “ಮೊದಲೆಲ್ಲ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಾಘಾತ ಆಗುತ್ತಿರಲಿಲ್ಲ. ಆದರೆ, ಈಗ ಯುವಕರಿಗೂ ಹೃದಯಾಘಾತ ಹೆಚ್ಚುತ್ತಿದೆ. ಅಧಿಕ ಒತ್ತಡ, ಜೀವನ ಶೈಲಿ, ಆಹಾರ ಶೈಲಿ ಇದಕ್ಕೆ ಕಾರಣವಾಗಿದೆ” ಎಂದು ಮಾಹಿತಿ ನೀಡಿದ್ದಾರೆ.