ಹೊಸದಿಲ್ಲಿ: ಬೃಹತ್ ಸೌರ ಬಿರುಗಾಳಿಗಳು (Solar Storm) ಶುಕ್ರವಾರ ಭೂಮಿಗೆ ಅಪ್ಪಳಿಸಲಿವೆ. ಇದರಿಂದ ಇಂಟರ್ನೆಟ್, ರೇಡಿಯೋ ಮತ್ತು ಜಿಪಿಎಸ್ ಸಿಗ್ನಲ್‌ಗಳಿಗೆ ಧಕ್ಕೆಯಾಗಲಿದೆ ಎಂದು ಗೊತ್ತಾಗಿದೆ.
ಅಮೆರಿಕ ಮೂಲದ ಏಜೆನ್ಸಿ NOAA ಅಭಿವೃದ್ಧಿಪಡಿಸಿದ ಮುನ್ಸೂಚನೆಯ ಮಾದರಿಯ ಪ್ರಕಾರ ಶುಕ್ರವಾರ ಶಕ್ತಿಯುತ ಸೌರ ಬಿರುಗಾಳಿಗಳು ಭೂಮಿಗೆ ಅಪ್ಪಳಿಸಲಿವೆ. ಇವು ಸೂರ್ಯನ ಕರೋನಲ್ ಮಾಸ್ ಎಜೆಕ್ಷನ್ (CME) ನಿಂದ ಉಂಟಾಗುತ್ತವೆ. ಇವು ರೇಡಿಯೋ, ಜಿಪಿಎಸ್ ಮತ್ತು ಉಪಗ್ರಹ ಸಂವಹನದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುವ ಭೂಕಾಂತೀಯ ಅಲೆಗಳನ್ನು ಉತ್ಪಾದಿಸುತ್ತವೆ ಎಂದು ಬಾಹ್ಯಾಕಾಶ ಹವಾಮಾನ ಭೌತಶಾಸ್ತ್ರಜ್ಞ ತಮಿತಾ ಸ್ಕೋವ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
NOAA ಅಧಿಕೃತವಾಗಿ ಈ ಚಂಡಮಾರುತಗಳನ್ನು G2 ಎಂದು ವರ್ಗೀಕರಿಸಿದೆ. ಇದು ಮಧ್ಯಮ ತೀವ್ರತೆಯನ್ನು ಹೊಂದಿದೆ. G3 ವರ್ಗದ ಬಿರುಗಾಳಿಗಳು ಹೆಚ್ಚು ಶಕ್ತಿಯುತ ಹಾಗೂ ಅನಾಹುತಕಾರಿಯಾಗಿರುತ್ತವೆ. NOAA ಪ್ರಕಾರ ನವೆಂಬರ್ 27ರಂದು ಸಂಭವಿಸಿದ CME ಕೂಡ ಸೌರ ಬಿರುಗಾಳಿಗಳನ್ನು ಬಿಡುಗಡೆ ಮಾಡಿದೆ.
ಸೌರ ಬಿರುಗಾಳಿಗಳು ಇನ್ನೂ ಪ್ರಬಲವಾದ ಭೂಕಾಂತೀಯ ಚಂಡಮಾರುತವನ್ನು ಉಂಟುಮಾಡಬಹುದು. ಬುಧವಾರದಂದು ಎಂ-ಕ್ಲಾಸ್ ಜ್ವಾಲೆಯಿಂದ ಅತಿದೊಡ್ಡ CME ಉಂಟಾಗಿದೆ. ಸೂರ್ಯನ ಮೇಲ್ಮೈಯಲ್ಲಿ ಪ್ಲಾಸ್ಮಾದ ದೊಡ್ಡ ಕುಣಿಕೆಗಳು ಬಾಹ್ಯಾಕಾಶಕ್ಕೆ ವಿದ್ಯುತ್ಕಾಂತೀಯ ಕಣಗಳನ್ನು ಚಿಮ್ಮಿದಾಗ ಸೌರ ಜ್ವಾಲೆಗಳು ಉಂಟಾಗುತ್ತವೆ.
ಕರೋನಲ್ ಮಾಸ್ ಎಜೆಕ್ಷನ್‌ಗಳು (CMEಗಳು) ಸೂರ್ಯನಿಂದ ಎಸೆಯಲ್ಪಟ್ಟ ಚಾರ್ಜ್ಡ್ ಕಣಗಳ ಬೃಹತ್ ಮೋಡಗಳಾಗಿವೆ. ಈ ಕಣಗಳು ಭೂಮಿಯ ತಾಂತ್ರಿಕ ಮೂಲಸೌಕರ್ಯಗಳ ಮೇಲೆ ಅನಾಹುತಕಾರಿ ಒಪ್ರಭಾವ ಟುಮಾಡಬಹುದು. ಉಪಗ್ರಹ ಸಂವಹನ ಮತ್ತು ರೇಡಿಯೊ ಸಂಕೇತಗಳನ್ನು ಅಡ್ಡಿಪಡಿಸಬಹುದು. ಬರಲಿರುವ ಸೌರ ಚಂಡಮಾರುತ ತುಲನಾತ್ಮಕವಾಗಿ ಸೌಮ್ಯವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸಂಭಾವ್ಯ ಅಪಾಯಗಳ ಹೊರತಾಗಿಯೂ, ಸೌರ ಬಿರುಗಾಳಿಗಳು ಸಾಮಾನ್ಯವಾಗಿ ಮಾನವನ ಆರೋಗ್ಯಕ್ಕೆ ಯಾವುದೇ ನೇರ ಬೆದರಿಕೆಯನ್ನು ಉಂಟುಮಾಡುವುದಿಲ್ಲ. ಆದರೆ ಅತ್ಯಂತ ಶಕ್ತಿಯುತವಾದ ಸೌರ ಜ್ವಾಲೆಗಳು ಜೀವಿಗಳ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿರುವ ಹಾನಿಕಾರಕ ವಿಕಿರಣವನ್ನು ಹೊರಸೂಸುತ್ತವೆ. ಅದೃಷ್ಟವಶಾತ್, ಭೂಮಿಯ ರಕ್ಷಣಾತ್ಮಕ ವಾತಾವರಣವು ಈ ವಿಕಿರಣದ ತೀವ್ರತೆಯಿಂದ ನಮ್ಮನ್ನು ರಕ್ಷಿಸುತ್ತದೆ.
ಇದನ್ನೂ ಓದಿ: NASA : ಕ್ಷುದ್ರಗ್ರಹದ ಸ್ಯಾಂಪಲ್ ಹೊತ್ತು ತಂದಿದೆ ನಾಸಾದ ಕ್ಯಾಪ್ಸೂಲ್, ಬಹಿರಂಗವಾಗಲಿದೆ ಸೌರವ್ಯೂಹದ ರಹಸ್ಯ