ಲಕ್ನೋ, ಉತ್ತರ ಪ್ರದೇಶ: ಶಾಲೆಯಲ್ಲಿ ಮಕ್ಕಳಿಗೆ ನಮಾಜ್ (Namaz In School) ಮಾಡಲು ಅವಕಾಶ ಕಲ್ಪಿಸಿದ ಶಾಲಾ ಪ್ರಿನ್ಸಿಪಾಲರನ್ನು (School Principal) ಸೇವೆಯನ್ನು ಅಮಾನತು (Suspended from Service) ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿ ನಮಾಜ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಜರುಗಿಸಿರುವ ಉತ್ತರ ಪ್ರದೇಶದ ಸರ್ಕಾರವು, ಇಬ್ಬರು ಶಿಕ್ಷಕರಿಗೆ ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಶನಿವಾರ ಶಾಲಾ ಮಂಡಳಿ ವಿರುದ್ಧ ಕೆಲವು ಹಿಂದೂ ಸಂಘಟನೆಗಳು (Hindu organizations) ತೀವ್ರ ಪ್ರತಿಭಟನೆ ನಡೆಸಿದ ಬಳಿಕ ಇಡೀ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿತ್ತು.
ಈ ಕುರಿತು ಹೇಳಿಕೆ ನೀಡಿರುವ ಮೂಲ ಶಿಕ್ಷಣಾಧಿಕಾರಿ ಅರುಣ್ ಕುಮಾರ್ , ಲಕ್ನೋನ ನೇಪಿಯರ್ ರಸ್ತೆಯ ಪ್ರಾಥಮಿಕ ಶಾಲೆಯಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಬೋಧನಾ ಕಾರ್ಯ ಹೊರತುಪಡಿಸಿ ಬೇರೆ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಂದಿದ್ದು, ಶುಕ್ರವಾರ ಕೆಲವು ಮಕ್ಕಳು ನಮಾಜ್ ಮಾಡಿರುವುದನ್ನು ಶಿಕ್ಷಕರು ಖಚಿತಪಡಿಸಿದ್ದಾರೆ. ಇಲಾಖಾ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳ ವಿರುದ್ಧ ನಡೆಯ ಕುರಿತು ಬ್ಲಾಕ್ ಶಿಕ್ಷಣಾಧಿಕಾರಿ ದಿನೇಶ್ ಕಟಿಯಾರ್ ಅವರು ತನಿಖೆ ನಡೆಸಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ.
ತನಿಖಾ ವರದಿಯ ಆಧಾರದ ಮೇಲೆ ಶಾಲೆಯ ಪ್ರಾಂಶುಪಾಲೆ ಮೀರಾ ಯಾದವ್ ಅವರನ್ನು ಉತ್ತರ ಪ್ರದೇಶ ಸರ್ಕಾರಿ ಸೇವಕ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು-1999 ರ ಅಡಿಯಲ್ಲಿ ಶನಿವಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಲ್ಲದೇ, ತೆಹ್ಝೀನ್ ಫಾತಿಮಾ ಮತ್ತು ಮಮತಾ ಮಿಶ್ರಾ ಅವರಿಗೆ ಈ ಘಟನೆಗೆ ಸಂಬಂಧಿಸಿದಂತ ಖಡಕ್ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಾಲೆಯಲ್ಲಿ ಹಿಂದು ಮಕ್ಕಳಿಂದಲೂ ಪ್ರಾರ್ಥನೆ!
ನಾಲ್ಕು ತಿಂಗಳ ಹಿಂದೆ ಕರ್ನಾಟಕದ ಶಾಲೆಯೊಂದರಲ್ಲಿ ಇಂಥದ್ದೇ ಆರೋಪ ಕೇಳಿ ಬಂದಿತ್ತು. ಹಾಸನ ಜಿಲ್ಲೆ ಚನ್ನರಾಯ ಪಟ್ಟಣದ ಜ್ಞಾನ ಸಾಗರ ಇಂಟರ್ ನ್ಯಾಷನಲ್ ಶಾಲೆಯಲ್ಲಿ (Jnanasagara International school) ಕಳೆದ ಬಕ್ರೀದ್ ಹಬ್ಬದ ದಿನ (Eid al adha) ಸಾಮೂಹಿಕ ನಮಾಜ್ (Namaz in School) ನಡೆದಿತ್ತು. ಈ ವೇಳೆ ಹಿಂದೂ ವಿದ್ಯಾರ್ಥಿಗಳಿಂದಲೂ ನಮಾಜ್ ಮಾಡಿಸಲಾಗಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿದ್ದವು.
ಈ ಸುದ್ದಿಯನ್ನೂ ಓದಿ: Namaz in School : ಬಕ್ರೀದ್ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಹಿಂದು ಮಕ್ಕಳಿಂದಲೂ ಪ್ರಾರ್ಥನೆ!
ಜೂನ್ 29ರಂದು ಬಕ್ರೀದ್ ಹಬ್ಬವಿತ್ತು. ಅದರ ಹಿಂದಿನ ದಿನ ಶಾಲೆಯ ನೂರಾರು ಮಕ್ಕಳನ್ನು ಒಟ್ಟಿಗೆ ಸೇರಿಸಿ ಮುಸ್ಲಿಂ ಧರ್ಮದ ಶ್ಲೋಕ (Mass prayer) ಹೇಳಿಸಲಾಗಿದೆ ಎನ್ನುವುದು ಆರೋಪವಾಗಿತ್ತು. ಮಕ್ಕಳು ಸಾಮೂಹಿಕ ಪ್ರಾರ್ಥನೆ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಆಗ ವೈರಲ್ ಆಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆಯೆ ಶುಕ್ರವಾರ ಹಿಂದೂಪರ ಸಂಘಟನೆ ಕಾರ್ಯಕರ್ತರು ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದರು. ಶಾಲೆಯಲ್ಲಿ ಈ ರೀತಿ ಪ್ರಾರ್ಥನೆ ಮಾಡಿದ್ದೇ ತಪ್ಪು, ಹಿಂದೂ ಮಕ್ಕಳನ್ನು ಸೇರಿಸಿಕೊಂಡು ಮಾಡಿದ್ದಂತೂ ಇನ್ನೂ ದೊಡ್ಡ ತಪ್ಪು ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.