ಹೊಸದಿಲ್ಲಿ: ಮೋಚಾ ಚಂಡಮಾರುತ ಭಾನುವಾರ ರಾಜ್ಯದಿಂದ ಆಚೆಗೆ ಭೂಸ್ಪರ್ಶ ಮಾಡಿದ್ದು, ರಾಜ್ಯದ ಮೇಲೆ ವಿಶೇಷ ಪರಿಣಾಮ ಬೀರದೆ ಹೋಗಿದೆ. ಇದೀಗ ಈಗ ಎಲ್ಲರ ಕಣ್ಣು ನೈಋತ್ಯ ಮಾನ್ಸೂನ್ ಮೇಲೆ ನೆಟ್ಟಿದ್ದು, ಜೂನ್ ಮೊದಲ ವಾರದಲ್ಲಿ ಕೇರಳ ಕರಾವಳಿಯನ್ನು ಸ್ಪರ್ಶಿಸಲಿದೆ.
ನೈಋತ್ಯ ಮಾನ್ಸೂನ್ ಮೇ 20ರೊಳಗೆ ಅಂಡಮಾನ್ ಸಮುದ್ರವನ್ನು ತಲುಪುವ ನಿರೀಕ್ಷೆಯಿದೆ. ಮೇ 22ರಂದು ಸಂಪೂರ್ಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಆವರಿಸಲಿದೆ. ಜೂನ್ 1ರ ವೇಳೆಗೆ ಅಥವಾ ನಾಲ್ಕಾರು ದಿನಗಳ ಹಿಂದುಮುಂದಿನಲ್ಲಿ ಕೇರಳದ ಕರಾವಳಿಯನ್ನು ತಲುಪುವ ಸಾಧ್ಯತೆಯಿದೆ. ಇದೇ ವೇಳೆಯಲ್ಲಿಯೇ ರಾಜ್ಯದಲ್ಲೂ ಮೊದಲ ಮಳೆ ಆಗಮಿಸಲಿದೆ.
ಮಡಗಾಸ್ಕರ್ ದ್ವೀಪ ಪ್ರದೇಶದ ಬಳಿ ಅಧಿಕ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಮಾನ್ಸೂನ್‌ಗೆ ಮುಂಚಿತವಾಗಿ ಬಂಗಾಳ ಕೊಲ್ಲಿಯಲ್ಲಿ ಮೋಚಾ ಚಂಡಮಾರುತ ಸ್ವಲ್ಪ ಪ್ರಕ್ಷುಬ್ಧತೆ ಹುಟ್ಟುಹಾಕಿತ್ತು. ಸಾಮಾನ್ಯವಾಗಿ ಮಾನ್ಸೂನ್‌ಗೆ ಮುಂಚಿತವಾಗಿ ಬರುವ ಚಂಡಮಾರುತಗಳು ಮುಂಗಾರಿನ ಆರಂಭವನ್ನು ವಿಳಂಬಗೊಳಿಸುತ್ತವೆ. ಆದರೂ ಮೋಚಾ ಚಂಡಮಾರುತವು ಮಾನ್ಸೂನ್ ಮಾರುತಗಳ ಹುಟ್ಟಿಗೆ ಮುಂಚೆಯೇ ರೂಪುಗೊಂಡಿದ್ದರಿಂದ ಮಾನ್ಸೂನ್‌ನ ಮೇಲೆ ಮೋಚಾ ಹೆಚ್ಚು ಪ್ರಭಾವ ಬೀರಿಲ್ಲ. ಆದರೆ ಅಂಡಮಾನ್ ಬಳಿ ಮಾನ್ಸೂನ್ ಆಗಮನದ ಸಮಯದಲ್ಲಿ ಮತ್ತೊಂದು ಸೈಕ್ಲೋನ್ ರೂಪುಗೊಂಡರೆ, ಅದು ಮಾನ್ಸೂನ್ ಆರಂಭದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಹಿರಿಯ ವಿಜ್ಞಾನಿ ಹೇಳಿದ್ದಾರೆ.
ಮಧ್ಯ ಪೆಸಿಫಿಕ್‌ನಲ್ಲಿ ತಾಪಮಾನ ಏರಿಕೆಯ ವಿದ್ಯಮಾನವಾದ ʼಎಲ್ ನಿನೋ’ದ ಆತಂಕ ಈ ಬಾರಿ ಇದೆ. ಇದು ಕಡಿಮೆ ಮಳೆಯನ್ನು ಉಂಟುಮಾಡುತ್ತದೆ. ಆದರೆ ಈ ವರ್ಷ ಕೇರಳ ಸಾಕಷ್ಟು ಮಳೆಯನ್ನು ಪಡೆಯುವ ಸಾಧ್ಯತೆಯಿದೆ. ಎಲ್ ನಿನೊ ಪರಿಣಾಮ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕಡಿಮೆ ಮಳೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ದೇಶದ ಉತ್ತರ ಭಾಗಗಳಲ್ಲಿ ನಿರೀಕ್ಷೆಗಿಂತ ಅಧಿಕ ಮಳೆಯಾಗಲಿದೆ. ಜೂನ್ ಮತ್ತು ಜುಲೈನಲ್ಲಿ ಕೇರಳ ಹೆಚ್ಚಿನ ಮಳೆಯನ್ನು ಪಡೆಯಲಿದೆ.
ಇದನ್ನೂ ಓದಿ: Weather Report : ರಾಜ್ಯದಲ್ಲಿ ದುರ್ಬಲಗೊಂಡ ಮೋಚಾ; ಈ ಜಿಲ್ಲೆಗಳಿಗಷ್ಟೆ ಮಳೆ ಸೀಮಿತ