ನವದೆಹಲಿ: ನಮ್ಮ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾ, ಭಾರತೀಯ ರೂಪಾಯಿಯನ್ನು (Indian Rupee) ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಶ್ರೀಲಂಕಾದ ಬೆನ್ನಿಗೆ ಇನ್ನೂ ಒಂದಿಷ್ಟು ದೇಶಗಳು ಇದೇ ಹಾದಿಯನ್ನು ತುಳಿಯುವ ಸಾಧ್ಯತೆಗಳಿವೆ. ಶ್ರೀಲಂಕಾದಲ್ಲಿ ಭಾರತೀಯ ರೂಪಾಯಿ ಕರೆನ್ಸಿಯನ್ನು ವಿದೇಶಿ ಕರೆನ್ಸಿ ಎಂದು ಗುರುತಿಸಲು ಒಪ್ಪಿಗೆ ನೀಡುವಂತೆ ಸೆಂಟ್ರಲ್ ಬ್ಯಾಂಕ್ ಆಫ್ ಶ್ರೀಲಂಕಾ, ಭಾರತೀಯ ರಿಸರ್ವ್ ಬ್ಯಾಂಕ್(RBI)ಗೆ ಮನವಿ ಮಾಡಿಕೊಂಡಿದೆ. ಇದಕ್ಕಾಗಿ, ಶ್ರೀಲಂಕಾ ವೋಸ್ಟ್ರೋ ಎಂಬ ಸ್ಪೇಷಲ್ ರೂಪಿ ಟ್ರೇಡಿಂಗ್ ಖಾತೆಯನ್ನೂ ಆರಂಭಿಸಿದೆ.
ಒಂದೊಮ್ಮೆ ಭಾರತದ ರೂಪಾಯಿಯನ್ನು ಶ್ರೀಲಂಕಾ ತನ್ನ ವಿದೇಶಿ ವ್ಯಾಪಾರಕ್ಕೆ ಬಳಸಿಕೊಳ್ಳಲು ಆರಂಭಿಸಿದರೆ, ಡಾಲರ್ ಬದಲಿಗೆ ಭಾರತೀಯ ರೂಪಾಯಿಯನ್ನು ಶ್ರೀಲಂಕನ್ನರು ಬಳಸಬಹುದು. ಈಗಾಗಲೇ ಭಾರತವು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಬದಲಿಗೆ ರೂಪಾಯಿಯನ್ನು ಬಳಸಲು ಮುಂದಾಗುವ ರಾಷ್ಟ್ರಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ.
ಭಾರತದ ರೂಪಾಯಿ ಅನ್ನು ಕಾನೂನು ಕರೆನ್ಸಿಯಾಗಿ ಗುರುತಿಸುವುದರಿಂದ ಶ್ರೀಲಂಕಕ್ಕೆ ಹೆಚ್ಚು ಲಾಭವಿದೆ. ಡಾಲರ್ ಮೌಲ್ಯ ಹೆಚ್ಚಿರುವುದರಿಂದ ಶ್ರೀಲಂಕಕ್ಕೆ ಅಗತ್ಯವಿರುವ ಹಣದ ಹರಿವಿಗೆ ಭಾರತೀಯ ಕರೆನ್ಸಿ ನೆರವು ಒದಗಿಸುತ್ತದೆ. ಹಾಗಾಗಿ, ಶ್ರೀಲಂಕಾ ಡಾಲರ್ ಬದಲಿಗೆ ಭಾರತೀಯ ರೂಪಾಯಿಯನ್ನು ವಿದೇಶಿ ವ್ಯಾಪಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ.
ರಷ್ಯಾದ ಜತೆಗೆ ರೂಪಾಯಿಯಲ್ಲಿ ವ್ಯವಹರಿಸಲು ಭಾರತವು ಈಗಾಗಲೇ 12 ವೋಸ್ಟ್ರೋ ಖಾತೆಗಳ ಆರಂಭಕ್ಕೆ ಅನುಮತಿ ನೀಡಿದೆ. ಶ್ರೀಲಂಕಾದೊಂದಿಗಿನ ವ್ಯಾಪಾರಕ್ಕಾಗಿ ಐದು ಮತ್ತು ಮಾರಿಷಸ್‌ನೊಂದಿಗಿನ ವ್ಯಾಪಾರಕ್ಕಾಗಿ ಒಂದು ಸೇರಿದಂತೆ ಇತರ ಆರು ಖಾತೆಗಳನ್ನು ಸಹ ಅಧಿಕೃತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಜತೆಗೆ, ತಜಕಿಸ್ತಾನ್, ಕ್ಯೂಬಾ, ಲಕ್ಸೆಂಬರ್ಗ್ ಮತ್ತು ಸುಡಾನ್‌ನಂತಹ ದೇಶಗಳು ರೂಪಾಯಿ ಬಳಸಿಕೊಳ್ಳುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.
ಇದನ್ನೂ ಓದಿ | ವಿಸ್ತಾರ Explainer | ಡಾಲರ್‌ಗೆ ಭಾರತ-ರಷ್ಯಾ ಡೋಂಟ್ ಕೇರ್, ಇನ್ಮುಂದೆ ರೂಪಾಯಿ-ರುಬೆಲ್ ದರ್ಬಾರ್!