ಭುವನೇಶ್ವರಂ: ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ತಾರಕಕ್ಕೇರಿ ಹರಿತವಾದ ವಸ್ತುವಿನಿಂದ ಇರಿದಿರುವ ಘಟನೆ ಒಡಿಶಾ(Odisha)ದ ಗಂಜಂ ಜಿಲ್ಲೆಯಲ್ಲಿ ನಡೆದಿದೆ. ಒಂಬತ್ತನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತನಿಗೇ ಕೋಪದ ಭರದಲ್ಲಿ ಇರಿದಿ(Stabbing)ದ್ದಾನೆ. ಸಾನಕೆಮುಂಡಿ ಪ್ರದೇಶದಲ್ಲಿರುವ ರಘನಾಥಂ ಪ್ರೌಢ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ:
ಶಾಲೆಯಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳ ನಡುವೆ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಜಗಳ ಆಗಿತ್ತು. ಮಾತಿಗೆಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಒಬ್ಬ ವಿದ್ಯಾರ್ಥಿ ಕೋಪದ ಭರದಲ್ಲಿ ಹರಿತವಾದ ಸಾಧನದಿಂದ ಮತ್ತೋರ್ವನಿಗೆ ಚುಚ್ಚಿದ್ದಾನೆ. ಘಟನೆಯಲ್ಲಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ. ಮೊದಲಿಗೆ ಬಾಲಕನನ್ನು ಸೆರಗಢಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ MKCG ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಲು ಪ್ರಾಂಶುಪಾಲರೂ ನಿರಾಕರಿಸಿದ್ದಾರೆ.
ಬೆಂಗಳೂರಿನಲ್ಲೂ ಇಂತಹದ್ದೇ ಒಂದು ಘಟನೆ ಮೂರು ದಿನಗಳ ಹಿಂದೆ ನಡೆದಿತ್ತು. ಪರೀಕ್ಷಾ ಕೊಠಡಿಯ ಹೊರಗೆ ಬ್ಯಾಗ್ ಇಡುವ ವಿಚಾರಕ್ಕೆ ರಾಗಿ ಗುಡ್ಡ ಹಾಗೂ ಸಾರಕ್ಕಿ ಬಳಿ ಇರುವ ಶಾಲಾ ವಿದ್ಯಾರ್ಥಿಗಳ ನಡುವೆ ಕಿರಿಕ್ ನಡೆದಿದೆ. ಪರೀಕ್ಷೆ ಮಗಿಸಿ ಮನೆಗೆ ಹೋಗುವಾಗ ಎರಡು ಶಾಲೆಗಳ ಮಕ್ಕಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಂದಿದ್ದ ಎರಡು ಶಾಲೆಯ ಮಕ್ಕಳು, ಪರೀಕ್ಷಾ ಕೇಂದ್ರದಲ್ಲಿ ಜಗಳ ನಡೆಸಿದ್ದಾರೆ. ಒಳಗೆ ಜಗಳವಾಡಿ ಅದೇ ದ್ವೇಷದಿಂದ ಹಿಂಬಾಲಿಸಿ ಬಂದಿದ್ದ ರಾಗಿ ಗುಡ್ಡ ಬಳಿ ಇರುವ ಶಾಲಾ ಬಾಲಕರು, ನಂತರ ಸಾರಕ್ಕಿ ಬಳಿ ಇರುವ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿದು ಪರಾರಿ ಆಗಿದ್ದಾರೆ.
ಬುಧವಾರ ಮಧ್ಯಾಹ್ನ 1-45ಕ್ಕೆ ಘಟನೆ ನಡೆದಿದ್ದು, ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಎಲ್ಲ ಬಾಲಕರ ಮೇಲೂ ಕೊಲೆ ಯತ್ನ ಪ್ರಕರಣದಡಿ ಪ್ರಕರಣ ದಾಖಲಿಸಿದ್ದಾರೆ. ಪುಸ್ತಕ ಹಿಡಿಯಬೇಕಿದ್ದ ಕೈಗಳಿಗೆ ಈಗ ಕೋಳ ಬಿದ್ದಿದೆ.
ಕಳೆದ ವರ್ಷ ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನು ರೇಗಿಸಬೇಡಿ ಈ ರೀತಿ ರೇಗಿಸೋದ್ರಿಂದ ನಿಮಗೆ ಕೆಟ್ಟ ಹೆಸರು ಬರುವುದಲ್ಲದೇ ಕಾಲೇಜಿಗೂ ಕೆಟ್ಟ ಹೆಸರು ಬರುತ್ತೆ ಅಂತ ಬುದ್ಧಿವಾದ ಹೇಳಿದಕ್ಕೆ ಸಹಪಾಠಿಯನ್ನೇ ಚಾಕುವಿನಿಂದ ಇರಿದಿರುವ ಘಟನೆ ಜಯನಗರದಲ್ಲಿ ನಡೆದಿತ್ತು.
ವಿದ್ಯಾರ್ಥಿಗೆ ಚಾಕು ಇರಿದಿರುವ ಸಹಪಾಠಿಗಳು ನಮಗೆ ಬುದ್ಧಿವಾದ ಹೇಳ್ತಿಯಾ? ನಾವು ನಿನ್ನಂತೆಯೇ ಈ ಕಾಲೇಜಿಗೆ ಸೇರಿಕೊಂಡಿರೋದು, ನಮ್ಮ ಇಷ್ಟ ಬಂದ ಹಾಗೇ ಮಾಡ್ತೀವಿ ಅಂತ ಕ್ಯಾತೆ ತೆಗೆದಿದ್ದಾರೆ. ಆದರೆ ಇದನ್ನು ವಿದ್ಯಾರ್ಥಿ ವಿರೋಧಿಸಿದ್ದಕ್ಕಾಗಿ ಕಾಲೇಜಿನಲ್ಲಿ ಗಲಾಟೆ ಮಾಡಿಕೊಂಡಿದ್ದರು. ವಿಜಯ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜಗಳ ತಿಳಿದು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ. ಈ ವಿಚಾರಕ್ಕೆ ಬೇಸರವಾಗಿದ್ದರಿಂದ ಸೇಡು ತೀರಿಸಿಕೊಳ್ಳಲಿಕ್ಕಾಗಿ ವಿದ್ಯಾರ್ಥಿಯ ಮೇಲೆ ಚಾಕು ಚುಚ್ಚಿ ಪರಾರಿಯಾಗಿದ್ದಾರೆ. ವಿಚಾರ ತಿಳಿದ ಪೊಲೀಸರು ಬಾಲಾಪರಾಧಿಗಳನ್ನು ಬಂಧಿಸಿದ್ದರು.
ಇದನ್ನೂ ಓದಿ: Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!