Site icon Vistara News

Stone Quarry Collapses: ಕಲ್ಲಿನ ಗಣಿ ಕುಸಿದು 10 ಮಂದಿ ಜೀವಂತ ಸಮಾಧಿ; ರಕ್ಷಣಾ ಕಾರ್ಯಾಚರಣೆಗೆ ಭೀಕರ ಮಳೆ ಅಡ್ಡಿ

Stone Quarry Collapses

Stone Quarry Collapses

ಐಜ್ವಾಲ್:‌ ರಣ ಭೀಕರ ಮಳೆಗೆ ದೇಶದ ಕೆಲವೊಂದು ಭಾಗಗಳು ತತ್ತರಿಸಿ ಹೋಗಿವೆ. ಈಗಾಗಲೇ ಅನೇಕ ಅನಾಹುತ ನಡೆದು ಹಲವು ಮಂದಿ ಪ್ರಾಣ ತೆತ್ತಿದ್ದಾರೆ. ಇನ್ನು ಮಿಜೋರಾಂನಲ್ಲಿ ಇಂದು (ಮೇ 28) ಭೀಕರ ಅವಘಡವೊಂದು ಸಂಭವಿಸಿದ್ದು, ಕಲ್ಲಿನ ಗಣಿ ಕುಸಿದು (Stone Quarry Collapses) ಕನಿಷ್ಠ 10 ಮಂದಿ ಮೃತಪಟ್ಟು, ಹಲವು ಮಂದಿ ನಾಪತ್ತೆಯಾಗಿದ್ದಾರೆ.

ಮಿಜೋರಾಂನ ಐಜ್ವಾಲ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ʼʼಭೀಕರ ಮಳೆ ಕಾರಣದಿಂದ ಗಣಿ ಕುಸಿದು ಇದರಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಹತ್ತು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆʼʼ ಎಂದು ಮೂಲಗಳು ತಿಳಿಸಿವೆ.

ಮಳೆ ಅಡ್ಡಿ

“ಈ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆ ಮತ್ತು ಭೂ ಕುಸಿತ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ. ಮಂಗಳವಾರ ಬೆಳಿಗ್ಗೆ 6ರ ಸುಮಾರಿಗೆ ಐಜ್ವಾಲ್‌ ನಗರದ ಹೊರ ವಲಯದಲ್ಲಿರುವ ಮೆಲ್ಥುಮ್‌ ಮತ್ತು ಹ್ಲಿಮೆನ್‌ ಪ್ರದೇಶದ ನಡುವಿನ ಕಲ್ಲಿನ ಗಣಿಯಲ್ಲಿ ಈ ದುರಂತ ಸಂಭವಿಸಿದೆ.

ಸದ್ಯ 5 ಮೃತದೇಹವನ್ನು ಹೊರ ತೆಗೆಯಲಾಗಿದೆ. ಸುರಿಯುತ್ತಿರುವ ಮಳೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಭೂಕುಸಿತ ಸಂಭವಿಸುತ್ತಿದೆ. ಹಂಥಾರ್‌ ಬಳಿ ರಾಷ್ಟ್ರೀಯ ಹೆದ್ದಾರಿ 6ಕ್ಕೆ ಮಣ್ಣು ಜರಿದು ಬಿದ್ದು ಇತರ ಪ್ರದೇಶಗಳೊಂದಿಗಿನ ಐಜ್ವಾಲ್‌ನ ಸಂಪರ್ಕ ಕಡಿತಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದರ ಜತೆಗೆ ವಿವಿಧ ಕಡೆಗಳ ರಸ್ತೆ ಸಂಪರ್ಕವೂ ಕಡಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮಳೆಯ ಕಾರಣದಿಂದ ಶಾಲಾ-ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ. ಜತೆಗೆ ಸರ್ಕಾರಿ ಉದ್ಯೋಗಿಗಳು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವ ನೌಕರರನ್ನು ಹೊರತು ಪಡಿಸಿ ಉಳಿದವರೆಲ್ಲ ಮನೆಯಲ್ಲೇ ಕಾರ್ಯ ನಿರ್ವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

ಪಪುವಾ ನ್ಯೂಗಿನಿಯಾದಲ್ಲಿ ಭೂಕುಸಿತ; ಮೃತರ ಸಂಖ್ಯೆ 2,000ಕ್ಕೆ ಏರಿಕೆ

ಪಪುವಾ ನ್ಯೂಗಿನಿಯಾದಲ್ಲಿ ಕಂಡು ಕೇಳರಿಯದ ಭೂಕುಸಿತ ಸಂಭವಿಸಿದ ಬೆನ್ನಿಗೇ ಈ ದುರಂತ ನಡೆದಿದೆ. ನ್ಯೂಗಿನಿಯಾದ ದುರಂತದಲ್ಲಿ ಸಾವಿನ ಸಂಖ್ಯೆ 2,000ಕ್ಕೆ ಏರಿಕೆಯಾಗಿದೆ. ಸಾವಿರಾರು ಜನ ಗಾಯಗೊಂಡಿದ್ದು, ನೂರಾರು ಜನ ಭೂಮಿ ಅವಶೇಷಗಳ ಅಡಿಯಲ್ಲಿ ಹುದುಗಿಹೋಗಿದ್ದಾರೆ. ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಪಪುವಾ ನ್ಯೂಗಿನಿಯಾದಲ್ಲಿ ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಭೀಕರ ದುರಂತ ಇದಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಭಾರತ ಸೇರಿದಂತೆ ವಿವಿಧ ದೇಶಗಳು ನೆರವಿನ ಹಸ್ತ ಚಾಚಲು ಮುಂದೆ ಬಂದಿವೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಂದರಲ್ಲಿ ಭೂಕುಸಿತ, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಎಂಗಾ ಪ್ರದೇಶದಲ್ಲಿ ಸಂಪೂರ್ಣವಾಗಿ ಭೂಕುಸಿತಕ್ಕೆ ತುತ್ತಾಗಿದೆ. ಸಾವಿನ ಸಂಖ್ಯೆ 2000ಕ್ಕೆ ಏರಿಕೆಯಾಗಿದೆ. 150 ಮನೆಗಳು ಭೂಮಿಯಲ್ಲಿ ಹುದುಗಿಹೋಗಿವೆ. ಮಳೆಯ ನೀರು ಇನ್ನೂ ಹರಿಯುತ್ತಿರುವ ಕಾರಣ ಜನರ ರಕ್ಷಣೆಯು ಕಷ್ಟವಾಗುತ್ತಿದೆ. ಸಾವಿರಾರು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯು ಮಾಹಿತಿ ನೀಡಿದೆ.

Exit mobile version