ನವದೆಹಲಿ: ಬೀದಿ ನಾಯಿ ದಾಳಿಯಿಂದ 2 ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ತುಘಲಕಾಬಾದ್‌ನಲ್ಲಿ ನಡೆದಿದೆ (Stray Dog Attacks). ಬೀದಿ ನಾಯಿಗಳ ಗುಂಪು ಈ ಮಗುವಿನ ವೇಳೆ ಏಕಾಏಕಿ ದಾಳಿ ಮಾಡಿದ್ದವು. ತೀವ್ರ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ
ಬಾಲಕಿಯ ಪೋಷಕರು ಬಟ್ಟೆ ಒಗೆಯುವ ಕೆಲಸ ನಿರ್ವಹಿಸುತ್ತಿದ್ದು, ತುಘಲಕ್ ಲೇನ್‌ನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಶನಿವಾರ (ಫೆಬ್ರವರಿ 24) ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಪೊಲೀಸರು ಸ್ಥಳಕ್ಕೆ ತಲುಪಿದಾಗ, ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಗೆ ತೆರಳಿದಾಗ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರುʼʼ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಂಜೆ 6.30ರ ಸುಮಾರಿಗೆ ಬಾಲಕಿ ಆಟವಾಡಲು ಮನೆಯಿಂದ ಹೊರ ಬಂದಿದ್ದಳು ಎಂದು ಬಾಲಕಿಯ ಚಿಕ್ಕಪ್ಪ ಟೇಕ್ ಚಂದ್ ಹೇಳಿದ್ದಾರೆ. “ಐದು ನಾಯಿಗಳು ಏಕಕಾಲಕ್ಕೆ ಅವಳ ಮೇಲೆ ದಾಳಿ ಮಾಡಿದಾಗ ಅವಳು ಮನೆಯಿಂದ ಕೆಲವೇ ಮೀಟರ್ ದೂರದಲ್ಲಿದ್ದಳು. ನಾಯಿಗಳ ಗುಂಪು ಅವಳನ್ನು ಕಚ್ಚಿ ಧೋಬಿ ಘಾಟ್‌ನ ಕಡೆಗೆ ಸುಮಾರು 100 ಮೀಟರ್ ದೂರಕ್ಕೆ ಎಳೆದಿವೆ” ಎಂದು ಅವರು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.
ʼʼಈ ವೇಳೆ ನಾವ್ಯಾರು ಸ್ಥಳದಲ್ಲಿ ಇರಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಎಚ್ಚರಿಕೆ ನೀಡಿದ ನಂತರ ಸ್ಥಳೀಯರು ಮತ್ತು ಮನೆಯವರು ಆ ಹುಡುಗಿಯ ರಕ್ಷಿಸಲು ಹೊರಗೆ ಧಾವಿಸಿದೆವುʼʼ ಎಂದು ಚಾಂದ್ ಹೇಳಿದ್ದಾರೆ. ಚಾಂದ್ ಮತ್ತು ಸ್ಥಳೀಯ ನಿವಾಸಿಗಳ ಪ್ರಕಾರ ಈ ನಾಯಿಗಳಿಗೆ ಹತ್ತಿರದ ಬಂಗಲೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಆಶ್ರಯ ನೀಡುತ್ತಿದ್ದಾರಂತೆ. “ಸುಮಾರು ಒಂದು ತಿಂಗಳ ಹಿಂದೆ, ಇದೇ ನಾಯಿಗಳು ಈ ಪ್ರದೇಶದಲ್ಲಿ ಮತ್ತೊಂದು ಮಗುವಿನ ಮೇಲೆ ದಾಳಿ ಮಾಡಿದ್ದವು” ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ದೇವೇಶ್ ಮಹ್ಲಾ ತಿಳಿಸಿದ್ದಾರೆ. “ನಾವು ಪೋಷಕರಿಂದ ದೂರು ಸ್ವೀಕರಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ. ಬೀದಿ ನಾಯಿಗಳ ಹಾವಳಿ ಬಗ್ಗೆ ತುಘಲಕ್ ಲೇನ್ ಕೊಳೆಗೇರಿ ನಿವಾಸಿಗಳ ದೂರನ್ನು ಪರಿಶೀಲಿಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Dog Attack: ಬೆಳಗಾವಿಯಲ್ಲಿ ಬೀದಿ ನಾಯಿಗಳ ದಾಳಿ; 4 ಮಕ್ಕಳಿಗೆ ಗಾಯ
ರಾಜ್ಯದಲ್ಲೂ ಬೀದಿ ನಾಯಿಗಳ ಹಾವಳಿ
ಇತ್ತೀಚೆಗೆ ರಾಜ್ಯದಲ್ಲಿಯೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಚಿತ್ರದುರ್ಗ ನಗರದಲ್ಲಿ ನಾಯಿ ಕಡಿತಕ್ಕೆ 10 ವರ್ಷದ ಬಾಲಕನೋರ್ವ ಮೃತಪಟ್ಟಿದ್ದ. ಮೆದೇಹಳ್ಳಿಯ ತರುಣ್ ಮೃತ ಬಾಲಕ. ನಾಯಿಗಳ ಗುಂಪಿನಿಂದ ದಾಳಿಗೊಳಗಾಗಿ ತೀವ್ರ ಗಾಯಗೊಂಡಿದ್ದ ತರುಣ್ 15 ದಿನಗಳ ಕಾಲ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದ.