ನವ ದೆಹಲಿ: ನರೇಂದ್ರ ಮೋದಿ ಅವರು ಅಡಾಲ್ಫ್ ಹಿಟ್ಲರ್‌ನಂತೆ ನಡೆದುಕೊಂಡರೆ ಹಿಟ್ಲರ್‌ನಂತೆಯೇ ಸಾಯುತ್ತಾರೆ ಎಂದು ಕಾಂಗ್ರೆಸ್ ನಾಯಕ ಸುಬೋಧ್ ಕಾಂತ್ ಸಹಾಯ್ ಸೋಮವಾರ ಹೇಳಿದ್ದು, ಈ ಹೇಳಿಕೆ ವಿವಾದ ಎಬ್ಬಿಸಿದೆ.
ಇತ್ತೀಚೆಗೆ ಘೋಷಿಸಲಾದ ಅಗ್ನಿಪಥ್ ಯೋಜನೆ ಮತ್ತು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸುತ್ತಿರುವ ಬಗ್ಗೆ ನಡೆದಿರುವ ಕಾಂಗ್ರೆಸ್‌ನ ಆಂದೋಲನದ ಹಿನ್ನೆಲೆಯಲ್ಲಿ ಮಾತನಾಡಿರುವ ಸಹಾಯ್, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪಕ್ಷದ ಸತ್ಯಾಗ್ರಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ʼʼಪ್ರಧಾನಿ ನರೇಂದ್ರ ಮೋದಿ ಅವರು ಹಿಟ್ಲರ್ ಅವರ ಮಾರ್ಗವನ್ನು ಅನುಸರಿಸಿದರೆ, ಹಾಗೇ ಮರಣವನ್ನು ಕಾಣುತ್ತಾರೆ. ಪ್ರಧಾನಿ ಮೋದಿ ಹಿಟ್ಲರ್‌ನ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆʼʼ ಎಂದರು.
ನಂತರ, ʼʼನರೇಂದ್ರ ಮೋದಿಯವರನ್ನು ಕೇಳಿ, ಅವರೂ ಈ ಘೋಷಣೆಯನ್ನು ಹೇಳಿದ್ದಾರೆ. ಅದೊಂದು ಸ್ಲೋಗನ್- ಜೋ ಹಿಟ್ಲರ್ ಕಿ ಚಾಲ್ ಚಲೇಗಾ, ವೋ ಹಿಟ್ಲರ್ ಕಿ ಮೌತ್ ಮರೇಗಾ. ಅವರು ಯಾವ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದು ಅವರನ್ನು ಕೇಳಿ” ಎಂದರು. ಅಡಾಲ್ಫ್ ಹಿಟ್ಲರ್, ಜರ್ಮನಿಯ ಮಾಜಿ ಅಧ್ಯಕ್ಷ, ಎರಡನೇ ಮಹಾಯುದ್ಧ ಹಾಗೂ ಲಕ್ಷಾಂತರ ಮಂದಿಯ ಮರಣಕ್ಕೆ ಕಾರಣನಾಗಿದ್ದ ಸರ್ವಾಧಿಕಾರಿಯಾಗಿದ್ದ.
ಸಹಾಯ್ ಮಾಜಿ ಕೇಂದ್ರ ಸಚಿವ. ಜಾರ್ಖಂಡ್‌ನ ರಾಂಚಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2012ರಲ್ಲಿ ಯುಪಿಎ ಸರ್ಕಾರದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಲ್ಲಿದ್ದಲು ಹಗರಣದಲ್ಲಿ ಅವರ ಹೆಸರು ಬಂದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಹಾಯ್ ರಾಜೀನಾಮೆ ಪಡೆದುಕೊಂಡಿದ್ದರು.
ಇದನ್ನೂ ಓದಿ: ಮೂರೂ ಸೇನಾ ಮುಖ್ಯಸ್ಥರಿಂದ ನಾಳೆ ಪ್ರಧಾನಿ ಮೋದಿ ಭೇಟಿ, ಅಗ್ನಿಪಥ್ ಚರ್ಚೆ