Site icon Vistara News

ಜನರ ಹಠಾತ್ ಸಾವಿಗೆ ಕೋವಿಡ್-19 ಲಸಿಕೆ ಕಾರಣವಲ್ಲ! ಐಸಿಎಂಆರ್ ಅಧ್ಯಯನ ವರದಿ

Sudden death of youth is not caused by Covid-19 vaccine Says ICMR Report

ನವದೆಹಲಿ: ಭಾರತೀಯರ ಯುವಕರಲ್ಲಿ (Indian Youth adults) ಹೆಚ್ಚುತ್ತಿರುವ ಹೃದಯಾಘಾತಕ್ಕೆ (Sudden Death) ಕೋವಿಡ್-19 ಲಸಿಕೆ ಕಾರಣವಲ್ಲ (Covid Vaccine) ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ICMR) ಸ್ಪಷ್ಟಪಡಿಸಿದೆ. ಕೋವಿಡ್ ಲಸಿಕೆಗಳಿಂದಾಗಿಯೇ ಯುವಕರು ಹಠಾತ್ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಐಸಿಎಂಆರ್ ಅಧ್ಯಯನ ನಡೆಸಿ ತನ್ನ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿದೆ. ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು, ಹಠಾತ್ ಸಾವಿನ ಕುಟುಂಬದ ಇತಿಹಾಸ ಮತ್ತು ಕೆಲವು ಜೀವನಶೈಲಿ ನಡವಳಿಕೆಗಳು ಭಾರತದಲ್ಲಿ ಯುವಕರಲ್ಲಿ ಹಠಾತ್ ಸಾವಿನ ಸಂಭವವನ್ನು ಹೆಚ್ಚಿಸಿವೆ ಎಂದು ವೈದ್ಯಕೀಯ ಸಂಶೋಧನಾ ಸಂಸ್ಥೆ ಹೇಳಿದೆ.

‘ಭಾರತದಲ್ಲಿ 18-45 ವರ್ಷ ವಯಸ್ಸಿನ ವಯಸ್ಕರಲ್ಲಿ ಹಠಾತ್ ಸಾವುಗಳಿಗೆ ಸಂಬಂಧಿಸಿದ ಅಂಶಗಳು’ ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಲಾದ ವರದಿಯಲ್ಲಿ ಕೋವಿಡ್ 19 ವ್ಯಾಕ್ಸಿನೇಷನ್ ಭಾರತದಲ್ಲಿ ಯುವ ವಯಸ್ಕರಲ್ಲಿ ವಿವರಿಸಲಾಗದ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸಿಲ್ಲ. ಕೋವಿಡ್ 19 ಚಿಕಿತ್ಸೆಗಾಗಿ ಆಸ್ಪತ್ರೆಗ ದಾಖಲಾಗಿದ್ದರೆ, ಹಠಾತ್ ಸಾವಿನ ಕುಟುಂಬದ ಇತಿಹಾಸ ಮತ್ತು ಕೆಲವು ಜೀವನಶೈಲಿಯ ನಡವಳಿಕೆಗಳು ವಿವರಿಸಲಾಗದ ಹಠಾತ್ ಸಾವಿನ ಸಾಧ್ಯತೆಯನ್ನು ಹೆಚ್ಚಿಸಿವೆ ಎಂದು ತಿಳಿಸಲಾಗಿದೆ.

ಆರೋಗ್ಯವಂಥ ಯುವ ವಯಸ್ಕರು ಹಠಾತ್ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ವರದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಶೋಧಕರು ಈ ಕುರಿತು ತನಿಖೆ ನಡೆಸಿದ್ದಾರೆ. ಕೋವಿಡ್-19 ಅಥವಾ ಕೋವಿಡ್ ಲಸಿಕೆ ಪರಿಣಾಮವೇ ಯುವ ವಯಸ್ಕರು ಹಠಾತ್ ಸಾವಿಗೀಡಾಗುತ್ತಿದ್ದಾರೆಂಬ ಚರ್ಚೆಗೆ ಈ ವರದಿಗಳು ಪುಷ್ಟಿ ನೀಡಿದ್ದವು. ಆದರೆ, ಐಸಿಎಂಆರ್ ಈ ಎಲ್ಲ ಚರ್ಚೆಗಳಿಗೆ ಪೂರ್ಣವಿರಾಮ ನೀಡಿದೆ.

18ರಿಂದ 45 ವರ್ಷದೊಳಗಿನ ಭಾರತೀಯ ಯುವ ವಯಸ್ಕರ ವಿವರಿಸಲಾಗದ ಹಠಾತ್ ಸಾವಿನ ವರದಿಗಳ ಕುರಿತು ಐಸಿಎಂಆರ್ ಅಧ್ಯಯನ ನಡೆಸಿದೆ. ಸಂಶೋಧಕರು 729 ಪ್ರಕರಣಗಳು ಮತ್ತು 2,916 ನಿಯಂತ್ರಣಗಳನ್ನು ಅಧ್ಯನಕ್ಕೆ ಬಳಸಿಕೊಂಡಿದ್ದಾರೆ. ಇಲ್ಲಿ ಅಧ್ಯಯನ ಮಾಡಲಾದ ಪ್ರಕರಣಗಳು 18-45 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಯಾವುದೇ ಸಹ-ಅಸ್ವಸ್ಥತೆಗಳಿಲ್ಲದೆ, ಅವರು 2021 ಅಕ್ಟೋಬರ್ 1ರಿಂದ 2013 ಮಾರ್ಚ್ 31ರ ನಡುವೆ ನಾನಾ ಕಾರಣಗಳಿಂದ ಹಠಾತ್ತನೆ ಮೃತಪಟ್ಟವರಾಗಿದ್ದಾರೆ.

ವಯಸ್ಕರಲ್ಲಿ ವಿವರಿಸಲಾಗದ ಹಠಾತ್ ಸಾವುಗಳ ಹೆಚ್ಚಳಕ್ಕೆ ಗುರುತಿಸಲಾದ ಕೆಲವು ಕಾರಣಗಳೆಂದರೆ; ಹಠಾತ್ ಸಾವಿನ ಕುಟುಂಬದ ಇತಿಹಾಸ, ಸಾವಿಗೆ ಮುಂಚೆ 48 ಗಂಟೆಗಳ ಮೊದಲು ಅತಿಯಾದ ಮದ್ಯಪಾನ, ಮನರಂಜನಾ ಡ್ರಗ್ಸ್/ವಸ್ತುಗಳನ್ನು ಬಳಸುವುದು ಮತ್ತು ತೀವ್ರ ದೈಹಿಕ ಚಟುವಟಿಕೆಗಳನ್ನು ಮಾಡುವುದು ಕಾರಣವಾಗಿರಬಹುದು. ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದುಕೊಂಡಿರುವರು ಹೃದಯಾಘಾತದ ಕಡಿಮೆ ಅಪಾಯವನ್ನು ಹೊಂದಿರುತ್ತಾರೆ. ಆದರೆ, ಸಿಂಗಲ್ ಡೋಸ್ ತೆಗೆದುಕೊಂಡವರಿಗೆ ಇದು ಸಾಧ್ಯವಿಲ್ಲ ಎಂದು ಐಸಿಎಂಆರ್ ತನ್ನ ವರದಿಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Nobel Prize 2023: ಕೋವಿಡ್ ಲಸಿಕೆ ಅಭಿವೃದ್ಧಿಗೆ ಕಾರಣರಾದ ಇಬ್ಬರಿಗೆ ವೈದ್ಯಕೀಯ ನೊಬೆಲ್ ಅವಾರ್ಡ್!

Exit mobile version