ನವದೆಹಲಿ: ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾ ಮೂರ್ತಿ (Sudha Murty) ಅವರು ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. “ನಾನು ರಾಜಕಾರಣಿ ಅಲ್ಲ. ನನಗೆ ಹೆಚ್ಚು ಮಾತನಾಡಲು ಬರುವುದಿಲ್ಲ” ಎನ್ನುತ್ತಲೇ ಭಾಷಣ ಆರಂಭಿಸಿದ ಅವರು ಗರ್ಭಕಂಠ ಕ್ಯಾನ್ಸರ್‌ಗೆ (Cervical Cancer) ಲಸಿಕೆ ಹಾಗೂ ಕರ್ನಾಟಕ (Karnataka) ಸೇರಿ ದೇಶದ ಪ್ರವಾಸೋದ್ಯಮದ ಏಳಿಗೆಯ ಕುರಿತು ಸದನದ ಗಮನಕ್ಕೆ ತಂದರು. ಕರ್ನಾಟಕ ಪ್ರವಾಸೋದ್ಯಮದ ಕುರಿತೂ ಅವರು ಹೆಚ್ಚು ಗಮನ ಸೆಳೆದರು.
“ಗರ್ಭಕಂಠದ ಕ್ಯಾನ್ಸರ್ ಈಗ ಮಾರಣಾಂತಿಕವಾಗಿದೆ. ಒಬ್ಬ ತಾಯಿ ಮೃತಪಟ್ಟರೆ ಮಕ್ಕಳು ಅನಾಥರಾಗುತ್ತಾರೆ. ಒಬ್ಬ ವ್ಯಕ್ತಿಗೆ ಹೆಂಡತಿ ತೀರಿಕೊಂಡರೆ ಮತ್ತೊಬ್ಬ ಪತ್ನಿ ಸಿಗುತ್ತಾಳೆ. ಆದರೆ, ಮಕ್ಕಳಿಗೆ ತಾಯಿ ತೀರಿಕೊಂಡರೆ, ಜೀವನಪೂರ್ತಿ ಅವರು ಅನಾಥರಾಗುತ್ತಾರೆ. ಹಾಗಾಗಿ, ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಈಗ ಲಸಿಕೆಗೆ 1,300-1,400 ರೂ. ಆಗುತ್ತದೆ. ಸರ್ಕಾರ ಮಧ್ಯಪ್ರವೇಶಿಸಿದರೆ ಅದನ್ನು 800 ರೂಪಾಯಿಗೆ ಹೆಣ್ಣುಮಕ್ಕಳಿಗೆ ಲಸಿಕೆ ಕೊಡಿಸಬಹುದು” ಎಂದರು. ಆಗ ಸಭಾಧ್ಯಕ್ಷರು, “ಈ ಕುರಿತು ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ ನಡ್ಡಾ ಅವರ ಗಮನಕ್ಕೆ ತನ್ನಿ” ಎಂದರು.
Listen to Sudha Murthy on her maiden speech in Rajya Sabha. A real gem and worthy candidate. She talks about cervical cancer and tourism in India. We need such ppl to represent us @narendramodi ji pic.twitter.com/Z36UkshqIK
— SanghiDentico🇮🇳,🚩🚩🕉️ (@priyathedentico) July 2, 2024
ಪ್ರವಾಸೋದ್ಯಮದ ಕುರಿತು ಹೇಳಿದ್ದಿಷ್ಟು…
“ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಆದ್ಯತೆ ನೀಡಬೇಕು. ದೇಶದಲ್ಲಿ ಅಜಂತಾ, ಎಲ್ಲೋರ, ಬೃಹದೀಶ್ವರ, ತಾಜ್‌ಮಹಲ್ ನೋಡಬೇಕು ಎಂಬ ಮಾತಿದೆ. ಆದರೆ, ಭಾರತದಲ್ಲಿ 42 ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಇನ್ನೂ 57 ತಾಣಗಳು ಪೆಂಡಿಂಗ್ ಲಿಸ್ಟ್‌ನಲ್ಲಿವೆ. ಇವುಗಳ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕದ ಶ್ರವಣಬೆಳಗೋಳದಲ್ಲಿರುವ ಬಾಹುಬಲಿಯ ಮೂರ್ತಿ, ಮಧ್ಯಪ್ರದೇಶದ ಮಾಂಡು, ದೇಶದ ಗುಹೆಗಳು, ಬಾದಾಮಿ, ಐಹೊಳೆ, ಲಿಂಗರಾಜ ದೇವಾಲಯಗಳು ದೇಶದ ಸಂಸ್ಕೃತಿಯ ತಾಣಗಳಾಗಿವೆ. ಇವುಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು” ಎಂದರು.
“ತ್ರಿಪುರದಲ್ಲಿರುವ ಉನಾಕೋಟಿ, ಮಿಜೋರಾಂನಲ್ಲಿ ನೈಸರ್ಗಿಕ ಸೇತುವೆಗಳಿವೆ. ಇವುಗಳನ್ನು ನೋಡಲು ವಿದೇಶಕ್ಕೆ ಹೋಗುವವರಿದ್ದಾರೆ. ತಂಜಾವೂರಿನ ಬೃಹದೇಶ್ವರ ದೇವಾಲಯ, ಶ್ರೀರಂಗಂ, ಕಾಶ್ಮೀರದಲ್ಲಿರುವ ಮೊಘಲ್ ಗಾರ್ಡನ್‌ಗಳು ಜಗತ್ತಿನ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇಲ್ಲ. ಇವುಗಳನ್ನು ಪಟ್ಟಿಗೆ ಸೇರಿಸುವುದರಿಂದ ಆ ಸ್ಥಳಗಳಿಗೆ ಜನರನ್ನು ಸೆಳೆಯಲು ಪ್ಯಾಕೇಜ್‌ಗಳನ್ನು ಘೋಷಿಸಲಾಗುತ್ತದೆ. ಇದರಿಂದ ಪ್ರವಾಸೋದ್ಯಮದ ಆದಾಯ ಹೆಚ್ಚಾಗುತ್ತದೆ. ಹತ್ತಾರು ಅವಕಾಶಗಳು ಸೃಷ್ಟಿಯಾಗುತವೆ” ಎಂದು ಹೇಳಿದರು.
ಇದನ್ನೂ ಓದಿ: Narendra Modi: ನನ್ನ ದನಿಯೂ ಗಟ್ಟಿಯಿದೆ, ಸಂಕಲ್ಪವೂ; ಈ ಮೋದಿ ಯಾರಿಗೂ ಹೆದರಲ್ಲ, ಬಗ್ಗಲ್ಲ: ಸಂಸತ್‌ನಲ್ಲಿ ಪ್ರಧಾನಿ ಅಬ್ಬರ