Site icon Vistara News

Siddique Kappan | ಯುಪಿನಲ್ಲಿ ಬಂಧಿತನಾಗಿದ್ದ ಪತ್ರಕರ್ತ ಕಪ್ಪನ್‌ಗೆ 2 ವರ್ಷದ ಬಳಿಕ ಸುಪ್ರೀಂ ಜಾಮೀನು

Supreme Court

ನವ ದೆಹಲಿ: 2020ರಲ್ಲಿ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತರಾಗಿರುವ ಕೇರಳದ ಪತ್ರಕರ್ತ ಸಿದ್ಧಿಕಿ ಕಪ್ಪನ್ (Siddique Kappan) ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಪ್ರತಿಯೊಬ್ಬರೂ ಅಭಿವ್ಯಕ್ತಿ ಸ್ವಾತ್ಯಂತ್ರ್ಯವನ್ನು ಹೊಂದಿದ್ದಾರೆಂದು ಕೋರ್ಟ್ ತಿಳಿಸಿದೆ.

ಹತ್ರಾಸ್ ದಲಿತ ಮಹಿಳೆ ಗ್ಯಾಂಗ್ ರೇಪ್ ಪ್ರಕರಣದ ಕುರಿತು ಎರಡು ವರ್ಷದ ಹಿಂದೆ ವರದಿ ಮಾಡಲು ಕೇರಳದಿಂದ ಸಿದ್ಧಿಕಿ ಕಪ್ಪನ್ ಅವರು ಉತ್ತರ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ, ಉತ್ತರ ಪ್ರದೇಶದ ಪೊಲೀಸರು ಪತ್ರಕರ್ತ ಕಪ್ಪನ್ ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ(ಯುಎಪಿಎ) ಕಾಯ್ದೆಯಡಿ ಬಂಧಿಸಿದ್ದರು. ಕಪ್ಪನ್ ಅವರು ಪಿಎಫ್ಐನೊಂದಿಗೆ ಲಿಂಕ್ ಹೊಂದಿದ್ದು, ಧಾರ್ಮಿಕ ಕಲಹ ಹಾಗೂ ಭಯೋತ್ಪಾದನೆ ಹೆಚ್ಚಿಸುವ ಉದ್ದೇಶದೊಂದಿಗೆ ಹತ್ರಾಸ್‌ಗೆ ಬಂದಿದ್ದಾರೆಂದು ಉತ್ತರ ಪ್ರದೇಶ ಪೊಲೀಸರು ಈ ಮೊದಲು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

ಎರಡು ವರ್ಷಗಳಿಂದಲೂ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಮೊದಲು ಹಲವು ಬಾರಿ ವಿಚಾರಣಾ ಕೋರ್ಟ್ ಜಾಮೀನು ನಿರಾಕರಿಸಿತ್ತು. ಆ ಬಳಿಕ ಜಾಮೀನು ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಯು ಲಲಿತ್, ಜಸ್ಟೀಸ್ ಎಸ್ ರವೀಂದ್ರ ಭಟ್, ಜಸ್ಟೀಸ್ ಪಿ.ಎಸ್.ನರಸಿಂಹ ಅವರಿದ್ದ ಪೀಠವು, ಕಪ್ಪನ್ ಅವರಿಗೆ ಜಾಮೀನು ದಯಪಾಲಿಸಿದೆ. ಪತ್ರಕರ್ತ ಕಪ್ಪನ್ ಅವರು ಮುಂದಿನ ಆರು ವಾರಗಳ ಕಾಲ ದಿಲ್ಲಿ ಪೊಲೀಸರಿಗೆ ವರದಿ ಮಾಡಿಕೊಳ್ಳಬೇಕು. ಬಳಿಕ ಕೇರಳದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರ್ಟ್ ತಿಳಿಸಿದೆ.

ಕೇರಳದ ಅಳೈಮುಖ ನ್ಯೂಸ್ ಪೋರ್ಟಲ್ ಪತ್ರಕರ್ತ ಕಪ್ಪನ್ ಅವರಿಗೆ ಈ ಮೊದಲು ಜಾಮೀನು ನಿರಾಕರಿಸಲಾಗಿತ್ತು. ಹತ್ರಾಸ್‌ನಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನವನ್ನು ಕಪ್ಪನ್ ಮಾಡುತ್ತಿದ್ದರು. ಪಿಎಫ್ಐ ಜತೆಗೂ ಲಿಂಕ್ ಹೊಂದಿದ್ದಾರೆಂದು ಯುಪಿ ಪೊಲೀಸರು ವಾದಿಸಿದ್ದರು.

ಇದನ್ನೂ ಓದಿ | Hijab Row | ಶಾಲೆಗಳಲ್ಲಿ ರುದ್ರಾಕ್ಷಿ, ಶಿಲುಬೆ ಧಾರಣೆ ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಾದ

Exit mobile version