ನವ ದೆಹಲಿ: ತಮ್ಮ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
2002ರ ಗೋಧ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ (Bilkis Bano) ಮೇಲೆ ಅತ್ಯಾಚಾರ ಎಸಗಿದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರವು ೧೯೯೨ರ ನೀತಿ ಅನ್ವಯ ಕಳೆದ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದೆ. ಇದರ ಜತೆಗೆ, ಬಿಲ್ಕಿಸ್ ಬಾನೊ ಅವರ ಮಗಳು ಸೇರಿ ಏಳು ಕುಟುಂಬಸ್ಥರ ಹತ್ಯೆಯೂ ನಡೆದಿತ್ತು. ಇದರಲ್ಲೂ ಈ ಅಪರಾಧಿಗಳಿದ್ದಾರೆ.
ಗುಜರಾತ್ ಸರ್ಕಾರಕ್ಕೆ ಈ ಅಪರಾಧಿಗಳನ್ನು ಬಿಡುಗಡೆ ಮಾಡುವ ಅಧಿಕಾರವಿಲ್ಲ. ಯಾಕೆಂದರೆ ಈ ಪ್ರಕರಣದ ವಿಚಾರಣೆ ನಡೆದಿರುವುದು ಮಹಾರಾಷ್ಟ್ರ ಹೈಕೋರ್ಟ್‌ನಲ್ಲಿ. ಬಿಡುಗಡೆ ವಿಚಾರವನ್ನು ಪರಿಶೀಲಿಸುವ ಅಧಿಕಾರ ಅಲ್ಲಿನ ಸರ್ಕಾರಕ್ಕೆ ಮಾತ್ರವೇ ಇದೆ ಎಂದು ಬಿಲ್ಕಿಸ್ ಕಡೆಯ ವಕೀಲರು ವಾದ ಮಂಡಿಸಿದ್ದರು.
ಇದನ್ನೂ ಓದಿ | Bilkis Bano Case | 11 ರೇಪಿಸ್ಟ್‌ಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಸಂತ್ರಸ್ತೆ ಬಿಲ್ಕಿಸ್ ಬಾನೊ
2022ರ ಮೇ ತಿಂಗಳಲ್ಲಿ ನ್ಯಾ.ಅಜಯ್ ರಸ್ತೋಗಿ ಮತ್ತು ನ್ಯಾ. ವಿಕ್ರಮ್ ನಾಥ್ ಅವರನ್ನೊಳಗೊಂಡ ಪೀಠ, ಅಪರಾಧ ನಡೆದಿರುವುದು ಗುಜರಾತ್ ರಾಜ್ಯದಲ್ಲೇ ಆದ್ದರಿಂದ, ಅಪರಾಧಿಗಳ ಬಿಡುಗಡೆ ವಿಚಾರದಲ್ಲಿ ಅಲ್ಲಿನ ಸರ್ಕಾರಕ್ಕೆ ಅಧಿಕಾರವಿದೆ ಎಂದು ತೀರ್ಪು ನೀಡಿತ್ತು. ಇದಕ್ಕೂ ಮುನ್ನ, ಮುಂಬಯಿಯಲ್ಲಿ ವಿಚಾರಣೆ ನಡೆದುದರಿಂದ ಅಲ್ಲಿನ ಸರ್ಕಾರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿತ್ತು.
ಈ ಅರ್ಜಿಯ ವಿಚಾರಣೆಯ ಪೀಠದಲ್ಲಿದ್ದ ನ್ಯಾ.ಬೆಲಾ ತ್ರಿವೇದಿ ಅವರು ಇತ್ತೀಚೆಗೆ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಅಪರಾಧ ನಡೆದ ಅವಧಿಯಲ್ಲಿ ತಾವು ಗುಜರಾತ್ ಸರ್ಕಾರದ ಕಾನೂನು ಸಲಹೆಗಾರರಾಗಿದ್ದುದರಿಂದ, ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ | Bilkis Bano Case | ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ, ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಬೇಲಾ ತ್ರಿವೇದಿ