Site icon Vistara News

Supreme Court SC ST Quota: ಪರಿಶಿಷ್ಟ ಜಾತಿ- ಪಂಗಡ ಒಳಮೀಸಲಾತಿ ಕಾನೂನುಬದ್ಧ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Supreme Court Sc St Quota

ನವದೆಹಲಿ: ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST)ಗಳಿಗೆ ನೀಡಿರುವ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಅವಕಾಶ ನೀಡುವ (Supreme Court SC ST Quota, SC ST Sub- Classifications) ಕುರಿತು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ (Supreme Court) ಇಂದು ನೀಡಿದೆ. ಆ ಮೂಲಕ 2004ರಲ್ಲಿ ಇವಿ ಚಿನ್ನಯ್ಯ ವರ್ಸಸ್‌ ಆಂಧ್ರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪನ್ನು ರದ್ದುಗೊಳಿಸಿದೆ.

2004ರಲ್ಲಿ ಐವರು ನ್ಯಾಯಮೂರ್ತಿಗಳ ಪೀಠವು ಒಳಮೀಸಲಾತಿ ಅಥವಾ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂದು ತೀರ್ಪು ನೀಡಿತ್ತು. ಏಕೆಂದರೆ SC / ST ಗಳು ಏಕರೂಪದ ಒಂದೇ ವರ್ಗ ಎಂದು ಹೇಳಿತ್ತು. ಇದೇ ಪ್ರಕರಣವನ್ನು ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಫೆ.8ರಂದು ಈ ತೀರ್ಪನ್ನು ಕಾಯ್ದಿರಿಸಿ ಆದೇಶ ಹೊರಡಿಸಿತ್ತು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ವಿಚಾರಣೆಗೆ ಬಂದಿದ್ದು, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಇದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಎಸ್‌ಸಿ/ಎಸ್‌ಟಿ ಸಮುದಾಯಗಳಲ್ಲಿ ಹೆಚ್ಚು ಅನುಕೂಲವಾಗಿರುವ ಗುಂಪುಗಳ ಮಕ್ಕಳು ಮೀಸಲಾತಿಯನ್ನು ಪಡೆಯುವುದನ್ನು ಮುಂದುವರಿಸಬೇಕೇ ಎಂಬ ಪ್ರಶ್ನೆಯನ್ನು ಉನ್ನತ ನ್ಯಾಯಾಲಯವು ಪರಿಶೋಧಿಸಿತು. ನ್ಯಾಯಾಲಯವು ಈ ವರ್ಗಗಳೊಳಗಿನ ಏಕರೂಪತೆಯ ಕಲ್ಪನೆಯನ್ನು ಸಹ ಪರಿಶೀಲಿಸಿತು. ಕೇಂದ್ರ ಸರ್ಕಾರವು ಎಸ್‌ಸಿ ಮತ್ತು ಎಸ್‌ಟಿಗಳ ಉಪವರ್ಗೀಕರಣದ ಪರವಾಗಿದೆ ಎಂದು ವರದಿ ಸಲ್ಲಿಸಿತ್ತು.

2020 ರಲ್ಲಿ ಸ್ಟೇಟ್ ಆಫ್ ಪಂಜಾಬ್ ವರ್ಸಸ್‌ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಪಂಚ ಸದಸ್ಯ ಪೀಠವು ಈ ವಿಚಾರವನ್ನು ಸಪ್ತ ಸದಸ್ಯ ಪೀಠಕ್ಕೆ ವರ್ಗಾಯಿಸಿತ್ತು. ಈ ವೇಳೆ2004ರಲ್ಲಿ ಇ.ವಿ.ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂದು ಸಮನ್ವಯ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತ್ತು.

3 ದಿನಗಳ ಕಾಲ ನಡೆದ ಸುದೀರ್ಘ ವಿಚಾರಣೆಯಲ್ಲಿ ನ್ಯಾಯಾಲಯವು ಅಸ್ಪೃಶ್ಯತೆಯ ಸಾಮಾಜಿಕ ಇತಿಹಾಸ, ಸಂವಿಧಾನ ರಚನೆಕಾರರ ದೃಷ್ಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪರಿಕಲ್ಪನೆ, ಭಾರತದಲ್ಲಿ ಮೀಸಲಾತಿಯ ಉದ್ದೇಶ ಮತ್ತು ಅದನ್ನು ಮುಂದುವರಿಸುವಲ್ಲಿ 341ನೇ ವಿಧಿಯ ಮಹತ್ವವನ್ನು ಚರ್ಚಿಸಿತ್ತು.

ಈ ಒಳಮೀಸಲಾತಿಯ ಲಾಭವೇನು?

ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವು SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಅನುಮತಿ ಇದೆ ಎಂದು ಹೇಳಿದೆ. ಆದರೆ ಉಪ-ವರ್ಗೀಕರಣವನ್ನು ನೀಡುವಾಗ, ರಾಜ್ಯವು ಉಪ-ವರ್ಗಕ್ಕೆ 100% ಮೀಸಲಾತಿಯನ್ನು ಮೀಸಲಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ರಾಜ್ಯವು ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಉಪ-ವರ್ಗೀಕರಣದ ಪ್ರಾತಿನಿದ್ಯ ನೀಡಬಹುದಾಗಿದೆ. ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂದಿದೆ. SC/ST ವರ್ಗದ ಕೆಲವೇ ಜನರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಈ ವಿಚಾರವನ್ನು ಅಲ್ಲಗಳೆಯುವಂತಿಲ್ಲ. SC/ST ಗಳಲ್ಲಿ ಶತಮಾನಗಳಿಂದ ಹೆಚ್ಚು ದಬ್ಬಾಳಿಕೆಯನ್ನು ಎದುರಿಸುತ್ತಿರುವ ಇನ್ನೂ ಹಿಂದುಳಿದ ವರ್ಗಗಳಿವೆ ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: OBC Reservation: ಒಬಿಸಿ ಮೀಸಲಾತಿ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್‌ ತಡೆ; ನಿತೀಶ್‌ ಕುಮಾರ್‌ಗೆ ಮುಖಭಂಗ!

Exit mobile version