ನವ ದೆಹಲಿ: ಚುನಾವಣೆಯ ಹೊಸ್ತಿಲಲ್ಲಿ ಸುಪ್ರೀಂ ಕೋರ್ಟ್ ಮಹತ್ವದ, ಐತಿಹಾಸಿಕ ಎನಿಸುವ ತೀರ್ಪೊಂದನ್ನು ನೀಡಿದೆ. ಚುನಾವಣಾ ಆಯೋಗದ ಮಹತ್ವದ ಹುದ್ದೆಗಳ ನೇಮಕಾತಿಯನ್ನು ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಪ್ರತಿಪಕ್ಷ ನಾಯಕರಿರುವ ಸಮಿತಿ ಅಂತಿಮಗೊಳಿಸಬೇಕು ಎಂದಿದೆ.
ಈ ವಿಚಾರದಲ್ಲಿ ತೀರ್ಪು ನೀಡುವ ಸಂದರ್ಭ ಸುಪ್ರೀಂ ಕೋರ್ಟ್ ಪೀಠ 5-0 ಮತಗಳ ಅವಿರೋಧ ಸಮ್ಮತಿ ನೀಡಿದೆ. ಚುನಾವಣಾ ಆಯುಕ್ತರ ನೇಮಕಕ್ಕೆ ರಾಷ್ಟ್ರಪತಿ ಅಂಕಿತ ಹಾಕುವ ಮುನ್ನ ಈ ಮೂವರ ಸಮಿತಿಯು ಆಯ್ಕೆಯನ್ನು ಅಂತಿಮಗೊಳಿಸಬೇಕು ಎಂದಿದೆ.
ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರ ನೇತೃತ್ವದ ನ್ಯಾಯಪೀಠ, ಈ ಕುರಿತು ಸಂಸತ್ತು ಕಾಯಿದೆಯನ್ನು ರೂಪಿಸುವ ವರೆಗೂ ಈ ಪದ್ಧತಿ ಮುಂದುವರಿಯಬೇಕು ಎಂದಿದೆ. ಒಂದು ವೇಳೆ ಪ್ರತಿಪಕ್ಷ ನಾಯಕರ ಅನುಪಸ್ಥಿತಿ ಇದ್ದರೆ, ಅಂಥ ಸಂದರ್ಭದಲ್ಲಿ ಅತಿ ದೊಡ್ಡ ಪ್ರತಿಪಕ್ಷದ ನಾಯಕರು ಸಮಿತಿಯಲ್ಲಿರಬೇಕು ಎಂದಿದೆ.
ಚುನಾವಣಾ ಆಯೋಗದ ಹುದ್ದೆಗಳ ನೇಮಕಕ್ಕೆ ಕೊಲಿಜಿಯಂ ಮಾದರಿಯ ವ್ಯವಸ್ಥೆ ಬೇಕು ಎಂದು ವಾದಿಸಿರುವ ಹಲವು ಪ್ರಕರಣಗಳ ವಿಚಾರಣೆಯ ಹಂತದಲ್ಲಿ ಈ ತೀರ್ಪು ಬಂದಿದೆ.