Site icon Vistara News

Electoral Bonds: ಚುನಾವಣೆ ಬಾಂಡ್‌; ಸುಪ್ರೀಂ ತೀರ್ಪಿನಿಂದ ಆಗೋ ಬದಲಾವಣೆ ಏನು?

Vistara News, Election Bond, Supreme Court upholds transparency

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ (Electoral Bonds) ಯೋಜನೆಯನ್ನು ಸುಪ್ರೀಂ ಕೋರ್ಟ್‌ (supreme court) ಇಂದು ರದ್ದುಗೊಳಿಸಿದ್ದು, ಕಾರ್ಪೊರೇಟ್‌ ಸಂಸ್ಥೆಗಳಿಂದ ರಾಜಕೀಯ ಪಕ್ಷಗಳಿಗೆ ಬರುವ ಅನಿಯಮಿತ ನಿಧಿಗಳಿಗೆ ತಡೆ ಹಾಕಿದೆ. ಈ ಮೂಲಕ, 2018ರಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರ ಕಂಪನಿ ಕಾಯಿದೆಗಳಿಗೆ (Company Act) ತಂದ ತಿದ್ದುಪಡಿಯನ್ನು ಪರಿಣಾಮಕಾರಿಯಾಗಿ ರದ್ದುಗೊಳಿಸಿದೆ. ಇದರಿಂದ ಬದಲಾಗುವುದೇನು?

ಕಾನೂನು ಏನಾಗಿತ್ತು? ಏನು ಬದಲಾಗಿತ್ತು?

ಕಂಪನಿಗಳ ಕಾಯಿದೆ- 2013ರ ಸೆಕ್ಷನ್ 182 ರಾಜಕೀಯ ಪಕ್ಷಕ್ಕೆ ಕೊಡುಗೆ ನೀಡುವ ಭಾರತೀಯ ಕಂಪನಿಗಳ ಹಕ್ಕನ್ನು ನಿಯಂತ್ರಿಸುತ್ತದೆ. ತಿದ್ದುಪಡಿಗಳ ಮೊದಲು ಇಲ್ಲಿ ವಿಧಿಸಲಾಗಿರುವ ಷರತ್ತುಗಳು ಹೀಗಿದ್ದವು:

(i) ದೇಣಿಗೆಯನ್ನು ಸಂಸ್ಥೆಯು ಅಧಿಕೃತಗೊಳಿಸಬೇಕು
(ii) ದೇಣಿಗೆಯನ್ನು ನಗದು ರೂಪದಲ್ಲಿ ನೀಡಬಾರದು
(iii) ಕಂಪನಿಯ ಲಾಭ ಮತ್ತು ನಷ್ಟದ ಖಾತೆಯಲ್ಲಿ ದೇಣಿಗೆಯನ್ನು ಬಹಿರಂಗಪಡಿಸಬೇಕು
(iv) ಕಂಪನಿಯು ಮೂರು ವರ್ಷಗಳವರೆಗೆ ತನ್ನ ಸರಾಸರಿ ಲಾಭದ ಶೇಕಡಾ 7.5ಕ್ಕಿಂತ ಹೆಚ್ಚು ದೇಣಿಗೆ ನೀಡುವಂತಿಲ್ಲ
(v) ಕಂಪನಿಯು ದೇಣಿಗೆ ನೀಡಿದ ಪಕ್ಷದ ಹೆಸರನ್ನು ಬಹಿರಂಗಪಡಿಸಬೇಕು.

2018ರ ತಿದ್ದುಪಡಿಗಳಲ್ಲಿ ಕಂಪನಿಯು ದೇಣಿಗೆ ನೀಡಬಹುದಾದ ಮೊತ್ತದ ಮಿತಿಯನ್ನು ತೆಗೆದುಹಾಕಲಾಯಿತು. ಮತ್ತು ಅದು ದೇಣಿಗೆ ನೀಡಿದ ಪಕ್ಷದ ಹೆಸರನ್ನು ಬಹಿರಂಗಪಡಿಸುವ ಅಗತ್ಯವನ್ನೂ ತೆಗೆಯಲಾಯಿತು.

ಸರ್ಕಾರ ವಾದಿಸಿದ್ದೇನು?

ಸುಪ್ರೀಂ ಕೋರ್ಟ್‌ ಮುಂದೆ ವಾದದ ಸಮಯದಲ್ಲಿ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅನಾಮಧೇಯತೆಯು ದಾನಿಗಳಿಗೆ ಸುರಕ್ಷತೆ ಒದಗಿಸುತ್ತದೆ ಎಂದು ಪ್ರತಿಪಾದಿಸಿದರು. “ದಾನಿಯು ಒಂದು ಪಕ್ಷಕ್ಕೆ ನೀಡುವುದು ಇನ್ನೊಂದು ಪಕ್ಷಕ್ಕೆ ತಿಳಿಯಬಾರದು. ಉದಾಹರಣೆಗೆ, ನಾನು ಗುತ್ತಿಗೆದಾರನಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡುತ್ತೇನೆ ಎಂದು ಭಾವಿಸೋಣ. ಒಂದು ವೇಳೆ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದರೆ, ಅದು ನನ್ನ ಮೇಲೆ ಪ್ರತೀಕಾರ ತೆಗೆದುಕೊಳ್ಳಬಹುದು ಎಂದು ದಾನಿ ಭಯಪಡಬಹುದು. ಹೀಗಾಗಿ ಅನಾಮಧೇಯತೆ ಮುಖ್ಯ” ಎಂದು ವಾದಿಸಿದರು.

ಈ ಮೊದಲು ದೇಣಿಗೆಯ ಮೇಲೆ ವಿಧಿಸಲಾಗಿದ್ದ ಮಿತಿಯ ನಿಬಂಧನೆ ಕಾರ್ಯರೂಪಕ್ಕೆ ಬರಲಿಲ್ಲ. ಅದಕ್ಕೆ ಕಾರಣ ಕಾರ್ಪೊರೇಟ್‌ಗಳು ಶೆಲ್‌ ಕಂಪನಿಗಳ ಮೂಲಕ ದೇಣಿಗೆ ನೀಡುತ್ತಿದ್ದುದು. ಈ ಯೋಜನೆಯು ಅಂತಹ ಶೆಲ್ ಕಂಪನಿಗಳ ಸೃಷ್ಟಿಯನ್ನು ತಡೆಯುವ ಗುರಿಯನ್ನೂ ಹೊಂದಿದೆ ಎಂದು ಅವರು ಹೇಳಿದ್ದರು. “ಶೆಲ್ ಕಂಪನಿಗಳ ಸೃಷ್ಟಿಯನ್ನು ಇಲ್ಲವಾಗಿಸುವ ದೃಷ್ಟಿಯಿಂದ ನಾವು ಇದನ್ನು ಮಾಡಿದ್ದೇವೆ. ಕಂಪನಿಗಳು ತಮ್ಮ ನಿವ್ವಳ ಲಾಭದ 7.5%ಕ್ಕಿಂತ ಹೆಚ್ಚು ದೇಣಿಗೆ ನೀಡಲು ಬಯಸಿದರೆ, ನೇರವಾಗಿಯೇ ಮಾಡಬಹುದು, ಆ ವಿವೇಚನೆ ಅವರಲ್ಲಿ ಇರುತ್ತದೆ” ಎಂದಿದ್ದರು. ಕಂಪನಿಗಳು ನಗದು ದೇಣಿಗೆ ನೀಡುವುದರಿಂದ ಕಪ್ಪು ಹಣ ನ್ಯಾಯಯುತ ಹಣಕಾಸು ವ್ಯವಸ್ಥೆಗೆ ಸೇರುತ್ತದೆ ಎಂದಿದ್ದರು.

ಕೋರ್ಟ್ ಏನೆಂದಿದೆ?

ಸ್ಕೀಮ್ ಅನ್ನು ರದ್ದುಪಡಿಸಿದ ನ್ಯಾಯಾಲಯ, ಕಂಪನಿಗಳ ಕಾಯ್ದೆಯ ತಿದ್ದುಪಡಿಯು ಈಗ ಅಪ್ರಸ್ತುತವಾಗುತ್ತದೆ ಎಂದಿದೆ. ವ್ಯಕ್ತಿಗಳ ಕೊಡುಗೆಗಿಂತಲೂ ಕಾರ್ಪೊರೇಟ್‌ಗಳ ದೇಣಿಗೆಯು ರಾಜಕೀಯ ಪ್ರಕ್ರಿಯೆಯ ಮೇಲೆ ಗಂಭೀರ ಪ್ರಭಾವವನ್ನು ಬೀರಬಲ್ಲುದು. ಕಂಪನಿಗಳ ದೇಣಿಗೆಗಳು ಸಂಪೂರ್ಣವಾಗಿ ವ್ಯಾಪಾರ ವಹಿವಾಟುಗಳಾಗಿರುತ್ತವೆ. ಸೆಕ್ಷನ್ 182 ಕಂಪನಿ ಕಾಯಿದೆಗೆ ತಿದ್ದುಪಡಿಯು ಕಂಪನಿಗಳು ಮತ್ತು ವ್ಯಕ್ತಿಗಳನ್ನು ಸಮಾನವಾಗಿ ಪರಿಗಣಿಸಿದ್ದು, ಸ್ಪಷ್ಟವಾಗಿ ನಿರಂಕುಶವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI DY Chandrachud) ಹೇಳಿದ್ದಾರೆ.

“ತಿದ್ದುಪಡಿಗಳ ಮೊದಲು, ನಷ್ಟದಲ್ಲಿರುವ ಕಂಪನಿಗಳಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ತಿದ್ದುಪಡಿಯಿಂದಾಗಿ ನಷ್ಟದಲ್ಲಿರುವ ಕಂಪನಿ ಮತ್ತು ರಾಜಕೀಯ ಪಕ್ಷಗಳ ನಡುವೆ ʼಕ್ವಿಡ್ ಪ್ರೊ ಕ್ವೊʼ (ಪರಸ್ಪರ ಕೊಡುಕೊಳ್ಳುವಿಕೆ) ವ್ಯವಸ್ಥೆಯು ಸುಲಭವಾಗಿ ಸಕ್ರಿಯಗೊಂಡಿತು. ಕಂಪನಿಗಳ ಕಾಯಿದೆಯ ಸೆಕ್ಷನ್ 182ಕ್ಕೆ ತಿದ್ದುಪಡಿಯು ನಷ್ಟ ಮತ್ತು ಲಾಭ ಗಳಿಸುವ ಕಂಪನಿಗಳ ನಡುವೆ ವ್ಯತ್ಯಾಸವನ್ನು ಮಾಡಿಲ್ಲ. ಇದು ಸ್ಪಷ್ಟವಾಗಿ ನಿರಂಕುಶವಾಗಿದೆ” ಎಂದು ಸಿಜೆ ಹೇಳಿದ್ದಾರೆ.

ಕೋರ್ಟ್‌ನ ಈ ಟಿಪ್ಪಣಿಯಿಂದಾಗಿ, ಕಂಪನಿ ಕಾಯಿದೆ ತಿದ್ದುಪಡಿಯು ಅನೂರ್ಜಿತಗೊಳ್ಳುತ್ತದೆ. ಹೀಗಾಗಿ, ಇನ್ನು ಮುಂದೆ, ದೇಣಿಗೆಗಳನ್ನು ಸಂಸ್ಥೆಯು ಅಧಿಕೃತಗೊಳಿಸಬೇಕು. ದೇಣಿಗೆಯನ್ನು ನಗದು ರೂಪದಲ್ಲಿ ನೀಡಬಾರದು. ಕಂಪನಿಯ ಲಾಭ ಮತ್ತು ನಷ್ಟದ ಖಾತೆಯಲ್ಲಿ ದೇಣಿಗೆಯನ್ನು ಬಹಿರಂಗಪಡಿಸಬೇಕು. ಕಂಪನಿಯು ಮೂರು ವರ್ಷಗಳವರೆಗೆ ತನ್ನ ಸರಾಸರಿ ಲಾಭದ ಶೇಕಡಾ 7.5ಕ್ಕಿಂತ ಹೆಚ್ಚು ದೇಣಿಗೆ ನೀಡುವಂತಿಲ್ಲ ಹಾಗೂ ಕಂಪನಿಯು ದೇಣಿಗೆ ನೀಡಿದ ಪಕ್ಷದ ಹೆಸರನ್ನು ಬಹಿರಂಗಪಡಿಸಬೇಕಾಗಿದೆ.

ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ ಯೋಜನೆ ರದ್ದು ಏಕೆ? ಸುಪ್ರೀಂ ಹೇಳಿದ್ದೇನು?

Exit mobile version