ಹೊಸದಿಲ್ಲಿ: “ಸರ್ಕಾರದ ಪರ ಜಾಹೀರಾತುಗಳಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತೀರಿ, ಒಂದು ರೈಲು ಯೋಜನೆಗೆ ನಿಮ್ಮಲ್ಲಿ ಹಣವಿಲ್ಲವೇ?ʼʼ ಎಂದು ಸುಪ್ರೀಂ ಕೋರ್ಟ್ (Supreme court) ಹೊಸದಿಲ್ಲಿಯ ಆಪ್ ಸರ್ಕಾರವನ್ನು (AAP Govt) ತರಾಟೆಗೆ ತೆಗೆದುಕೊಂಡಿದೆ.
ಇದು ಒಂದು ತಿಂಗಳಲ್ಲಿ AAP ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ಬೀಳುತ್ತಿರುವ 2ನೇ ತಪರಾಕಿಯಾಗಿದೆ. ರಾಜಸ್ಥಾನದ ಅಲ್ವಾರ್ ಮತ್ತು ಹರಿಯಾಣದ ಪಾಣಿಪತ್ ನಡುವಿನ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್ – RRTS project) ಕಾರಿಡಾರ್‌ಗಳಿಗೆ ಹಣವನ್ನು ಒದಗಿಸದ ಎಎಪಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿತು.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು, “ನೀವು ಜಾಹೀರಾತಿಗಾಗಿ 500 ಕೋಟಿ ಬಜೆಟ್ ಇಡಬಹುದು, ಆದರೆ ಈ ಯೋಜನೆಗೆ 400 ಕೋಟಿ ಇಡಲು ಸಾಧ್ಯವಿಲ್ಲವೇ?” ಎಂದು ತರಾಟೆಗೆ ತೆಗೆದುಕೊಂಡರು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು “ಹಣದ ಕೆಲವು ವರ್ಗಾವಣೆ ಮಾಡಲಾಗಿದೆʼʼ ಎಂದು ತಿಳಿಸಿದ ನಂತರ ಕೋರ್ಟ್ ಹೀಗೆ ಟೀಕಿಸಿತು.
ಇದಕ್ಕೂ ಮೊದಲು, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು, ಹಣ ಪಾವತಿಸುವ ಹಿಂದಿನ ಭರವಸೆಯನ್ನು ಅನುಸರಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿ, ಆದೇಶಕ್ಕೆ ಒಂದು ವಾರ ತಡೆ ನೀಡಿತ್ತು.
ಬಜೆಟ್ ರಾಜ್ಯ ಸರ್ಕಾರ ಗಮನಿಸಬೇಕಾದ ವಿಷಯವಾಗಿದೆ. ಆದರೆ ಇಂತಹ ರಾಷ್ಟ್ರೀಯ ಯೋಜನೆಗಳ ಮೇಲೆ ಪರಿಣಾಮ ಬೀರಿದರೆ ಮತ್ತು ಜಾಹೀರಾತುಗಳಿಗೆ ಹಣವನ್ನು ಖರ್ಚು ಮಾಡಿದರೆ, ಆ ಹಣವನ್ನು ಈ ಯೋಜನೆಗೆ ವರ್ಗಾಯಿಸಲು ಪೀಠ ನಿರ್ದೇಶಿಸಲು ಒಲವು ತೋರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಳೆದ ವಾರ, ದೆಹಲಿ ಸರ್ಕಾರವು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಯೋಜನೆಗಾಗಿ 415 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ಆದೇಶದ ಗಡು ನವೆಂಬರ್ 28ರ ನಾಲ್ಕು ದಿನಗಳ ಮುಂಚಿತವಾಗಿ ಇದನ್ನು ಹೇಳಿತ್ತು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ತಿಂಗಳು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ರೈಲಿನ 17 ಕಿಮೀ ಆದ್ಯತೆಯ ವಿಭಾಗದಲ್ಲಿ ಪ್ರಾದೇಶಿಕ ಸಂಪರ್ಕಕ್ಕೆ ಮೀಸಲಾಗಿರುವ ದೇಶದ ಮೊದಲ ಸಾಮೂಹಿಕ ಕ್ಷಿಪ್ರ ವ್ಯವಸ್ಥೆಯಾದ RAPIDXನಲ್ಲಿ ಮೊದಲ ಪ್ರಯಾಣವನ್ನು ಉದ್ಘಾಟಿಸಿದ್ದರು.
ಉದ್ಘಾಟನಾ ಸಮಾರಂಭವು ದೆಹಲಿ-ಗಾಜಿಯಾಬಾದ್-ಮೀರತ್ RRTS ಕಾರಿಡಾರ್‌ನ ಸಾಹಿಬಾಬಾದ್ ನಿಲ್ದಾಣದಲ್ಲಿ ನಡೆಯಿತು. ಇದು ಪೂರ್ಣಗೊಂಡರೆ, ದೆಹಲಿ ಮತ್ತು ಮೀರತ್ ನಡುವಿನ ಪ್ರಯಾಣದ ಸಮಯವನ್ನು ಒಂದು ಗಂಟೆಗಿಂತಲೂ ಕಡಿಮೆಗೊಳಿಸುತ್ತದೆ. RRTS ಗಂಟೆಗೆ 180 ಕಿಮೀ ವೇಗವನ್ನು ತಲುಪಲು ವಿನ್ಯಾಸಗೊಳಿಸಲಾಗಿದೆ. ಆದರೆ ಕಾರ್ಯಾಚರಣೆಯ ವೇಗ ಗಂಟೆಗೆ 160 ಕಿಮೀ. ಪ್ರತಿ 15 ನಿಮಿಷಗಳಿಗೊಮ್ಮೆ ಇಂಟರ್‌ಸಿಟಿ ಪ್ರಯಾಣಕ್ಕಾಗಿ ಹೈ-ಸ್ಪೀಡ್ ರೈಲುಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: Supreme Court: ಆಪ್ ಸಂಸದ ರಾಘವ್ ಚಡ್ಡಾಗೆ ಸುಪ್ರೀಂ ಕೋರ್ಟ್ ತಪರಾಕಿ, ರಾಜ್ಯಸಭಾ ಅಧ್ಯಕ್ಷರ ಕ್ಷಮೆ ಯಾಚಿಸಲು ಸೂಚನೆ