Site icon Vistara News

Electoral Bonds: ಚುನಾವಣೆ ಬಾಂಡ್‌ ಕುರಿತು ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

8 votes cast in Chandigarh mayoral election were Valid Says Supreme Court

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ (Electoral Bonds) ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ (Supreme court) ಇಂದು ತನ್ನ ತೀರ್ಪನ್ನು ಪ್ರಕಟಿಸಲಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJ DY Chandrachud) ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು (Constitutional Bench) ಕಳೆದ ವರ್ಷ ನವೆಂಬರ್ 2ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

2018ರ ಜನವರಿ 2ರಂದು ಸರ್ಕಾರವು ಪರಿಚಯಿಸಿದ ಚುನಾವಣಾ ಬಾಂಡ್‌ಗಳ ಯೋಜನೆಯು ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಗಳನ್ನು ನೀಡಲು ಮತ್ತು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬಂದಿದೆ. ಚುನಾವಣಾ ಬಾಂಡ್‌ಗಳು ಹಣಕಾಸಿನ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ವ್ಯಕ್ತಿಗಳು ಮತ್ತು ಸಂಸ್ಥೆಗಳು ತಮ್ಮ ಗುರುತನ್ನು ಬಹಿರಂಗಪಡಿಸದೆ ರಾಜಕೀಯ ಪಕ್ಷಗಳಿಗೆ ಹಣವನ್ನು ಕೊಡುಗೆಯಾಗಿ ನೀಡಲು ಅವಕಾಶ ಮಾಡಿಕೊಡುತ್ತವೆ.

ಯೋಜನೆಯ ನಿಬಂಧನೆಗಳ ಅಡಿಯಲ್ಲಿ, ಭಾರತದ ಯಾವುದೇ ನಾಗರಿಕ ಅಥವಾ ದೇಶದಲ್ಲಿ ನೊಂದಣಿಯಾದ ಸಂಸ್ಥೆಯು ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು. ಈ ಬಾಂಡ್‌ಗಳು ₹1,000ರಿಂದ ₹1 ಕೋಟಿ ವರೆಗಿನ ವಿವಿಧ ಮುಖಬೆಲೆಗಳಲ್ಲಿ ಲಭ್ಯವಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಎಲ್ಲಾ ಶಾಖೆಗಳಲ್ಲಿ ಪಡೆಯಬಹುದು. ಈ ದೇಣಿಗೆಗಳು ಸಹ ಬಡ್ಡಿರಹಿತವಾಗಿವೆ.

ಚುನಾವಣಾ ಬಾಂಡ್‌ಗಳ ಪ್ರಮುಖ ಲಾಭ ಎಂದರೆ ಅವು ದಾನಿಗಳಿಗೆ ನೀಡುವ ಅನಾಮಧೇಯತೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು ಈ ಬಾಂಡ್‌ಗಳನ್ನು ಖರೀದಿಸಿದಾಗ, ಅವರ ಗುರುತುಗಳು ಸಾರ್ವಜನಿಕರಿಗೆ ಅಥವಾ ಹಣವನ್ನು ಸ್ವೀಕರಿಸುವ ರಾಜಕೀಯ ಪಕ್ಷಕ್ಕೆ ಬಹಿರಂಗವಾಗುವುದಿಲ್ಲ. ಆದರೆ ಸರ್ಕಾರ ಮತ್ತು ಬ್ಯಾಂಕ್ ಲೆಕ್ಕಪರಿಶೋಧನೆಯ ಉದ್ದೇಶಗಳಿಗಾಗಿ ಖರೀದಿದಾರರ ವಿವರಗಳ ದಾಖಲೆಯನ್ನು ನಿರ್ವಹಿಸಬಹುದು. ಹಣದ ಮೂಲಗಳ ನ್ಯಾಯಸಮ್ಮತತೆಯನ್ನು ಖಚಿತಪಡಿಸಲು ಪರಿಶೀಲಿಸಬಹುದು.

ಕಳೆದ ವರ್ಷ, ಸುಪ್ರೀಂ ಕೋರ್ಟ್‌ನ ವಿಚಾರಣೆಯ ಮೊದಲು, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳ ನಿಧಿಯ ಮೂಲದ ಬಗ್ಗೆ ಮಾಹಿತಿಯ ಸಂಪೂರ್ಣ ಹಕ್ಕನ್ನು ಸಂವಿಧಾನವು ನಾಗರಿಕರಿಗೆ ಖಾತರಿಪಡಿಸುವುದಿಲ್ಲ ಎಂದು ವಾದಿಸಿದರು. ಎಲೆಕ್ಟೋರಲ್ ಬಾಂಡ್ ಯೋಜನೆಯು ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ಶುದ್ಧ ಹಣವನ್ನು ಉತ್ತೇಜಿಸುತ್ತದೆ. ಆದರೆ ಮಾಹಿತಿ ಹಕ್ಕಿಗೆ ಮಿತಿಗಳಿವೆ. ಅದು ಯಾವುದನ್ನು ಬೇಕಿದ್ದರೂ ತಿಳಿದುಕೊಳ್ಳುವ ಅನಿಯಂತ್ರಿತ ಹಕ್ಕಾಗಬಾರದು ಎಂದು ಸಮರ್ಥಿಸಿಕೊಂಡರು.

“ಈ ಯೋಜನೆಯು ಕೊಡುಗೆದಾರರಿಗೆ ಗೌಪ್ಯತೆಯ ಪ್ರಯೋಜನವನ್ನು ನೀಡುತ್ತದೆ. ಇದು ಶುದ್ಧ ಹಣದ ಕೊಡುಗೆಯನ್ನು ಖಚಿತಪಡಿಸುತ್ತದೆ ಮತ್ತು ಉತ್ತೇಜಿಸುತ್ತದೆ. ಇದು ತೆರಿಗೆ ಬಾಧ್ಯತೆಗಳಿಗೆ ಬದ್ಧವಾಗಿದೆ. ಹೀಗಾಗಿ ಇದು ಯಾವುದೇ ಹಕ್ಕಿನಿಂದ ಯಾರನ್ನೂ ವಂಚಿಸುವುದಿಲ್ಲ” ಎಂದು ಅವರು ವಾದಿಸಿದ್ದರು.

ಪ್ರಜಾಪ್ರತಿನಿಧಿ ಕಾಯಿದೆ, 1951ರ ಸೆಕ್ಷನ್ 29A ಅಡಿಯಲ್ಲಿ ನೋಂದಾಯಿಸಲಾದ ರಾಜಕೀಯ ಪಕ್ಷಗಳು, ಕಳೆದ ಲೋಕಸಭೆ ಅಥವಾ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಶೇಕಡಾ 1ಕ್ಕಿಂತ ಹೆಚ್ಚು ಮತಗಳನ್ನು ಪಡೆದವರು ಮಾತ್ರ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದಂತೆ ಅಧಿಕೃತ ಬ್ಯಾಂಕ್ ಖಾತೆಯ ಮೂಲಕ ಅರ್ಹ ರಾಜಕೀಯ ಪಕ್ಷಗಳು ಮಾತ್ರ ಈ ಬಾಂಡ್‌ಗಳನ್ನು ನಗದೀಕರಿಸಬಹುದು.

ಏಪ್ರಿಲ್ 2019ರಲ್ಲಿ, ಚುನಾವಣಾ ಬಾಂಡ್‌ಗಳ ಯೋಜನೆಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಆದರೆ ಸಮಗ್ರ ವಿಚಾರಣೆಯ ಅಗತ್ಯವನ್ನು ಪ್ರತಿಪಾದಿಸಿತ್ತು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪ್ರಸ್ತುತ ಸಂವಿಧಾನ ಪೀಠ ಕಳೆದ ವರ್ಷ ಅಕ್ಟೋಬರ್ 31ರಿಂದ ವಾದಗಳನ್ನು ಆಲಿಸಲು ಪ್ರಾರಂಭಿಸಿತು. ಕಾಂಗ್ರೆಸ್ ನಾಯಕ ಜಯ ಠಾಕೂರ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಎನ್‌ಜಿಒ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಇದರ ವಿರುದ್ಧ ಅರ್ಜಿಗಳನ್ನು ಸಲ್ಲಿಸಿವೆ.

ಇದನ್ನೂ ಓದಿ: Electoral Bonds: ಸಮಾನ ಅವಕಾಶ ಒದಗಿಸಲು ಚುನಾವಣಾ ಬಾಂಡ್‌ ವಿಫಲ: ಸುಪ್ರೀಂ ಕೋರ್ಟ್

Exit mobile version