Site icon Vistara News

ಸೂರತ್ ವಜ್ರ ಸಂಕೀರ್ಣ ಇಂದು ಉದ್ಘಾಟನೆ; ಅದ್ಭುತ ಫೋಟೊಗಳನ್ನು ಹಂಚಿಕೊಂಡ ಮೋದಿ

surat diamond house

surat diamond house

ಸೂರತ್‌: ವಿಶ್ವದ ಅತಿ ದೊಡ್ಡ ಕಚೇರಿ ಸಂಕೀರ್ಣ, ಅಮೆರಿಕದ ಭದ್ರತಾ ಸಂಸ್ಥೆ ಕಟ್ಟಡ ಪೆಂಟಗನ್ (Pentagon) ಅನ್ನೂ ಮೀರಿಸುವ ಗಾತ್ರದ ಹೊಸ ವಜ್ರದ ವ್ಯಾಪಾರ ಸಂಸ್ಥೆಗಳ ಸಂಕೀರ್ಣ (Surat Diamond Bourse) ಸೂರತ್‌ನಲ್ಲಿ ಇಂದು (ಡಿಸೆಂಬರ್‌ 17) ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10.45ರ ಸುಮಾರಿಗೆ ಮೋದಿ ಸೂರತ್ ವಿಮಾನ ನಿಲ್ದಾಣದಲ್ಲಿ ಹೊಸ ಸಮಗ್ರ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಬೆಳಗ್ಗೆ 11.15ಕ್ಕೆ ಅವರು ಸೂರತ್ ಡೈಮಂಡ್ ಬೋರ್ಸ್ ಅನ್ನು ಉದ್ಘಾಟಿಸಲಿದ್ದಾರೆ.

ಸೂರತ್ ಡೈಮಂಡ್ ಬೋರ್ಸ್ ಉದ್ಘಾಟನೆಯ ಬಳಿ ಮೋದಿ ವಾರಣಾಸಿಗೆ ಪ್ರಯಾಣ ಬೆಳೆಸಲಿದ್ದು, ಅಪರಾಹ್ನ 3.30 ರ ಸುಮಾರಿಗೆ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5.15ರ ಸುಮಾರಿಗೆ ಅವರು ನಮೋ ಘಾಟ್‌ನಲ್ಲಿ ಕಾಶಿ ತಮಿಳು ಸಂಗಮಂ 2023 ಅನ್ನು ಉದ್ಘಾಟಿಸಲಿದ್ದಾರೆ.

ವಜ್ರದ ವ್ಯಾಪಾರ ಸಂಸ್ಥೆಗಳ ಸಂಕೀರ್ಣದ ವೈಶಿಷ್ಟ್ಯ

ವಿಶ್ವದ ವಜ್ರ ವ್ಯಾಪಾರದ ರಾಜಧಾನಿ ಎನಿಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಈ ಸಂಕೀರ್ಣ ಈಡೇರಿಸಲಿದೆ. ಗುಜರಾತ್‌ನ ಸೂರತ್ ಡೈಮಂಡ್ ಬೋರ್ಸ್, 67 ಲಕ್ಷ ಚದರಡಿ (620,000 ಚದರ ಮೀಟರ್) ಪ್ರದೇಶದಲ್ಲಿ ರೂಪುಗೊಂಡಿದೆ. ಜುಲೈನಲ್ಲಿ 32 ಶತಕೋಟಿ ರೂಪಾಯಿಗಳಲ್ಲಿ ಇದು ಪೂರ್ಣಗೊಂಡು ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವೆನಿಸಿದೆ.

ಹೊಸ ಸಂಕೀರ್ಣವು ಡೈಮಂಡ್ ರಿಸರ್ಚ್ ಮತ್ತು ಮರ್ಕೆಂಟೈಲ್ ಸಿಟಿಯೊಳಗೆ ಇದೆ. ಇದು ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ ಅಥವಾ ಗಿಫ್ಟ್ ಸಿಟಿಯ ಮಾದರಿಯ ವ್ಯಾಪಾರ ಜಿಲ್ಲೆ. ಇದು ಪ್ರಧಾನಿ ಮೋದಿಯವರ ಪ್ರಮುಖ ಯೋಜನೆಗಳಲ್ಲಿ ಒಂದು. 15 ಅಂತಸ್ತಿನ ಗೋಪುರಗಳ ಒಂಬತ್ತು ಕಟ್ಟಡಗಳು ಮತ್ತು ಸುಮಾರು 4,700 ಕಚೇರಿಗಳನ್ನು ಹೊಂದಿದೆ. ಸೂರತ್ ಡೈಮಂಡ್ ಬೋರ್ಸ್‌ನ ಅಧ್ಯಕ್ಷ ನಾಗಜಿಭಾಯ್ ಸಕರಿಯಾ ಪ್ರಕಾರ, ಸುಮಾರು 130 ಕಚೇರಿಗಳು ಈಗಾಗಲೇ ಬಳಕೆಯಲ್ಲಿವೆ.

ಎಸ್‌ಡಿಬಿ ಮುಂದೆ ಇಸ್ರೇಲ್ ಡೈಮಂಡ್ ಎಕ್ಸ್‌ಚೇಂಜ್‌ ಕೂಡ ಈಗ ಸಣ್ಣದೆನಿಸಲಿದೆ. ಅದು 80,000 ಚದರ ಮೀಟರ್‌ ವಿಸ್ತೀರ್ಣದ್ದು. ಟೆಲ್ ಅವಿವ್ ಸಂಕೀರ್ಣವು 1,000 ಕಚೇರಿಗಳನ್ನು ಮಾತ್ರವಲ್ಲದೆ ವಿಮಾದಾರರು, ಬ್ಯಾಂಕ್‌ಗಳು, ಅಂಚೆ ಕಚೇರಿ, ಕಸ್ಟಮ್ಸ್ ಕಚೇರಿ ಮತ್ತು ಮನರಂಜನೆ, ಆಹಾರ ಮತ್ತು ಧಾರ್ಮಿಕ ಸೌಲಭ್ಯ ಸೇವೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Surat Diamond Bourse: ಪೆಂಟಗನ್‌ ಮೀರಿಸುವ ಸೂರತ್‌ನ ವಜ್ರದ ಸಂಕೀರ್ಣ ನಾಳೆ ಪ್ರಧಾನಿಯಿಂದ ಉದ್ಘಾಟನೆ

ವಜ್ರದ ಎಲ್ಲ ವ್ಯವಹಾರಗಳನ್ನು ಒಂದೇ ಸೂರಿನಡಿ ತರುವ ಸವಾಲನ್ನು ಎಸ್‌ಡಿಬಿ ಎದುರಿಸುತ್ತಿದೆ. ಸೂರತ್‌ನಲ್ಲಿ ಈಗಿರುವ ಬಜಾರ್‌ನಲ್ಲಿ ಕಡಿಮೆ ಬಾಡಿಗೆ ಮತ್ತಿತರ ವೆಚ್ಚದೊಂದಿಗೆ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರಿಗಳು ಹೊಸ ಆಧುನಿಕ ಕಚೇರಿಗೆ ಸ್ಥಳಾಂತರಿಸಲು ಹಿಂಜರಿಯುತ್ತಾರೆ. ಮುಂಬೈನ ಭಾರತ್ ಡೈಮಂಡ್ ಬೋರ್ಸ್‌ಗೂ ಆರಂಭಿಕ ವರ್ಷಗಳಲ್ಲಿ ಹೀಗೇ ಆಗಿತ್ತು. ಮುಂಬಯಿಯ ಹಳೆಯ ಡೈಮಂಡ್ ಡಿಸ್ಟ್ರಿಕ್ಟ್ ಬಳಿ 2011ರ ಭಯೋತ್ಪಾದಕ ಬಾಂಬ್ ಸ್ಫೋಟಗಳು ನಡೆಯುವವರೆಗೆ ಮತ್ತು ಕಸ್ಟಮ್ಸ್ ಸೇವೆಗಳು ಕಟ್ಟಡವನ್ನು ಮುಚ್ಚುವವರೆಗೆ ಅದು ಬೆಳೆಯಲಿಲ್ಲ. ಇಂದು ಉಪನಗರ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಹೊಸ ಕಚೇರಿಗಳಿಗೆ ವ್ಯವಹಾರಗಳು ಸ್ಥಳಾಂತರಗೊಂಡಿವೆ.

Exit mobile version