Site icon Vistara News

RBI Deputy Governor: ಆರ್‌ಬಿಐಗೆ ಎಸ್‌ಬಿಐನ ಎಂಡಿ ಸ್ವಾಮಿನಾಥನ್ ಜಾನಕಿರಾಮನ್ ನೂತನ ಡೆಪ್ಯುಟಿ ಗವರ್ನರ್

Swaminathan Janakiraman

ನವದೆಹಲಿ: ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ನ (Reserve Bank of India – RBI) ಡೆಪ್ಯುಟಿ ಗವರ್ನರ್ (RBI Deputy Governor) ಆಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of India – SBI) ವ್ಯವಸ್ಥಾಪಕ ನಿರ್ದೇಶಕ (Managing Director) ಸ್ವಾಮಿನಾಥನ್ ಜಾನಕಿರಾಮನ್ (Swaminathan Jankiraman) ಅವರನ್ನು ನೇಮಕ ಮಾಡಿದೆ. ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೂ ಈ ನೇಮಕವನ್ನು ಮಾಡಲಾಗಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆರ್‌ಬಿಐ ಡೆಪ್ಯುಟಿ ಗೌರ್ನರ್ ಹುದ್ದೆಗಾಗಿ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯು ಜೂನ್ 1 ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಸಂದರ್ಶನವನನು ನಡೆಸಿತ್ತು. ಎಂ ಕೆ ಜೈನ್ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈಗ ಹೊಸ ನೇಮಕ ಮಾಡಲಾಗುತ್ತಿದೆ. ಎಂ ಕೆ ಜೈನ್ ಅವರ ಜಾಗಕ್ಕೆ ಈಗ ಸ್ವಾಮಿನಾಥನ್ ಜಾನಕಿರಾಮನ್ ಅವರನ್ನು ನೇಮಕ ಮಾಡಲಾಗುತ್ತಿದೆ. ಆರ್‌ಬಿಐನಲ್ಲಿ ಒಂದು ಹುದ್ದೆಯನ್ನು ಕಮರ್ಷಿಯಲ್ ಬ್ಯಾಂಕರ್‌ಗಳಿಗಾಗಿಯೇ ಮೀಸಲಿಡಲಾಗಿರುತ್ತದೆ.

1934ರ ಆರ್‌ಬಿಐ ಕಾಯ್ದೆಯ ಪ್ರಕಾರ, ಭಾರತದ ಕೇಂದ್ರೀಯ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ನಾಲ್ಕು ಡೆಪ್ಯುಟಿ ಗವರ್ನರ್‌ಗಳನ್ನು ಹೊಂದಿರುತ್ತದೆ. ನಾಲ್ವರ ಪೈಕಿ ಒಬ್ಬರು ಕಮರ್ಷಿಯಲ್ ಬ್ಯಾಂಕರ್, ಮತ್ತೊಬ್ಬರು ವಿತ್ತೀಯ ನೀತಿ ವಿಭಾಗದ ಮುಖ್ಯಸ್ಥರಾದ ಅರ್ಥಶಾಸ್ತ್ರಜ್ಞರು ಹಾಗೂ ಇನ್ನಿಬ್ಬರು ಬ್ಯಾಂಕಿನ ಅಧಿಕಾರಿ ಶ್ರೇಣಿಯಲ್ಲಿ ಇರುತ್ತಾರೆ. ಮೈಕೆಲ್ ಬೇಬಬ್ರತ್ ಪಾತ್ರ, ಎಂ ರಾಜೇಶ್ವರ್ ರಾವ್ ಮತ್ತು ಟಿ ರಾಬಿ ಶಂಕರ್ ಡೆಪ್ಯುಟಿ ಗವರ್ನರ್ ಅವರ ತಂಡವನ್ನು ಈಗ ಸ್ವಾಮಿನಾಥನ್ ಜಾನಕಿರಾಮನ್ ಅವರು ಸೇರಲಿದ್ದಾರೆ.

ಸಹಕಾರಿ ಬ್ಯಾಂಕ್‌ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್‌-ಆಫ್‌ ಮಾಡಬಹುದು; ಆರ್‌ಬಿಐ

ಸುಸ್ತಿ ಸಾಲ, ಸುಸ್ತಿದಾರರು ಯಾವ ಬ್ಯಾಂಕ್‌ಗಳಿಗೂ ಕೂಡ ಬಾಧಿಸದೆ ಇರುವುದಿಲ್ಲ. ಎಸ್‌ಬಿಐ, ಪಿಎನ್‌ಬಿ, ಕೆನರಾ ಬ್ಯಾಂಕ್‌ ಸೇರಿ ಹಲವು ಪ್ರಮುಖ ಬ್ಯಾಂಕ್‌ಗಳು ಕೂಡ ಸುಸ್ತಿದಾರರಿಂದ (ಸಾಲ ಮರುಪಾವತಿ ಮಾಡದವರು) ಬಳಲುತ್ತವೆ. ಸಹಕಾರಿ ಬ್ಯಾಂಕ್‌ಗಳು ಕೂಡ ಇದಕ್ಕೆ ಹೊರತಲ್ಲ. ಈ ಸುಸ್ತಿದಾರರಿಂದ ಸಾಲ ವಸೂಲಿ ಮಾಡುವ ದಿಸೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಮಹತ್ವದ ಹೆಜ್ಜೆ ಇರಿಸಿದೆ. “ಶೀಘ್ರದಲ್ಲೇ ಸಹಕಾರಿ ಬ್ಯಾಂಕ್‌ಗಳು ಕೂಡ ಸುಸ್ತಿದಾರರ ಜತೆ ರಾಜಿ, ರೈಟ್‌-ಆಫ್‌ (Write-Off: ಸಾಲದ ಲೆಕ್ಕವನ್ನು ಮುಖ್ಯ ಪುಸ್ತಕದಿಂದ ಬೇರೆ ಪುಸ್ತಕಕ್ಕೆ ವರ್ಗಾಯಿಸುವುದು) ಮಾಡಬಹುದು” ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಮಾಹಿತಿ ನೀಡಿದ್ದಾರೆ.

“ಸಹಕಾರಿ ಬ್ಯಾಂಕ್‌ಗಳು ಕೂಡ ಅನುತ್ಪಾದಕ ಆಸ್ತಿಯ (Non-Performing Asset) ಪ್ರಮಾಣ ತಗ್ಗಿಸಲು, ಸಮಸ್ಯೆ ಬಗೆಹರಿಸಿಕೊಳ್ಳಲು ನೆರವಾಗುವ ದಿಸೆಯಲ್ಲಿ ಶೀಘ್ರದಲ್ಲಿಯೇ ಸುಸ್ತಿದಾರರ ಜತೆ ರಾಜಿ ಮಾಡಿಕೊಂಡು, ಸಾಲ ವಸೂಲಿ ಮಾಡುವ (Compromise Settlements) ಹಾಗೂ ರೈಟ್‌-ಆಫ್‌ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ಆರ್‌ಬಿಐ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ” ಎಂದು ಶಕ್ತಿಕಾಂತ ದಾಸ್‌ ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ: 2000 Notes Withdrawn : 2,000 ರೂ. ನೋಟು ಬದಲಿಸಲು ಬರುವವರಿಗೆ, ನೀರು, ನೆರಳಿನ ವ್ಯವಸ್ಥೆಗೆ ಆರ್‌ಬಿಐ ಸೂಚಿಸಿದ್ದೇಕೆ?

“ಸಹಕಾರಿ ಬ್ಯಾಂಕ್‌ಗಳು ಕೂಡ ಹೇಗೆ ಸುಸ್ತಿದಾರರ ಜತೆ ಸಂಧಾನ ಮಾಡಿಕೊಂಡು, ಅನುಕೂಲಕರ ಮಾರ್ಗಗಳಲ್ಲಿ ಸಾಲ ವಸೂಲಿ ಮಾಡಬಹುದು, ಸಾಲದ ರೈಟ್‌-ಆಫ್‌ ಮಾಡಬಹುದು ಎಂಬ ಕುರಿತು ಕೆಲವೇ ದಿನಗಳಲ್ಲಿ ಮಾರ್ಗಸೂಚಿ ಹೊರಡಿಸಲಾಗುತ್ತದೆ” ಎಂದು ತಿಳಿಸಿದರು. ಹಾಗೆಯೇ, “ನಗರ ಸಹಕಾರಿ ಬ್ಯಾಂಕ್‌ಗಳ ಗುರಿ ಸಾಧನೆ, ಡಿಜಿಟಲ್‌ ಸಾಲ ಪಾವತಿ ಸೇರಿ ಹಲವು ವಿಷಯಗಳಲ್ಲಿ ಬದಲಾವಣೆ, ಪೂರಕ ವಾತಾವರಣ ಸೃಷ್ಟಿಯ ಅಗತ್ಯವಿದೆ” ಎಂದು ಕೂಡ ಮಾಹಿತಿ ನೀಡಿದರು. ಭಾರತದಲ್ಲಿ ಸುಮಾರು ಒಂದು ಲಕ್ಷ (ನಗರ ಹಾಗೂ ಗ್ರಾಮೀಣ ಸೇರಿ) ಸಹಕಾರಿ ಬ್ಯಾಂಕ್‌ಗಳಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version