ನವದೆಹಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ (Bibhav Kumar)ಯಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ವೇಳೆ ಆಮ್ ಆದ್ಮಿ ಪಕ್ಷದ (Aam Admi Party) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal case) ಕಣ್ಣೀರಿಟ್ಟಿದ್ದಾರೆ. ಸೋಮವಾರ ತೀಸ್ ಹಜಾರಿ ಕೋರ್ಟ್‌ನಲ್ಲಿ ಬಿಭವ್ ಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ವಾದ ಪ್ರತಿವಾದ ನಡೆಯುತ್ತಿದ್ದಂತೆ ಸ್ವಾತಿ ಮಲಿವಾಲ್ ಭಾವುಕರಾದರು. ಅಲ್ಲದೇ ಬಿಭವ್ ಕುಮಾರ್ ಅವರಿಗೆ ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ.
ಬಿಭವ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್. ಹರಿಹರನ್, ಸ್ವಾತಿ ಮಲಿವಾಲ್ ಸಿಎಂ ನಿವಾಸಕ್ಕೆ ಅನುಮತಿ ಇಲ್ಲದೇ ನುಗ್ಗಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿ ಬಿಭವ್ ಕುಮಾರ್ ಇರಲೇ ಇಲ್ಲ. ಪೂರ್ವಾನುಮತಿ ಇಲ್ಲದೇ ಯಾರಾದರೂ ಸಿಎಂ ನಿವಾಸಕ್ಕೆ ಈ ರೀತಿಯಾಗಿ ಪ್ರವೇಶಿಸಲು ಹೇಗೆ ಸಾಧ್ಯ? ಹೀಗಾಗಿ ಆಕೆಯನ್ನು ಭದ್ರತಾ ಸಿಬ್ಬಂದಿ ತಡೆದು ಬಿಭವ್ ಕುಮಾರ್ ಜೊತೆ ಮಾತನಾಡುವಂತೆ ಹೇಳಿದ್ದಾರೆ. ಸಿಎಂ ನಿವಾಸದಲ್ಲಿ ಇಂತಹದ ಘಟನೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಘಟನೆಯಲ್ಲಿ ಸ್ವಾತಿ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಹೀಗಿರುವಾಗ ಇದು ಹೇಗೆ ಕೊಲೆ ಯತ್ನ ಆಗುತ್ತದೆ. ಬಿಭವ್ ಕುಮಾರ್ ವಿರುದ್ಧದ ಆರೋಪ ಸಂಪೂರ್ಣವಾಗಿ ನಿರಾಧಾರವಾದುದು. ಹೀಗಾಗಿ ಸದ್ಯ ಅವರಿಗೆ ಜಾಮೀನು ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಸ್ವಾತಿ ಮಲಿವಾಲ್ ಮೇಲೆ ಸಿಎಂ ಕೇಜ್ರಿವಾಲ್ ನಿವಾಸದಲ್ಲೇ ಬಿಭವ್ ಕುಮಾರ್ ಹಲ್ಲೆ ನಡೆಸಿದ್ದ. ಇದಾದ ನಾಲ್ಕು ದಿನಗಳ ಬಳಿಕ ಸ್ವಾತಿ ಪೊಲೀಸರಿಗೆ ದೂರು ನೀಡಿದ್ದರು., ಸ್ವಾತಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ‘ನಾನು ಮುಖ್ಯಮಂತ್ರಿ ಅವರ ಭೇಟಿಗೆ ಹೋಗಿದ್ದಾಗ ಬಿಭವ್ ಅಡ್ಡಿಪಡಿಸಿದ್ದರು. ನನ್ನ ಜೊತೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದರು. ಪ್ರತಿರೋಧವೊಡ್ಡಿದಾಗ ಮುಖ, ಹೊಟ್ಟೆ, ಎದೆ ಮತ್ತು ದೇಹದ ಸೂಕ್ಷ್ಮ ಭಾಗಗಳ ಮೇಲೆ ಹಲವು ಬಾರಿ ತೀವ್ರ ಹಲ್ಲೆ ನಡೆಸಿದರು. ಈ ವೇಳೆ ಅವರ ಬಳಿ ನಾನು ಗೋಗರೆದು ತಪ್ಪಿಸಿಕೊಂಡು ಬಂದು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದೆ’ ಎಂದು ಸ್ವಾತಿ ಹೇಳಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಬಿಭವ್ ಮೇಲೆ ಮಹಿಳೆಯ ಅತ್ಯಾಚಾರಕ್ಕೆ ಯತ್ನ, ಕ್ರಿಮಿನಲ್ ಉದ್ದೇಶ, ಉದ್ದೇಶಪೂರ್ವಕ ಹಲ್ಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.
ಸ್ವಾತಿ ತಮ್ಮ ದೂರಿನಲ್ಲಿ ತಾವು ಆ ದಿನ ಅನುಭವಿಸಿದ ನೋವಿನ ಬಗ್ಗೆ ದಾಖಲಿಸಿದ್ದಾರೆ. ಬಿಭವ್ ಕುಮಾರ್ 7-8ರಿಂದ ಎಂಟು ಬಾರಿ ಕಪಾಳಕ್ಕೆ ಬಾರಿಸಿದ್ದಾನೆ. ನಾನು ನೆಲಕ್ಕೆ ಬಿದ್ದಾಗ ನಿರಂತರವಾಗಿ ನನ್ನ ಹೊಟ್ಟೆ, ಎದೆ, ಬೆನ್ನಿಗೆ ಒದ್ದಿದ್ದಾನೆ. ಅಲ್ಲದೇ ನನ್ನನ್ನು ಕಾಲುಗಳನ್ನು ಹಿಡಿದು ನೆಲದಲ್ಲಿ ಎಳೆದಾಡಿದ್ದು, ಬಟ್ಟೆಯನ್ನ ಎಳೆದಾಡಿದ್ದಾನೆ. ನಾನು ಅವತ್ತು ಋತುಮತಿಯಾಗಿದ್ದೆ. ಹೊಟ್ಟೆ ಬಹಳ ನೋಯುತ್ತಿದೆ ದಯವಿಟ್ಟು ಬಿಟ್ಟು ಬಿಡು ಎಂದರೂ ಕೇಳದೇ ನನ್ನ ಹೊಟ್ಟೆ ಕಾಲುಗಳಿಂದ ಒದ್ದಿದ್ದಾನೆ ಎಂದು ಸ್ವಾತಿ ಹೇಳಿದ್ದರು. ಇದಾದ ಬಳಿಕ ಕಳೆದ ವಾರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಭವ್ ಕುಮಾರ್‌ನನ್ನು ಅರೆಸ್ಟ್ ಮಾಡಲಾಗಿದ್ದು, ಸದ್ಯ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.