Site icon Vistara News

Viral Video: ಮತದಾರರ ಗಡ್ಡ ಬೋಳಿಸಿ, ಕಟಿಂಗ್‌ ಮಾಡಿ ವೋಟ್ ಕೇಳಿದ ಅಭ್ಯರ್ಥಿ; ನೀವೇ ನೋಡಿ

Viral Video

Tamil Nadu: Parirajan, An Independent candidate becomes a barber for a day during the election campaign

ಚೆನ್ನೈ: ಬಿಸಿಲಿನ ಅಬ್ಬರಕ್ಕಿಂತ ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದ ಭರಾಟೆಯೇ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಸಾಲು ಸಾಲು ಚುನಾವಣಾ ರ‍್ಯಾಲಿಗಳಲ್ಲಿ ನಿರತರಾಗಿದ್ದಾರೆ. ವಯಸ್ಸನ್ನೂ ಲೆಕ್ಕಿಸದೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಎಚ್‌.ಡಿ.ದೇವೇಗೌಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಜನರಿಗೆ ಸಾಲು ಸಾಲು ಭರವಸೆಗಳನ್ನು ನೀಡಿ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ. ಅಣ್ಣ, ತಂಗಿ, ತಂದೆ-ತಾಯಿ ಎಂದು ಮತದಾರರ ಕಾಲಿಗೆ ಬಿದ್ದು ಮತ ಕೇಳುತ್ತಿದ್ದಾರೆ. ಇದರ ಬೆನ್ನಲ್ಲೇ, ತಮಿಳುನಾಡಿನಲ್ಲಿ ಅಭ್ಯರ್ಥಿಯೊಬ್ಬರು ಜನರ ಮತಗಳನ್ನು ಸೆಳೆಯಲು ಕ್ಷೌರಿಕನಾಗಿ ಬದಲಾಗಿದ್ದಾರೆ. ಜನರಿಗೆ ಕ್ಷೌರ ಮಾಡುವ ಮೂಲಕ ಮತಯಾಚನೆ ನಡೆಸುತ್ತಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ (Viral Video) ಆಗಿದೆ.

ಹೌದು, ತಮಿಳುನಾಡಿನ ರಾಮನಾಥಪುರಂ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪರಿರಾಜನ್‌ ಎಂಬುವರು ಚುನಾವಣೆ ಪ್ರಚಾರದ ಭಾಗವಾಗಿ ಒಂದು ದಿನದ ಮಟ್ಟಿಗೆ ಕ್ಷೌರಿಕನ ಕೆಲಸ ಮಾಡಿದ್ದಾರೆ. ಜನರಿಗೆ ಕಟಿಂಗ್‌ ಮಾಡಿ, ಅವರ ಗಡ್ಡ ಬೋಳಿಸಿ, ಅವರು ಸಲೂನ್‌ನಿಂದ ಹೊರಡುವಾಗ ಕೈ ಮುಗಿದು ಮತ ಕೇಳುತ್ತಿದ್ದಾರೆ. ಇದು ಸುತ್ತಮುತ್ತಲಿನ ಭಾಗದ ಜನರ ಗಮನವನ್ನೂ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಚಟುವಟಿಕೆ ಕುರಿತು ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ.

“ವೈಟ್‌ ಕಾಲರ್‌ ಅಭ್ಯರ್ಥಿಗಳು, ಶ್ರೀಮಂತರು, ಉದ್ಯಮಿಗಳು ದರ್ಪದಿಂದ ಚುನಾವಣೆ ಎದುರಿಸುತ್ತಿರುವ ಸಂದರ್ಭದಲ್ಲಿ ಜನರಿಗೆ ಕ್ಷೌರ ಮಾಡುವ ಮೂಲಕ ಪ್ರಚಾರ ಕೈಗೊಂಡಿರುವ ಪರಿರಾಜನ್‌ ಅವರ ನಡೆ ಮಾದರಿ” ಎಂದು ಒಂದಷ್ಟು ಜನ ಹೊಗಳಿದ್ದಾರೆ. “ಚುನಾವಣೆ ವೇಳೆ ಜನರ ಗಡ್ಡ ಬೋಳಿಸಿ, ಗೆದ್ದ ನಂತರ ಅವರ ಹಣವನ್ನು ಬೋಳಿಸುವವನೇ ರಾಜಕಾರಣಿ”, “ಈತ ಮತಗಳಿಗಾಗಿ ಜನರ ಎದುರು ಡ್ರಾಮಾ ಮಾಡುತ್ತಿದ್ದಾನೆ. ಇಂತಹವರನ್ನು ನಂಬಬಾರದು” ಎಂಬುದಾಗಿ ಮತ್ತೊಂದಿಷ್ಟು ಜನ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ಚುನಾವಣೆಯಲ್ಲಿ ಜನರ ಮತಗಳನ್ನು ಸೆಳೆಯಲು ರಾಜಕಾರಣಿಗಳು ಹತ್ತಾರು ತಂತ್ರ, ಅಬ್ಬರದ ಪ್ರಚಾರ, ನೀರಿನಂತೆ ದುಡ್ಡು ಹರಿಸುವುದು, ಹಣ-ಹೆಂಡದ ಆಮಿಷ ಒಡ್ಡುವುದು, ಉಚಿತವಾಗಿ ಕುಕ್ಕರ್‌, ಟಿವಿ ಕೊಡುವುದು ಸೇರಿ ಹಲವು ಗಿಮಿಕ್‌ ಮಾಡುವವರ ಮಧ್ಯೆ ಪರಿರಾಜನ್‌ ಅವರು ಕೈಗೊಂಡಿರುವ ವಿಭಿನ್ನ ಪ್ರಚಾರವು ಅವರನ್ನು ಫೇಮಸ್‌ ಮಾಡಿದೆ. ಆದರೆ, ಇವರ ಬಳಿ ಕ್ಷೌರ ಮಾಡಿಸಿಕೊಂಡವರೆಲ್ಲ ಮತ ಹಾಕುತ್ತಾರೆಯೇ? ಎಷ್ಟು ಜನರಿಗೆ ಅಂತ ಕ್ಷೌರ ಮಾಡಿ ಮತ ಸೆಳೆಯಲು ಸಾಧ್ಯ ಎಂಬುದು ಸೇರಿ ಹತ್ತಾರು ಪ್ರಶ್ನೆಗಳು ಮೂಡಿವೆ. ಚುನಾವಣೆ ಫಲಿತಾಂಶವೇ ಇದಕ್ಕೆ ಉತ್ತರ ನೀಡಲಿದೆ.

ಇದನ್ನೂ ಓದಿ: ST Somashekar: ಕಾಂಗ್ರೆಸ್‌ ಪರ ಸೋಮಶೇಖರ್ ಪ್ರಚಾರ;‌ ವಿನಾಶ ಕಾಲ ಎಂದ ವಿಜಯೇಂದ್ರ!

Exit mobile version