Site icon Vistara News

ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಶ್ರೀಮಂತನ ಮಗನಿಗೆ 15 ಗಂಟೆಯೊಳಗೆ ಜಾಮೀನು! ಪ್ರಬಂಧ ಬರೆಯುವ ಶಿಕ್ಷೆ!

Crime News

Crime News

ಮುಂಬೈ: ಸ್ಪೋರ್ಟ್ಸ್‌ ಕಾರು ಓಡಿಸಿ ಇಬ್ಬರ ಸಾವಿನ ಕಾರಣನಾದ ಅಪ್ರಾಪ್ತ ವಯಸ್ಕನಿಗೆ ಜಾಮೀನು ಸಿಕ್ಕಿದೆ. ಅದೂ ಬಂಧನವಾದ 15 ಗಂಟೆಯೊಳಗೆ ಎನ್ನುವುದು ವಿಶೇಷ. 17 ವರ್ಷದ ಈತ ಶನಿವಾರ ಪುಣೆಯಲ್ಲಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಕೋರೆಗಾಂವ್ ಪಾರ್ಕ್‌ ಸಮೀಪ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು (Crime News).

ʼʼಬಾಲಕನಿಗೆ ಜಾಮೀನು ಸಿಕ್ಕಿದೆ. ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ಕೆಲವೊಂದು ಷರತ್ತನ್ನೂ ವಿಧಿಸಿದೆ. ಯೆರವಾಡಾದ ಸಂಚಾರ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಕುಡಿತದ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯಬೇಕು ಮತ್ತು ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂಬ ಷರತ್ತುಗಳ ಮೇಲೆ ನ್ಯಾಯಾಲಯವು ನೀಡಿದೆʼʼ ಎಂದು ಆತನ ವಕೀಲ ಪ್ರಶಾಂತ್ ಪಾಟೀಲ್ ಹೇಳಿದ್ದಾರೆ. ಆರೋಪಿ ಪುಣೆಯ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಯ ಮಗ.

ಘಟನೆಯ ವಿವರ

ಪುಣೆಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ, ಮಧ್ಯಪ್ರದೇಶದ ಎಂಜಿನಿಯರ್‌ಗಳಾದ 24 ವರ್ಷದ ಅನೀಶ್ ಅವಧಿ ಮತ್ತು ಅಶ್ವಿನಿ ಕೊಶ್ತಾ ಅವರು ಬೈಕ್‌ನಲ್ಲಿ ಹಿಂದಿರುಗುತ್ತಿದ್ದಾಗ ಈ ಅಪ್ರಾಪ್ತ ಚಾಲಾಯಿಸುತ್ತಿದ್ದ, ಗಂಟೆಗೆ 200 ಕಿ.ಮೀ. ವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಅಶ್ವಿನಿ ಸುಮಾರು 20 ಅಡಿ ಎತ್ತರಕ್ಕೆ ಚಿಮ್ಮಿದ್ದರು. ಕಾರಿನ ಮೇಲೆ ಎಸೆಯಲ್ಪಟ್ಟ ಅನೀಶ್‌ ಗಂಭೀರ ಗಾಯಗೊಂಡಿದ್ದರು. ಬಳಿಕ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ʼʼಮುಂಜಾನೆ 2.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾರು ವೇಗದಲ್ಲಿತ್ತು. ಕಾರು ಬೈಕಿಗೆ ಡಿಕ್ಕಿ ಹೊಡೆದ ನಂತರ ಚಾಲಕ ಪರಾರಿಯಾಗಲು ಯತ್ನಿಸಿದ್ದ. ಸ್ಥಳೀಯರು ಆತನನ್ನು ಹಿಡಿದು ನಿಲ್ಲಿಸಿದ್ದರು. ಚಾಲಕನಲ್ಲದೆ ಕಾರಿನಲ್ಲಿ ಇನ್ನೂ ಇಬ್ಬರಿದ್ದರು. ಆ ಪೈಕಿ ಓರ್ವ ತಪ್ಪಿಸಿಕೊಂಡಿದ್ದ. ಸಿಕ್ಕ ಬಿದ್ದ ಚಾಲಕ ಸೇರಿದಂತೆ ಇಬ್ಬರನ್ನು ಜನಸಮೂಹವು ಥಳಿಸಿದೆʼʼ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಘಟನೆ ನಡೆದು 15 ನಿಮಿಷಗಳಲ್ಲಿ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆಗಾಗಲೇ ದಂಪತಿ ಅಸುನೀಗಿದ್ದರು.

ಮದ್ಯ ಸೇವಿಸಿದ್ದ

ಪಬ್‌ನಲ್ಲಿ ಪಾರ್ಟಿ ಮಾಡಿದ್ದ ಅಪ್ರಾಪ್ತರು ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯ ಕಾರಣ ನೀಡಿ ಎಫ್ಐಆರ್ ದಾಖಲಿಸಲಾಗಿದೆ. ಕಾರು ಚಲಾಯಿಸಿದ ಹದಿಹರೆಯದವನ ತಂದೆ ಮತ್ತು ಆತನಿಗೆ ಮದ್ಯ ಪೂರೈಸಿದ ಪಬ್ ವಿರುದ್ಧವೂ ದೂರು ದಾಖಲಿಸುವ ಸಾಧ್ಯತೆ ಇದೆ. ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರು, ಇದು ʼಘೋರ ಅಪರಾಧʼ ಆಗಿರುವುದರಿಂದ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ಆತನನ್ನು ಕಸ್ಟಡಿಗೆ ನೀಡಬೇಕೆಂದು ಕೋರಿದ್ದರು. ಜಾಮೀನು ಆದೇಶದ ವಿರುದ್ಧ ಅವರು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Yelahanka flyover : ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಯುವಕನ ಡೆಡ್ಲಿ ಬೈಕ್‌ ರೈಡಿಂಗ್‌!

Exit mobile version