Site icon Vistara News

Terror Attack: ಮಸೀದಿಗೆ ನುಗ್ಗಿ ನಿವೃತ್ತ ಪೊಲೀಸ್‌ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಉಗ್ರರು

police officer murder by terrorists

ಶ್ರೀನಗರ: ಭಾನುವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮಸೀದಿಗೆ ನುಗ್ಗಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ (Terror Attack) ಕೊಂದಿದ್ದಾರೆ.

ನಗರದ ಗಂಟ್ಮುಲ್ಲಾ ಬಾರಾಮುಲ್ಲಾ ಪ್ರದೇಶದ ಮಸೀದಿಯಲ್ಲಿ ಮೊಹಮ್ಮದ್ ಶಫಿ ಎಂದು ಗುರುತಿಸಲಾದ ನಿವೃತ್ತ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪ್ರಾರ್ಥನೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಪೊಲೀಸರು ಆ ಪ್ರದೇಶವನ್ನು ಸುತ್ತುವರಿದಿದ್ದು, ಭಯೋತ್ಪಾದಕರ ಶೋಧ ನಡೆಸಿದ್ದಾರೆ.

“ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಶಫಿ ಮಸೀದಿಯಲ್ಲಿ ಆಜಾನ್ ಪ್ರಾರ್ಥನೆ ಮಾಡುತ್ತಿದ್ದಾಗ ಅವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ಪೊಲೀಸರು ಆ ಪ್ರದೇಶವನ್ನು ಸುತ್ತುವರಿದಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ” ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಟಾರ್ಗೆಟ್‌ ಹತ್ಯೆಗಳು ನಡೆದಿವೆ. ಈ ತಿಂಗಳ ಆರಂಭದಲ್ಲಿ ಶ್ರೀನಗರದಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ಭಯೋತ್ಪಾದಕರು ಗುಂಡು ಹಾರಿಸಿ ಗಾಯಗೊಳಿಸಿದ್ದರು. ಮೊಹಮ್ಮದ್ ಹಫೀಜ್ ಚಾದ್ ಎಂದು ಗುರುತಿಸಲಾದ ಈ ಕಾನ್‌ಸ್ಟೇಬಲ್‌ನ ಹಮ್ದನಿಯಾ ಕಾಲೋನಿ ಬೆಮಿನಾದಲ್ಲಿರುವ ಮನೆಯ ಬಳಿ ದಾಳಿ ನಡೆಸಲಾಗಿದೆ.

ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ, ಮಸ್ರೂರ್ ಅಹ್ಮದ್ ವಾನಿ ಎಂದು ಗುರುತಿಸಲಾದ ಪೊಲೀಸ್ ಇನ್ಸ್‌ಪೆಕ್ಟರ್ ಕ್ರಿಕೆಟ್ ಆಡುತ್ತಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು. ಅಧಿಕಾರಿಗೆ ಶ್ರೀನಗರದ ಪಾರಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ರಾಜಧಾನಿಯ ಏಮ್ಸ್‌ಗೆ ಸ್ಥಳಾಂತರಿಸಲಾಗಿತ್ತು.

ಏತನ್ಮಧ್ಯೆ, ರಾಜೌರಿ ಸೆಕ್ಟರ್‌ನ ಡೇರಾ ಕಿ ಗಲಿ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರನ್ನು ಹಿಡಿಯಲು ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಸೇನಾ ಯೋಧರನ್ನು ಭಯೋತ್ಪಾದಕರು ಹತ್ಯೆ ಮಾಡಿದ ನಂತರ ಈ ಗುಂಡಿನ ಕಾಳಗ ನಡೆದಿದೆ.

ಇದನ್ನೂ ಓದಿ: Terror Attack: ಕಾಶ್ಮೀರದಲ್ಲಿ ಸೇನಾ ಟ್ರಕ್ ಮೇಲೆ ಉಗ್ರರ ಹೊಂಚುದಾಳಿ, ಭಾರೀ ಗುಂಡಿನ ಚಕಮಕಿ

Exit mobile version