Site icon Vistara News

Terrorism Watch: ಮೋದಿ ಸರ್ಕಾರದ ಅವಧಿಯಲ್ಲಿ ಕಾಶ್ಮೀರದ ಹಿಂಸಾಚಾರ ಏನಾಯ್ತು; ಅಂಕಿಅಂಶ ಹೇಳುವುದೇನು?

jammu kashmir in NDA

ಹೊಸದಿಲ್ಲಿ: ಯುಪಿಎ ಸರ್ಕಾರಕ್ಕಿಂತ (UPA Govt) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ ಸರ್ಕಾರದ (NDA Govt) ಅವಧಿಯಲ್ಲಿ ಜಮ್ಮು- ಕಾಶ್ಮೀರದಲ್ಲಿ (Jammu and Kashmir) ಹಿಂಸಾಚಾರ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಭಯೋತ್ಪಾದನೆಯ ಅಂಕಿಅಂಶಗಳನ್ನು (Terrorism Watch) ಸಂಗ್ರಹಿಸುವ ವೆಬ್‌ಸೈಟ್ “ದಕ್ಷಿಣ ಏಷ್ಯಾ ಭಯೋತ್ಪಾದನೆ ಜಾಲತಾಣʼ (South Asia Terrorism Portal- SATP) ಯ ದತ್ತಾಂಶವು NDA ಆಡಳಿತದಲ್ಲಿ ಹಿಂಸೆ ಪ್ರಮಾಣ ಕಡಿಮೆಯಾದುದನ್ನು ಸಾಬೀತುಪಡಿಸಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯ ಆಗಸ್ಟ್ 5, 2019ರವರೆಗೆ ಅಸ್ತಿತ್ವದಲ್ಲಿತ್ತು. ನಂತರ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆಯಾಯಿತು. ಇದೀಗ ಈ ಪ್ರದೇಶ ಬಹುತೇಕ ಶಾಂತಿಯುತವಾಗಿದ್ದು, ಒಮ್ಮೆ ಇಲ್ಲಿ ಆವರಿಸಿದ್ದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆಗಳು ಅಳಿದಿವೆ ಅಥವಾ ನಿಯಂತ್ರಣದಲ್ಲಿವೆ. ಎರಡೂ ಸರ್ಕಾರಗಳ ನಡುವಿನ ಡೇಟಾ ಹೋಲಿಕೆಯ ಮೂಲಕ ಹಲವಾರು ಆಸಕ್ತಿದಾಯಕ ಸಂಗತಿಗಳು ಕಂಡುಬಂದಿವೆ.

ಯುಪಿಎ ಸರ್ಕಾರದ ಅವಧಿಯಲ್ಲಿ, 2004 ಮತ್ತು 2014ರ ನಡುವೆ, ಜಮ್ಮು ಕಾಶ್ಮೀರದಲ್ಲಿ ಒಟ್ಟು 4,117 ಭಯೋತ್ಪಾದಕ ದಾಳಿ ಘಟನೆಗಳು ವರದಿಯಾದವು. ಅಂದರೆ ವರ್ಷಕ್ಕೆ ಸರಾಸರಿ 412ರಂತೆ. ವಾರ್ಷಿಕ ಸರಾಸರಿ 150 ನಾಗರಿಕರು ಕೊಲ್ಲಲ್ಪಟ್ಟರು. ಪ್ರತಿ ವರ್ಷ 116 ಭದ್ರತಾ ಪಡೆಗಳ ಸಿಬ್ಬಂದಿ ಕೊಲ್ಲಲ್ಪಟ್ಟರು.

ಎನ್‌ಡಿಎ ಅವಧಿಯಲ್ಲಿ ಅದು ಗಣನೀಯವಾಗಿ ಕಡಿಮೆಯಾಗಿದೆ. ಲಭ್ಯವಿರುವ ಮಾಹಿತಿಯಂತೆ 2014ರಿಂದ ಆಗಸ್ಟ್ 31, 2023ರವರೆಗೆ ವಾರ್ಷಿಕ ಸರಾಸರಿ 128ಕ್ಕೆ ಇಳಿದಿದ್ದು, 69%ರಷ್ಟು ಕಡಿಮೆಯಾಗಿವೆ. ನಾಗರಿಕರ ಹತ್ಯೆಗಳು 77%ರಷ್ಟು ಕಡಿಮೆಯಾಗಿವೆ.

ಭಯೋತ್ಪಾದಕ ಜಾಲಗಳ ಮೇಲೆ ಹೆಚ್ಚಿದ ನಿರ್ಬಂಧ, ಎನ್‌ಕೌಂಟರ್‌ಗಳು, ಉಗ್ರ ನಾಯಕರ ಬಂಧನ ಇತ್ಯಾದಿಗಳು ಭಯೋತ್ಪಾದಕ ಚಟುವಟಿಕೆಯನ್ನು ಕಡಿಮೆಗೊಳಿಸಿವೆ. ಹೀಗಾಗಿ ಭದ್ರತಾ ಪಡೆಗಳ ಸಿಬ್ಬಂದಿಯ ಹತ್ಯೆಗಳಲ್ಲೂ ಕಡಿಮೆಯಾಗಿದೆ. ಇದು ಎನ್‌ಡಿಎ ಅವಧಿಯಲ್ಲಿ ಶೇ.50ರಷ್ಟು ಕಡಿಮೆಯಾಗಿದೆ.

ಕಣಿವೆಯೊಳಗೆ ಪಾಕಿಸ್ತಾನ ಮೂಲದ ಭಯೋತ್ಪಾದಕರ ಒಳನುಸುಳುವಿಕೆ, ಹೆಚ್ಚಿದ ಮತ್ತು ಪರಿಣಾಮಕಾರಿ ಭದ್ರತಾ ಜಾಲದಿಂದಾಗಿ ನಿರ್ಬಂಧಿತವಾಗಿದೆ. 370ನೇ ವಿಧಿ ರದ್ದತಿಯ ನಂತರ ಪ್ರಾರಂಭವಾದ ಭಯೋತ್ಪಾದಕ ಹಣಕಾಸು ಮೇಲಿನ ಶಿಸ್ತುಕ್ರಮದೊಂದಿಗೆ ಇದರ ಪರಿಣಾಮ ದ್ವಿಗುಣಗೊಂಡಿದೆ. ಇದು ಪ್ರತ್ಯೇಕತಾವಾದಿಗಳ, ಭಯೋತ್ಪಾದಕರ ನಿಧಿಸಹಾಯ ಜಾಲಗಳನ್ನು ಹತ್ತಿಕ್ಕಿದ್ದು, ಸ್ಥಳೀಯ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿದೆ.

ಯುಪಿಎ ಅವಧಿಯಲ್ಲಿ, ಜಮ್ಮು ಕಾಶ್ಮೀರದಲ್ಲಿ 4,200ಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ಎನ್‌ಡಿಎ ಆಡಳಿತದಲ್ಲಿ ಕೊಲ್ಲಲಾದವರ ಸಂಖ್ಯೆ 1,700ರಷ್ಟಿದೆ. ರಾಜ್ಯವು 2004ರಿಂದ 2013ರವರೆಗಿನ 10 ವರ್ಷಗಳಲ್ಲಿ 627 ಪ್ರಮುಖ ಭಯೋತ್ಪಾದಕ ಘಟನೆಗಳನ್ನು ಕಂಡಿದೆ. ಇದು ಕಳೆದ ಒಂಬತ್ತು ವರ್ಷಗಳ ಎನ್‌ಡಿಎ ಆಡಳಿತದ ಅವಧಿಯಲ್ಲಿ 49%ರಷ್ಟು ಕಡಿಮೆಯಾಗಿದೆ. 2004ರಿಂದ 2013ರವರೆಗೆ ಪ್ರತಿ ವರ್ಷ ಸರಾಸರಿ 348 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಡಿಎ ವರ್ಷಗಳಲ್ಲಿ 128 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಯುಪಿಎ ಅವಧಿಯಲ್ಲಿ ಜೆ&ಕೆ ವರ್ಷಕ್ಕೆ ಸರಾಸರಿ ಆರು ಆತ್ಮಹತ್ಯಾ ದಾಳಿಗಳನ್ನು ಕಂಡಿತು. ಇದು ಎನ್‌ಡಿಎ ಕಾಲದಲ್ಲಿ ನಾಲ್ಕು ಆತ್ಮಹತ್ಯಾ ದಾಳಿಗಳಿಗೆ ಇಳಿದಿದೆ. ವಾರ್ಷಿಕ ಸರಾಸರಿ ಸ್ಫೋಟಗಳ ಸಂಖ್ಯೆ 96ರಿಂದ 42ಕ್ಕೆ ಇಳಿದಿದೆ.

ಕಣಿವೆಯಲ್ಲಿ ಪ್ರತ್ಯೇಕತಾವಾದಿ ಹಾಗೂ ಪಾಕಿಸ್ತಾನದ ಪರ ರಾಜಕೀಯ ದನಿಗಳು ಇನ್ನೂ ಇರುವುದೇ ಭಯೋತ್ಪಾದನೆ ಉಳಿದುಕೊಳ್ಳಲು ಮೂಲ ಕಾರಣವಾಗಿದೆ. ಪ್ರತ್ಯೇಕತಾವಾದಿ ಸಂಘಟನೆಗಳಾದ JKLF, ಹುರಿಯತ್ ಕಾನ್ಫರೆನ್ಸ್ ಮತ್ತು ಜಮಾತ್-ಎ-ಇಸ್ಲಾಮಿ (JeI) ಭಯೋತ್ಪಾದಕರಿಗೆ ಬೆಂಬಲ ಜಾಲಗಳಾಗಿ ಕಾರ್ಯನಿರ್ವಹಿಸುತ್ತಿವೆ. ಭಯೋತ್ಪಾದಕರಿಗೆ ಹಣಕಾಸು ಒದಗಿಸುತ್ತಿರುವ ಆರೋಪಗಳು ಇವರ ಮೇಲಿವೆ. ಭಾರತ ವಿರೋಧಿ ಪ್ರಚಾರ, ಮೂಲಭೂತವಾದ ಪ್ರೇರೇಪಣೆಗಳು ಅವರ ದೈನಂದಿನ ಚಟುವಟಿಕೆಗಳಾಗಿವೆ.

ಭಾರತ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ (supreme court) ಇತ್ತೀಚೆಗೆ ಸಲ್ಲಿಸಿದ ಅಫಿಡವಿಟ್‌ನ ಪ್ರಕಾರ, 370ನೇ ವಿಧಿ ರದ್ದತಿಯ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕ ಘಟನೆಗಳು 45%, ಒಳನುಸುಳುವಿಕೆ 90%, ಕಲ್ಲು ತೂರಾಟ 97% ಕಡಿಮೆಯಾಗಿವೆ. 2018ರ ಡೇಟಾಗೆ ಹೋಲಿಸಿದರೆ 66%ನಷ್ಟು ಸೇನಾಪಡೆಗಳ ಸಾವುನೋವುಗಳು ಕಡಿಮೆಯಾಗಿವೆ. 34 ವರ್ಷಗಳ ನಂತರ, ಶ್ರೀನಗರದಲ್ಲಿ ಜುಲೈ 27, 2023ರಂದು ಯಾವುದೇ ಭಯೋತ್ಪಾದನೆ ಚಟುವಟಿಕೆಯ ಭೀತಿಯಿಲ್ಲದೆ ಮೊಹರಂ ಮೆರವಣಿಗೆ ಯಶಸ್ವಿಯಾಗಿ ನಡೆಯಿತು. 25,000ಕ್ಕೂ ಹೆಚ್ಚು ಶಿಯಾ ಮುಸ್ಲಿಮರು ಇದರಲ್ಲಿ ಭಾಗವಹಿಸಿದರು.

ಇದನ್ನೂ ಓದಿ: The Kerala Story : ಕೇರಳ ಸ್ಟೋರಿಯಲ್ಲಿ ಹೊಸ ಮಾದರಿಯ ಭಯೋತ್ಪಾದನೆ ಅನಾವರಣ ಎಂದ ಜೆ.ಪಿ ನಡ್ಡಾ

Exit mobile version