Site icon Vistara News

New Year detox: ಸಂಭ್ರಮ ಮುಗೀತಲ್ಲ, ಇನ್ನೀಗ ಡಿಟಾಕ್ಸ್‌ ಮಾಡಿ!

The celebration is over, lets detox the body now

ಜೆಗಳೆಲ್ಲ ಖರ್ಚಾಗಿವೆ, ಪಾರ್ಟಿಗಳು ಮುಗಿದಿವೆ, ಬದುಕು ಮಾಮೂಲಾಗಿದೆ. ಇಷ್ಟೂ ದಿನಗಳು ಹೊಸ ವರ್ಷವನ್ನು ಸ್ವಾಗತಿಸುವ(New Year Celebration) ನೆವದಲ್ಲಿ, ಹಳೆಯದನ್ನು ಕಳುಹಿಸುವ ಕನವರಿಕೆಯಲ್ಲಿ ಕುಣಿದು, ಕುಡಿದು, ನಿದ್ದೆಗೆಟ್ಟು, ತಿಂದು ತೇಗಿ ತೂರಾಡಿದ್ದಾಗಿದೆ. ಇನ್ನೀಗ ಡಿಟಾಕ್ಸ್‌ ಮಾಡಬೇಕಲ್ಲ(detox the body). ಸಂಭ್ರಮದ ಹೆಸರಿನಲ್ಲಿ ಚಿಪ್ಸ್‌(Chips), ಸಮೋಸಾ(Samosa), ಕೇಕ್‌(Cake), ಸೋಡಾ ಮುಂತಾದ ಸಂಸ್ಕರಿತ ಆಹಾರಗಳೇ ನಿಮ್ಮ ಸಂಸ್ಕಾರವಾಗಿಬಿಟ್ಟಿದ್ದರೆ, ಅದನ್ನೀಗ ಬಿಡುವ ಸಮಯ. ಗುಜರಿ ಆಹಾರಗಳನ್ನು ಜೀರ್ಣ ಮಾಡಿ ಸುಸ್ತಾಗಿರುವ ದೇಹಕ್ಕೆ ಒಳ್ಳೆಯ ಸತ್ವಗಳನ್ನು ನೀಡಿ, ಜೊತೆಗೆ ವಿಶ್ರಾಂತಿಯನ್ನೂ ಕರುಣಿಸಿ, ನಮ್ಮನ್ನು ನಾವೇ ಕಾಪಾಡಿಕೊಳ್ಳುವ ಸಮಯ. ಏನು ಹಾಗೆಂದರೆ? ಇದಕ್ಕೇನು ಮಾಡಬೇಕು?(New Year detox)

ಮೊದಲಿಗೆ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡೋಣ. ಅಪರೂಪಕ್ಕೆ ಭೇಟಿ ಮಾಡಿದ ಬಂಧುಗಳು, ಮಿತ್ರರೊಂದಿಗೆ ನಿದ್ದೆಗೆಟ್ಟು ಹರಟಿದ್ದು ಸರಿ, ಆದರೆ ಕಡಿಮೆಯಾದ ನಿದ್ದೆಯನ್ನೀಗ ಸರಿದೂಗಿಸಬೇಕಲ್ಲ. ತಿರುಗಾಟ, ಗದ್ದಲದಲ್ಲೇ ವಾರಗಟ್ಟಲೆ ಕಳೆದಿದ್ದರೆ ಮನಸ್ಸನ್ನೀಗ ಶಾಂತವಾಗಿಸುವ ಸಮಯ. ಸಿಹಿ, ಕರಿದ ತಿಂಡಿಗಳು ದೇಹದಲ್ಲಿ ಜಮೆಯಾಗದಂತೆ ಮಾಡುವ ಮೊದಲ ಹಂತವಾಗಿ ದೇಹಕ್ಕೆ ಹೆಚ್ಚಿನ ನೀರು ಒದಗಿಸುವ ಹೊತ್ತು. ಹೀಗೆ ಸಂಭ್ರಮಿಸಿ ಬಳಲಿದ ದೇಹ-ಮನಸ್ಸುಗಳನ್ನು ತಹಬಂದಿಗೆ ತರುವ ಕೆಲಸವೀಗ ಆಗಬೇಕಿದೆ. ಮೊದಲಿಗೆ…

ಡಿಟಾಕ್ಸ್‌ ಪೇಯಗಳು

ದಿನಕ್ಕೆಂಟು ಗ್ಲಾಸ್‌ ನೀರು ಅಗತ್ಯವಾಗಿ ದೇಹಕ್ಕೆ ಬೇಕು. ಜೊತೆಗೆ, ಬೆಳಗಿನ ಖಾಲಿ ಹೊಟ್ಟೆಯಲ್ಲಿ ಎ-ಬಿ-ಸಿ ರಸ (ಆಪಲ್-ಬೀಟ್-ಕ್ಯಾರೆಟ್‌ ರಸ), ಸಕ್ಕರೆ ಅಥವಾ ಮತ್ತೇನನ್ನೂ ಸೇರಿಸದ ಹಣ್ಣಿನ ರಸ, ಜೀರಿಗೆ ನೀರು, ಧನಿಯಾ ನೆನೆಸಿದ ನೀರು, ಸೋಂಪು ನೆನೆಸಿದ ನೀರು, ಜೇನುತುಪ್ಪ ಸೇರಿಸದೆ ಇರುವ ಹರ್ಬಲ್‌ ಚಹಾಗಳು… ಹೀಗೆ ಡಿಟಾಕ್ಸ್‌ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಮಾತ್ರವಲ್ಲ, ನಡುಬೆಳಗಿನ ಹೊತ್ತು, ಅಂದರೆ ಬೆಳಗಿನ ೧೧ರ ಆಜುಬಾಜು ಅಥವಾ ಸಂಜೆಯ ಸಮಯದಲ್ಲಿ ಬಾಯಾಡುವುದನ್ನು ನಿಲ್ಲಿಸಿ ತಾಜಾ ಹಣ್ಣುಗಳನ್ನು ಅಥವಾ ಹಣ್ಣಿನ ರಸಗಳನ್ನು, ಎಳನೀರು, ಎಲೆಕ್ಟ್ರೋಲೈಟ್‌ ಪೇಯಗಳನ್ನು ಸೇವಿಸಬಹುದು. ಹರ್ಬಲ್‌ ಚಹಾಗಳನ್ನು ಊಟದ ಎರಡು ತಾಸುಗಳ ನಂತರ ಸೇವಿಸಿದರೆ ಹೆಚ್ಚು ಪರಿಣಾಮಕಾರಿ.

ವ್ಯಾಯಾಮ

ಹೊಸದಾಗಿ ಮಾಡುವವರು, ʻಮೊದಲೆಲ್ಲಾ ಮಾಡುತ್ತಿದ್ದೆ, ಈಗೀಗ ಸ್ವಲ್ಪ…!ʼ ಎನ್ನುವವರು, ನೆನಪಾದಾಗ ಮಾಡುವವರು- ಇಂಥ ಎಲ್ಲರಿಗೂ ಇದು ಅನ್ವಯಿಸುವಂಥದ್ದು. ವರ್ಷ ಹೊಸದಾದರೂ ಹಳೆಯದಾದರೂ ಬೆವರು ಹರಿಸಲೇಬೇಕು ಎಂಬ ಗಟ್ಟಿ ಮನಸ್ಸಿನವರಿಗೆ ಇವೆಲ್ಲ ಅಗತ್ಯವೇ ಇಲ್ಲವಷ್ಟೆ. ಒಂದರ್ಧ ತಾಸಿನ ನಡಿಗೆ, ಲಘುವಾಗ ಏರೋಬಿಕ್ಸ್‌ ಅಥವಾ ಯೋಗ ಮುಂತಾದವರು ದೇಹದ ಪರಿಚಲನೆಯನ್ನು ಚುರುಕು ಮಾಡಿ, ಚಯಾಪಚಯವನ್ನು ಹೆಚ್ಚಿಸಿ, ಡಿಟಾಕ್ಸ್‌ ಪ್ರಕ್ರಿಯೆಗೆ ಜೀವ ತುಂಬುತ್ತವೆ. ನೆನಪಿಡಿ, ದೇಹ ಬೆವರಿದಷ್ಟೂ ನಿರ್ಮಲವಾಗುತ್ತದೆ. ಇದರಿಂದ ಜಡವಾಗಿರುವ ದೇಹ-ಮನಸ್ಸುಗಳೆರಡೂ ಚುರುಕಾಗುತ್ತವೆ.

ಸಿಹಿ ಸಾಕು

ಇಷ್ಟೂ ದಿನಗಳಲ್ಲಿ ಸಾಕಷ್ಟು ಸಿಹಿ ತಿನಿಸುಗಳು ಹೊಟ್ಟೆ ಸೇರಿವೆ. ತಿಂದಷ್ಟೂ ಸಾಕು ಎನಿಸದಂಥ ಮಾಯೆಯದು ಎಂಬುದು ನಿಜವಾದರೂ, ಇನ್ನೊಂದೆರಡು ವಾರಗಳ ಕಾಲ ಸಿಹಿ ತಿಂಡಿಗಳಿಗೆ ಕಡಿವಾಣ ಹಾಕಿ. ಮಾತ್ರವಲ್ಲ, ಬೇಕರಿ ತಿಂಡಿಗಳು, ಕೋಲಾ, ಬಾಟಲಿಯ ಬಣ್ಣದ ಪಾನೀಯಗಳು- ಇವೂ ಅದೇ ಪಟ್ಟಿಯಲ್ಲಿವೆ. ಆಹಾರಗಳು ಲಘುವಾಗಿರಲಿ, ಎಣ್ಣೆ ತಿಂಡಿಗಳಿಗೂ ಸ್ವಲ್ಪ ಬಿಡುವು ಕೊಡಿ. ಅರೆದು ಸುಸ್ತಾಗಿರುವ ಹೊಟ್ಟೆಗೆ ಸ್ವಲ್ಪವಾದರೂ ವಿಶ್ರಾಂತಿ ಬೇಡವೇ?

ಆಹಾರ

ಆಹಾರ ಲಘುವಾಗಿರಲಿ, ಸಾಕಷ್ಟು ನಾರಿನಿಂದ ಕೂಡಿರಲಿ. ಸೊಪ್ಪು, ತರಕಾರಿಗಳು, ಹಣ್ಣುಗಳು ಆಹಾರದ ಮುಖ್ಯ ಭಾಗವಾಗಿರಲಿ. ಜೀರ್ಣಿಸುವುದಕ್ಕೆ ಕಷ್ಟವಾಗುವಂಥ ಯಾವುದೇ ಆಹಾರಗಳು ಈ ಹಂತದಲ್ಲಿ ಬೇಡ. ಹೆಚ್ಚಿನ ವಿಟಮಿನ್‌ ಮತ್ತು ಖನಿಜಗಳು ದೇಹಕ್ಕೀಗ ಬೇಕು. ಇದರಿಂದ ಶರೀರದಲ್ಲಿನ ಉರಿಯೂತಗಳನ್ನು ಶಮನ ಮಾಡುವುದಕ್ಕೆ ಸಾಧ್ಯವಿದೆ. ಇನ್ನೆರಡು ವಾರಗಳಲ್ಲಿ ದೇಹ ಮೊದಲಿನಂತೆಯೇ ಆಗಬೇಕೆಂಬುದು ನಮ್ಮ ಗುರಿಯಾಗಿದ್ದರೆ, ಇದಾವುದೂ ಕಷ್ಟವಲ್ಲ.

ಸಂಕೀರ್ಣ ಪಿಷ್ಟಗಳು

ಇಡೀ ಧಾನ್ಯಗಳು, ಸಿರಿ ಧಾನ್ಯಗಳು, ಮೊಳಕೆ ಕಾಳುಗಳು, ಬೇಳೆಗಳು ಇಂಥವೆಲ್ಲ ಸಂಕೀರ್ಣ ಪಿಷ್ಟದ ಸಾಲಿಗೆ ಸೇರುತ್ತವೆ. ಜೊತೆಗೆ, ದೇಹಕ್ಕೆ ಪ್ರೊಟೀನ್‌ ಕೊರತೆಯಾಗದಂತೆ ನೋಡಿಕೊಳ್ಳಿ. ಡಿಟಾಕ್ಸ್‌ನ ಆರಂಭಿಕ ಹಂತದ ಮೂರ್ನಾಲ್ಕು ದಿನಗಳ ನಂತರ ಸಂಕೀರ್ಣ ಪಿಷ್ಟಗಳು ಮತ್ತು ಪ್ರೊಟೀನ್‌ ಸೇವನೆಯನ್ನು ಹೆಚ್ಚಿಸುವುದು ಸೂಕ್ತ.

ಈ ಸುದ್ದಿಯನ್ನೂ ಓದಿ: Detox Drinks: ಮೊಡವೆ, ಕಲೆಯಿಂದ ದೂರವಿರಲು ಇಲ್ಲಿವೆ ಡಿಟಾಕ್ಸ್‌ ಡ್ರಿಂಕ್ಸ್‌!

Exit mobile version