ಜಲಂಧರ್: ದ ಗ್ರೇಟ್ ಖಲಿ ಯಾರಿಗೆ ಗೊತ್ತಿಲ್ಲ ಹೇಳಿ? ದಲೀಪ್ ಸಿಂಗ್ ರಾಣಾ ಎಂಬ ಹೆಸರಿದ್ದರೂ ಖಲಿ ಎಂದೇ ಹೆಸರಾದ ಮಾಜಿ WWE ವರ್ಲ್ಡ್ ಹೆವಿವೇಟ್ ಚಾಂಪಿಯನ್. ತಮ್ಮ ದೈತ್ಯ ದೇಹ, ಹುರಿಗಟ್ಟಿದ ಮೈ, ಹಾಕಿದ ಷರಟನ್ನೇ ಹರಿದು ಹೊರಬರುತ್ತದೆಯೋ ಎಂಬಂತೆ ಭಾಸವಾಗುವ ಮಾಂಸ ಖಂಡಗಳು, ತೀಕ್ಷ್ಣವಾದ ಕಣ್ಣು ಮತ್ತು ಅಷ್ಟೇ ವ್ಯಗ್ರವಾದ ಮುಖ. ಒಬ್ಬ ಕುಸ್ತಿಪಟುವಿಗೆ ಹೇಳಿ ಮಾಡಿದ ದೃಢಕಾಯ ಖಲಿಯದ್ದು.
ಇಂಥ ಗ್ರೇಟ್ ಖಲಿ ಟೋಲ್ ಪ್ಲಾಜಾವೊಂದರ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿ ಸುದ್ದಿಯಾಗಿದ್ದಾನೆ. ಅವನು ಕೋಪದಲ್ಲಿ ಮಾತನಾಡಿರುವ ವಿಡಿಯೊ ವೈರಲ್ ಆಗಿದೆ. ಸ್ವತಃ ಅವನೆ ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾನೆ. ಆದರೆ, ಇದು ಅವರಿಗೇ ತಿರುಗುಬಾಣವಾಗಿದೆ. ಟೋಲ್ ಸಿಬ್ಬಂದಿಯೊಂದರಿಗೆ ಜಗಳವಾಡುವಷ್ಟು ಸಣ್ಣತನ ಮೆರೆದರೇ ಈ ದೊಡ್ಡ ಮನುಷ್ಯ ಅಂತೆಲ್ಲ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ನಡುವೆ, ಖಲಿ ಮಾತ್ರ ಅವರು ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದರು ಎಂದು ಆರೋಪಿಸಿದ್ದಾನೆ.
Viral Video of Argument between WWE Superstar ‘The Great Khali’ and Toll workers, In Punjab. #greatkhali #slap #tollplaza pic.twitter.com/Cis4zqaXjz
— True Scoop (@TrueScoopNews) July 11, 2022
ಏನಿದೆ ವಿಡಿಯೊದಲ್ಲಿ?
ಖಲಿ ಒಂದು ವಾಹನದಲ್ಲಿ ಹೋಗುತ್ತಿದ್ದಾಗ ಟೋಲ್ ಪ್ಲಾಜಾ ಸಿಬ್ಬಂದಿ ತಡೆಯುತ್ತಾನೆ. ಹಣ ಕೊಡದೆ ಬಿಡಲಾಗದು ಎನ್ನುತ್ತಾನೆ. ಆಗ ಗ್ರೇಟ್ ಖಲಿ ನಾನ್ಯಾರು ಗೊತ್ತಾ ಎನ್ನುವ ಅರ್ಥದಲ್ಲಿ ವಾದ ಮಾಡುತ್ತಾನೆ. ಆಗ ಸಿಬ್ಬಂದಿ ಹಾಗಿದ್ದರೆ ನಿಮ್ಮ ಐಡಿ ಕಾರ್ಡ್ ತೋರಿಸಿ ಎನ್ನುತ್ತಾನೆ. ಇದನ್ನು ಕೇಳಿದಾಗ ಸಿಟ್ಟುಗೊಂಡ ಖಲಿ ಕಾರ್ಮಿಕನಿಗೆ ಕಪಾಳ ಮೋಕ್ಷ ಮಾಡುತ್ತಾನೆ.
ಗ್ರೇಟ್ ಕಲಿ ಟೋಲ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದನ್ನು ನೋಡಿದ ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಾರೆ. ಖಲಿ ನಾನ್ಯಾಕೆ ಕಪಾಳ ಮೋಕ್ಷ ಮಾಡಿದೆ ಎಂದು ವಿವರಿಸುತ್ತಾನೆ. ಜತೆಗೆ ತನ್ನ ವಾಹನದ ಸುತ್ತಲೂ ಇರುವವರನ್ನು ವಾದ ಮಾಡಬೇಡಿ ಎಂದು ಎಚ್ಚರಿಸುತ್ತಾನೆ. ಅಲ್ಲಿದ್ದ ಜನರೂ ನಿಮ್ಮ ಗುರುತಿನ ಚೀಟಿಯನ್ನು ತೋರಿಸಿ ಎಂದಾಗ, ದಿ ಗ್ರೇಟ್ ಖಲಿ ತನ್ನ ಬಳಿ ಇಲ್ಲ ಎಂದು ಹೇಳುತ್ತಾನೆ.
ನನ್ನ ಕಾರು ಹಾದು ಹೋಗಲು ಗೇಟ್ ತೆರೆಯುವಂತೆ ಒತ್ತಾಯಿಸುತ್ತಾನೆ ಖಲಿ. ಹಣ ಕೊಡದೆ ಬಿಡುವುದಿಲ್ಲ ಎಂದು ಟೋಲ್ ಕಾರ್ಮಿಕನೂ ಹೇಳುತ್ತಾನೆ. ಆಗ, ಗ್ರೇಟ್ ಖಲಿ ವಾಹನದಿಂದ ಹೊರಬಂದು, ʻʻನೀವು ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದೀರಿʼ ಎಂದು ಆರೋಪಿಸುತ್ತಾನೆ.
ಕೊನೆಗೆ ಖಲಿ ತಾನೇ ಸ್ವತಃ ಗೇಟ್ ತೆಗೆಯಲು ಹೋಗುತ್ತಾನೆ. ಆಗಲೂ ಕೆಲಸಗಾರ ಗೇಟನ್ನು ಹಿಡಿದುಕೊಳ್ಳಲು ಯತ್ನಿಸುತ್ತಾನೆ. ಗ್ರೇಟ್ ಖಲಿ ಕೆಲಸಗಾರನನ್ನು ಎಳೆದಾಡುತ್ತಾನೆ. ನಂತರ ಹೇಗೋ ತಮ್ಮ ವಾಹನದೊಂದಿಗೆ ಅಲ್ಲಿಂದ ಹೋಗುತ್ತಾರೆ. ಘಟನೆ ನಿಖರವಾಗಿ ಯಾವ ದಿನ ನಡೆದಿದೆ ಎಂದು ತಿಳಿದುಬಂದಿಲ್ಲ.
ಇದನ್ನೂ ಓದಿ: ಶಿಂಜೊ ಅಬೆ ಭಾಷಣ ಮಾಡುತ್ತಿದ್ದಾಗಲೇ ಬಿತ್ತು ಗುಂಡೇಟು; ಘಟನಾ ಸ್ಥಳದ ವಿಡಿಯೋ ವೈರಲ್