ಪಟನಾ: “ಎಲ್ಲಿಯವರೆಗೆ ಸಮೋಸಗಳಲ್ಲಿ ಆಲೂ ಇರುತ್ತದೆಯೋ, ಅಲ್ಲಿಯವರೆಗೆ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಅಧಿಕಾರದಲ್ಲಿರುತ್ತಾರೆ” ಎಂಬ ಮಾತಿತ್ತು. ಆದರೆ, ಈ ಮಾತು ಈಗ ಬದಲಾಗಿದೆ. “ಬಿಹಾರದಲ್ಲಿ (Bihar Politics) ಯಾವುದೇ ಪಕ್ಷಕ್ಕೆ ಮತ ನೀಡಿ, ಯಾವ ಪಕ್ಷವೇ ಹೆಚ್ಚು ಸ್ಥಾನ ಗೆಲ್ಲಲಿ, ನಿತೀಶ್ ಕುಮಾರ್ (Nitish Kumar) ಅವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ” ಎಂಬ ಮಾತು ಚಾಲ್ತಿಗೆ ಬಂದಿದೆ. ಅಷ್ಟರಮಟ್ಟಿಗೆ, ನಿತೀಶ್ ಕುಮಾರ್ ಅವರು ಬಿಹಾರ ರಾಜಕೀಯದಲ್ಲಿ ಛಾಪು ಮೂಡಿಸಿದ್ದಾರೆ. ಆರ್‌ಜೆಡಿ ಜತೆಗಿನ ಮೈತ್ರಿಗೆ ವಿದಾಯ ಹೇಳಿ, ಬಿಜೆಪಿ ಜತೆ ಕೈಜೋಡಿಸಿರುವ ಹೊತ್ತಿನಲ್ಲಿ ಅವರ ರಾಜಕೀಯ ಜೀವನದ ಏಳು-ಬೀಳು, ಮೈತ್ರಿ ಬದಲಾವಣೆಯ ಇತಿಹಾಸವನ್ನೊಮ್ಮೆ ಓದಿ.
24 ವರ್ಷ ಆಡಳಿತ ನಡೆಸಿದ್ದು ಹೀಗೆಯೇ…
ಬಿಹಾರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ರಚಿಸದಿದ್ದರೂ ನಿತೀಶ್ ಕುಮಾರ್ ಅವರು 2005ರಿಂದಲೂ (8 ತಿಂಗಳು ಹೊರತುಪಡಿಸಿ) ಮುಖ್ಯಮಂತ್ರಿಯಾಗಿದ್ದಾರೆ. ಇಷ್ಟು ವರ್ಷಗಳಲ್ಲಿ ಅವರು ಬಿಜೆಪಿ ಜತೆಗೂಡಿ 20 ವರ್ಷ ಸಿಎಂ ಹುದ್ದೆಯಲ್ಲಿದ್ದರು. ಹಾಗೆಯೇ, ಮಹಾಘಟಬಂಧನ್ ಎಂಬ ಮೈತ್ರಿ ರಚಿಸಿ 4 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಿತೀಶ್ ಕುಮಾರ್ ಅವರು ಮೈತ್ರಿಪಕ್ಷಗಳನ್ನು ಆಗಾಗ ಬದಲಾಯಿಸಿದರೂ, ಅವರೇ ಸಿಎಂ ಆದರೂ, ಬೇರೆ ಪಕ್ಷಗಳು ಮಾತ್ರ ಅವರಿಗೆ ಆಫರ್ ನೀಡುತ್ತಲೇ ಇರುತ್ತವೆ. ಈಗ ಬಿಜೆಪಿಯು ಅವರ ಜತೆ ಮತ್ತೆ ಜೋಡಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
#WATCH | Patna | Bihar outgoing CM and JD(U) president Nitish Kumar says, "Today, I have resigned as the Chief Minister and I have also told the Governor to dissolve the government in the state. This situation came because not everything was alright…I was getting views from… pic.twitter.com/wOVGFJSKKH
— ANI (@ANI) January 28, 2024
ನಿತೀಶ್ ಕುಮಾರ್ ರಾಜಕೀಯ ಹಾದಿ
- 1985: ಮೊದಲ ಬಾರಿಗೆ ಬಿಹಾರ ವಿಧಾನಸಭೆಗೆ ಆಯ್ಕೆ
- 1998: ಮೊದಲ ಬಾರಿಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ನಿತೀಶ್ ಕುಮಾರ್, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯ
- 2000: ಬಿಜೆಪಿ ಬೆಂಬಲದೊಂದಿಗೆ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪದಗ್ರಹಣ, ವಿಶ್ವಾಸಮತ ಗೆಲ್ಲಲು ಆಗದೆ ಏಳು ದಿನದಲ್ಲೇ ರಾಜೀನಾಮೆ
- 2003: ಜನತಾದಳದೊಂದಿಗೆ ಸಮತಾ ಪಕ್ಷ ವಿಲೀನ, ಸಿಎಂ ಆಗಿ ಆಯ್ಕೆಯಾದ ನಿತೀಶ್
- 2005: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಗೆ ಬಹುಮತ, ಸಿಎಂ ಆದ ನಿತೀಶ್ ಕುಮಾರ್
- 2013: ನರೇಂದ್ರ ಮೋದಿ ಮೇಲಿನ ಮುನಿಸಿನಿಂದಾಗಿ ಬಿಜೆಪಿ ಜತೆಗಿನ ಮೈತ್ರಿಗೆ ವಿದಾಯ
- 2014: ಲೋಕಸಭೆ ಚುನಾವಣೆಯ ಸೋಲಿನ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ
- 2015: ಆರ್‌ಜೆಡಿ ಜತೆಗೂಡಿ ಮಹಾಘಟಬಂಧನ್ ರಚನೆ, ಮತ್ತೆ ಸಿಎಂ ಆದ ನಿತೀಶ್
- 2017: ಮಹಾಘಟಬಂಧನ್ಗೆ ಕೈ ಕೊಟ್ಟ ನಿತೀಶ್, ಬಿಜೆಪಿ ಜತೆ ಭಾಯಿ ಭಾಯಿ
- 2022: ಮತ್ತೆ ಕಮಲ ಪಾಳಯ ತೊರೆದ ನಿತೀಶ್ ಕುಮಾರ್, ಆರ್‌ಜೆಡಿ ಜತೆಗೂಡಿ ಸರ್ಕಾರ ರಚನೆ
ಇದನ್ನೂ ಓದಿ: Nitish Kumar: ಆರ್‌ಜೆಡಿ ಮೈತ್ರಿ ಪತನ; ಸಿಎಂ ಸ್ಥಾನಕ್ಕೆ ನಿತೀಶ್ ರಾಜೀನಾಮೆ, ಬಿಜೆಪಿ ಜತೆ ಭಾಯಿ ಭಾಯಿ
ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗಲೆಲ್ಲ ಜೆಡಿಯುಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ, 2019ರ ಲೋಕಸಭೆ ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಯು ಹಾಗೂ ಲೋಕ ಜನ ಶಕ್ತಿ (LJP) ಮೈತ್ರಿ ಪರವಾಗಿತ್ತು. ಹಾಗಾಗಿ, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಯುಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದು ನಿತೀಶ್ ಕುಮಾರ್ ಅವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಒಟ್ಟು 40 ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟದ ಜೆಡಿಯು 17, ಬಿಜೆಪಿ 16 ಹಾಗೂ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ