Site icon Vistara News

Indian Railway | ರೈಲಿನಲ್ಲಿ ನಿಮ್ಮ ಲಗೇಜ್‌ ಮರೆತರೆ ಹಿಂಪಡೆಯುವ ಮಾರ್ಗ ಇಲ್ಲಿದೆ

ನವ ದೆಹಲಿ: ರೈಲಿನಲ್ಲಿ (Indian Railway) ದೂರದ ಊರಿಗೆ ಪ್ರಯಾಣಿಸುವಾಗ ಲಗೇಜ್‌ಗಳು ಕೂಡ ಸಾಕಷ್ಟಿರಬಹುದು. ಗಮ್ಯವನ್ನು ತಲುಪಿದ ಬಳಿಕ, ರೈಲಿನಿಂದ ಕೆಳಗಿಳಿಯುವ ಭರದಲ್ಲಿ ಕೆಲವರು ತಮ್ಮ ಲಗೇಜ್‌ಗಳನ್ನು ಅಥವಾ ಕೆಲವು ವಸ್ತುಗಳನ್ನು ರೈಲಿನಲ್ಲಿ ಮರೆತು ಇಳಿಯುವ ಸಾಧ್ಯತೆ ಇರುತ್ತದೆ. ನಿಮಗೂ ಹೀಗಾದರೆ ನಿಮ್ಮ ಲಗೇಜ್‌ಗಳನ್ನು ನೀವು ಹೇಗೆ ಮರಳಿ ಪಡೆಯಬಹುದು? ಅಥವಾ ಕಳೆದು ಹೋದ ಲಗೇಜ್‌ಗಳನ್ನು ಏನು ಮಾಡಲಾಗುತ್ತದೆ? ವಿವರ ಇಲ್ಲಿದೆ.

ಪ್ರಯಾಣಿಕರು ರೈಲಿನಲ್ಲಿ ತಮ್ಮ ಲಗೇಜ್‌ ಬಿಟ್ಟು ಹೋದರೆ ಅದನ್ನು ಹಿಂಪಡೆಯಲು ಭಾರತೀಯ ರೈಲ್ವೆ ನಿಗಮದ ವತಿಯಿಂದ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ನೀವು ಬಿಟ್ಟು ಬಂದ ಲಗೇಜ್‌ಗಳು ಏಲ್ಲಿ ಸೇರುತ್ತವೆ?

ಗಮ್ಯಸ್ಥಾನ ತಲುಪಿದ ಬಳಿಕ ಪ್ರತಿಯೊಂದು ಬೋಗಿಯನ್ನು ರೈಲ್ವೇ ಪ್ರೊಟೆಕ್ಷನ್‌ ಫೋರ್ಸ್‌ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ಭದ್ರತೆಯ ದೃಷ್ಟಿಯಿಂದ ಪ್ರತಿಯೊಂದು ಬೋಗಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗುತ್ತದೆ. ಈ ವೇಳೆ ಸಿಕ್ಕ ಲಗೇಜ್‌ಗಳನ್ನು ವಶಕ್ಕೆ ಪಡೆದು ಸ್ಟೇಷನ್‌ ಮಾಸ್ಟರ್‌ ಗೋದಾಮಿಗೆ ತಲುಪಿಸಲಾಗುತ್ತದೆ.

ಲಗೇಜ್‌ ಅಥವಾ ವಸ್ತುಗಳ ಸಂಪೂರ್ಣ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತದೆ ಹಾಗೂ ಅವುಗಳನ್ನು ಒಂದು ಚೀಲ ಅಥವಾ ಪೆಟ್ಟಿಗೆಯಲ್ಲಿ ಹಾಕಿ ಸುರಕ್ಷಿತವಾಗಿ ಸ್ಟೇಷನ್‌ ಮಾಸ್ಟರ್‌ ಗೋದಾಮಿನಲ್ಲಿ ಇರಿಸಲಾಗುತ್ತದೆ.

ನಿಮ್ಮ ಲಗೇಜ್‌ ಪಡೆಯುವುದು ಹೇಗೆ?

ಮೊದಲಿಗೆ ನೀವು ಇಳಿದ ರೈಲ್ವೆ ನಿಲ್ದಾಣದಲ್ಲಿರುವ ಸ್ಟೇಷನ್‌ ಮಾಸ್ಟರ್‌ ಅವರನ್ನು ಸಂಪರ್ಕಿಸಬೇಕು. ಅವರಿಗೆ ನೀವು ಕಳೆದುಕೊಂಡ ವಸ್ತುವಿನ ಕುರಿತಾದ ಸರಿಯಾದ ಪುರಾವೆ ಒದಗಿಸಬೇಕು. ಹಾಗೆಯೇ, ವಸ್ತುವನ್ನು ಹಿಂದಿರುಗಿಸುವಂತೆ ಒಂದು ಮನವಿಯನ್ನು ನೀಡಬೇಕು. ಅದನ್ನು ಅವರು ಖಚಿತಪಡಿಸಿಕೊಂಡು ವಸ್ತುವನ್ನು ನಿಮಗೆ ಹಿಂದಿರುಗಿಸುತ್ತಾರೆ.

ನೀವು ಕಳೆದುಕೊಂಡಿರುವ ಲಗೇಜ್‌ ಅಥವಾ ವಸ್ತುಗಳನ್ನು ಕ್ಲೇಮ್‌ ಮಾಡಲು 7 ದಿನಗಳು ಮಾತ್ರ ಅವಕಾಶವಿರುತ್ತದೆ. 7 ದಿನಗಳ ಒಳಗೆ ನೀವು ಸ್ಟೇಷನ್‌ ಮಾಸ್ಟರ್‌ಗೆ ಮನವಿ ನೀಡದಿದ್ದರೆ ಅದು ಕಳೆದು ಹೋದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಕಚೇರಿಗೆ (Lost Property Office) ಕಳುಹಿಸಲಾಗುತ್ತದೆ. ಆ ಕಚೇರಿಯಿಂದ ನೀವು ನಿಮ್ಮ ಲಗೇಜ್‌ ಹಿಂಪಡೆಯಲು ಶುಲ್ಕ ಪಾವತಿಸಬೇಕಾಗುತ್ತದೆ.

ನೀವು ಬಿಟ್ಟು ಹೋದ ಲಗೇಜ್‌ನಲ್ಲಿ ಬೆಲೆಬಾಳುವ ವಸ್ತುಗಳಿದ್ದರೆ ಅದನ್ನು ರೈಲ್ವೆ ಪೊಲೀಸರು ನಿಮಗೆ ತಲುಪಿಸುತ್ತಾರೆ. ಆದರೆ, ಹಾಗೆ ಮಾಡಲು ನೀವು ಲಗೇಜ್‌ನಲ್ಲಿ ನಿಮ್ಮನ್ನು ಸಂಪರ್ಕಿಸಲು ವಿಳಾಸ, ಫೋನ್‌ ನಂಬರ್‌ ಹಾಕಿರಬೆಕಾಗುತ್ತದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.

ಇದನ್ನೂ ಓದಿ: ರೈಲ್ವೆ ಪಾರ್ಸೆಲ್‌ ನೀತಿಯಲ್ಲಿ ಸುಧಾರಣೆ ಶೀಘ್ರ, ಮೊಬೈಲ್‌, ಸ್ಯಾನಿಟೈಸರ್‌ ಸಾಗಣೆಗೆ ಅವಕಾಶ

Exit mobile version