ಹರ್ದೋಯಿ: ಪೊಲೀಸರ ಕೆಲಸ ಸ್ವಲ್ಪ ಕಷ್ಟಾನೆ! ಕಾನೂನು, ಶಿಸ್ತುಪಾಲನೆ ಮೊದಲಾದ ಕರ್ತವ್ಯ ಮಾಡುವುದೇನೂ ಅಷ್ಟು ಕಷ್ಟವಲ್ಲ. ಸಾಮಾಜಿಕವಾಗಿ ಗಂಭೀರತೆಯನ್ನು ಕಾಪಾಡುವುದೇ ಸ್ವಲ್ಪ ಕಿರಿಕಿರಿ. ಅವರು ಸಾರ್ವಜನಿಕವಾಗಿ ಜೋರಾಗಿ ನಗುವಂತಿಲ್ಲ, ತಮಾಷೆ ಮಾಡುವಂತಿಲ್ಲ, ಎಲ್ಲರ ಜತೆಗೆ ಬೇಕಾಬಿಟ್ಟಿ ಬೆರೆಯುವಂತಿಲ್ಲ! ತುಂಬಾ ಗಂಭೀರತೆಯನ್ನು ಪ್ರದರ್ಶಿಸಬೇಕು. ಈ ಗಂಭೀರ ನಡವಳಿಕೆಯ ಪರಿಣಾಮವಾಗಿ ಕೆಲವು ಪೊಲೀಸರು ಮನೆಯಲ್ಲೂ ನಗುವುದಿಲ್ಲ ಎಂದು ಜೋಕ್ ಮಾಡುವುದಿದೆ.
ಕೆಲವು ಯುವ ಪೊಲೀಸರಿಗೆ ಇದೆಲ್ಲ ತುಂಬ ಕಷ್ಟವೇ ಆಗುತ್ತಿದೆ. ಪೊಲೀಸ್ ಉದ್ಯೋಗವಿದ್ದರೂ ಸಮಾಜದ ಖುಷಿಯಲ್ಲಿ ಭಾಗಿಯಾಗಬೇಕು ಅಂತ ಆಸೆಪಡುತ್ತಾರೆ. ತಾವೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರಬೇಕು, ಹುಡುಗರಂತೆ ರೀಲ್ಸ್ ಮಾಡಬೇಕು ಅಂತ ಬಯಸ್ತಾರೆ. ಅದೇನೂ ತಪ್ಪಲ್ಲ. ಆದರೆ, ಅದನ್ನೆಲ್ಲ ಸಮವಸ್ತ್ರ ಧರಿಸಿಕೊಂಡೇ ಮಾಡಿದ್ರೆ?
ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಸಮವಸ್ತ್ರ ಧರಿಸಿಕೊಂಡೇ ರೀಲ್ಸ್ ಮಾಡಿದ ಮೂವರು ಪೊಲೀಸರು ಈಗ ಅಮಾನತಿಗೆ ಒಳಗಾಗಿದ್ದಾರೆ. ಹರ್ದೋಯಿಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿರುವ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ನಿಯೋಜಿಸಲಾಗಿದ್ದ ಒಬ್ಬ ಮಹಿಳಾ ಮತ್ತು ಇಬ್ಬರು ಪುರುಷ ಕಾನ್‌ಸ್ಟೇಬಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಕಾನ್‌ಸ್ಟೇಬಲ್‌ಗಳಾದ ವಸುಧಾ ಮಿಶ್ರಾ, ಯೋಗೇಶ್ ಕುಮಾರ್ ಮತ್ತು ಧರ್ಮೇಶ್ ಮಿಶ್ರಾ ಅವರು ಕೆಲವು ದಿನಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ‘ಹೀರೋ ತು ಮೇರಾ ಹೀರೋ ಹೇ’ ಎಂಬ ಹಿಂದಿ ಹಾಡಿಗೆ ಪೊಲೀಸ್ ಸಮವಸ್ತ್ರದಲ್ಲೇ ಡ್ಯಾನ್ಸ್ ಮಾಡಿದ್ದರು. ಅಲ್ಲದೆ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೊ ಕೆಲವೇ ದಿನಗಳಲ್ಲಿ ಭಾರಿ ವೈರಲ್ ಆಗಿತ್ತು.
ಇದನ್ನು ಓದಿ| ಭ್ರಷ್ಟಾಚಾರ: ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ ಎಂದ ಹೈಕೋರ್ಟ್ ನ್ಯಾಯಮೂರ್ತಿ ಹೇಳಿಕೆ ವೈರಲ್
ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಈ ವಿಡಿಯೊ ಕುರಿತು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಈ ವಿಡಿಯೊ ಫೆಬ್ರವರಿಯಲ್ಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅದು ಈಗ ವೈರಲ್ ಆಗುತ್ತಿರುವುದರಿಂದ ಈ ರೀತಿ ಕರ್ತವ್ಯ ಮರೆತು ಸಮವಸ್ತ್ರದಲ್ಲೇ ರೀಲ್ಸ್ ಮಾಡಿದ ಕಾರಣಕ್ಕಾಗಿ ಮೂವರನ್ನು ಸಸ್ಪೆಂಡ್ ಮಾಡಿದ್ದಾರೆ. ಮುಂದೆ ಈ ರೀತಿ ಮಾಡದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕರ್ತವ್ಯದಲ್ಲಿರುವ ವೇಳೆ ಯಾವುದೇ ಕಾರಣಕ್ಕೂ ಪೊಲೀಸ್ ಸಮವಸ್ತ್ರ ಧರಿಸಿ ರಿಲ್ಸ್ ಅಥವಾ ಡ್ಯಾನ್ಸ್ ಮಾಡುವುದಕ್ಕೆ ಅವಕಾಶವಿಲ್ಲ, ಹೀಗಿದ್ದರೂ ವಸುಧಾ ಮಿಶ್ರಾ ಹಲವು ಬಾರಿ ರೀಲ್ಸ್ ಮಾಡಿದ್ದರು ಎಂದು ತನಿಖೆ ವೇಳೆ ಬಹಿರಂಗವಾಗಿದೆ.
ʻʻಇತ್ತೀಚಿನ ದಿನಗಳಲ್ಲಿ ಪೊಲೀಸರು ಸಮವಸ್ತ್ರದಲ್ಲೇ ರಿಲ್ಸ್ ಮಾಡುವುದು ಹೆಚ್ಚಾಗಿದೆ. ಹೀಗಾಗಿ ಈ ರೀತಿ ಕರ್ತವ್ಯ ಮರೆತು ರೀಲ್ಸ್ ಮಾಡುವವರಿಗೆ ಇದೊಂದು ಪಾಠವಾಗಲಿ ಎಂಬ ಕಾರಣಕ್ಕೆ ಈ ಮೂವರು ಕಾನ್ಸ್ಟೇಬಲ್ಗಳನ್ನು ಸಸ್ಪೆಂಡ್ ಮಾಡಲಾಗಿದ್ದು, ಎಚ್ಚರಿಕೆ ನೀಡಲಾಗಿದೆʼʼ ಎಂದು ಹರ್ದೋಯಿಯ ಎಸ್.ಪಿ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.
ಇದನ್ನು ಓದಿ| ಮೊಸಳೆ ಬಾಯಿಯಿಂದ ಸ್ನೇಹಿತನನ್ನು ಹೊರಗೆ ತೆಗೆದ ಗೆಳೆಯರು; ವಿಡಿಯೋ ವೈರಲ್