Site icon Vistara News

ಇಂದು ಸಂಜೆ ಕರ್ತವ್ಯಪಥ ಉದ್ಘಾಟನೆ, ಪ್ರಧಾನಿ ಮೋದಿ ಕಾರ್ಯಕ್ರಮದ ಪ್ರತಿಕ್ಷಣದ ವಿವರ ಇಲ್ಲಿದೆ

karthavyapatha

ನವ ದೆಹಲಿ : ಗುರುವಾರ ಸಂಜೆ ದೇಶದ ರಾಜಧಾನಿಯ ಹೃದಯಭಾಗದಲ್ಲಿ ನವೀಕೃತಗೊಂಡಿರುವ ʼಕರ್ತವ್ಯಪಥʼವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ ವರೆಗೆ ಹಬ್ಬಿರುವ ಈ ಕರ್ತವ್ಯಪಥದ ಉದ್ಘಾಟನೆಯ ಬಳಿಕ ಅದು ಸಾಮೂಹಿಕ ವೀಕ್ಷಣೆಗೆ ತೆರೆದುಕೊಳ್ಳಲಿದೆ. ವಸಾಹತುಶಾಹಿತ ನೆನಪಿನ ʼರಾಜಪಥʼದ ಜಾಗದಲ್ಲಿ ಹೊಸದಾಗಿ ಮೂಡಿರುವ ʼಕರ್ತವ್ಯಪಥʼ ನೂತನ ಭಾರತದ ಸಾಮೂಹಿಕ ಕರ್ತೃತ್ವಶಕ್ತಿಗೆ ಸಾಕ್ಷಿ ಎಂದು ಸರ್ಕಾರ ಹೇಳಿದೆ.

ಸೆ.8ರಂದು ಸಂಜೆ 7ರ ಹೊತ್ತಿಗೆ ಪ್ರಧಾನಿ ಮೋದಿ ಅವರು ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆಯ ಬಳಿಗೆ ಬಂದು ಗೌರವ ಸಲ್ಲಿಸಲಿದ್ದಾರೆ. ನಂತರ 7.13ರ ವೇಳೆಗೆ ಅವರು ಇಂಡಿಯಾ ಗೇಟ್‌ ಹಾಗೂ ಕಾರಂಜಿಯನ್ನು ಸಮೀಪಿಸಲಿದ್ದಾರೆ. 7.17ಕ್ಕೆ ಉದ್ಯಾನದಲ್ಲಿ ಎನ್‌ಡಿಎಂಸಿ ಮಕ್ಕಳಿಂದ ನಡೆಯುವ ಕಲಾಪ್ರದರ್ಶನವನ್ನು ವೀಕ್ಷಿಸುತ್ತಾರೆ. ನಂತರ ಹುಲ್ಲುಗಾವಲು ಹಾಗೂ ಕಾಲುವೆ ಸೇತುವೆಯ ಬಳಿ ಓಡಾಡಿ, 7.25ರ ಹೊತ್ತಿಗೆ ʻಶ್ರಮಜೀವಿʼಗಳ ಜತೆ ಸಂವಾದ ನಡೆಸಲಿದ್ದಾರೆ.

7.30ಕ್ಕೆ ಅವರು ʼಕರ್ತವ್ಯಪಥದ ಮೊದಲು ಹಾಗೂ ನಂತರʼ ಎಂಬ ಹೆಸರಿನ ಪ್ರದರ್ಶನವನ್ನು ಉದ್ಘಾಟಿಸುತ್ತಾರೆ. ನಂತರ ವೇದಿಕೆಗೆ ಆಗಮಿಸುತ್ತಾರೆ. ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರು ಸ್ವಾಗತ ಕೋರುತ್ತಾರೆ. 7.50ಕ್ಕೆ ಶುಭಮಂಗಳ ಗಾನ, ನಂತರ ಸುಭಾಶ್ಚಂದ್ರ ಬೋಸ್‌ ಬಗ್ಗೆ ದೃಶ್ಯಮುದ್ರಿಕೆ ಪ್ರಸಾರ. 7.50ಕ್ಕೆ ʼಕರ್ತವ್ಯಪಥದ ಮೊದಲು ಹಾಗೂ ನಂತರʼ ಸಿಡಿ ಬಿಡುಗಡೆ. 8.05ಕ್ಕೆ ಸರಿಯಾಗಿ ಜನಸಮೂಹ ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಕರ್ತವ್ಯಪಥವು ʼಸೆಂಟ್ರಲ್‌ ವಿಸ್ತಾʼವನ್ನು ನವೀಕರಣಗೊಳಿಸುವ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮೆಗಾ ಯೋಜನೆಯ ಪ್ರಥಮ ಹಂತವಾಗಿದೆ. ಇದು ದೆಹಲಿಯ ಅತ್ಯಂತ ಜನಪ್ರಿಯ ಸಾರ್ವಜನಿಕ ತಾಣ. 1.1 ಲಕ್ಷ ಎಕರೆ ಜಾಗದಲ್ಲಿ ಹರಡಿಕೊಂಡಿರುವ ಈ ತಾಣದಲ್ಲಿ ಉದ್ಯಾನವನ, ಕೆಂಪುಕಲ್ಲಿನ ಪಾದಪಥಗಳು, 4087 ಮರಗಳು ಇವೆ. ಕರ್ತವ್ಯ ಪಥದ ಉದ್ದಕ್ಕೂ 1,10,457 ಚದರ ಮೀಟರ್‌ಗಳಷ್ಟು ಹರಡಿರುವ ಹೊಸ ಕೆಂಪು ಗ್ರಾನೈಟ್ ವಾಕ್‌ವೇಗಳನ್ನು ರಚಿಸಲಾಗಿದೆ. ಈ ಹಿಂದೆ ನೆಲವನ್ನು ಆವರಿಸಿದ್ದ ಬಜ್ರಿ ಮರಳನ್ನು ಬದಲಾಯಿಸಲಾಗಿದೆ. 987 ಕಾಂಕ್ರೀಟ್ ಕಂಬಗಳನ್ನು ಅಳವಡಿಸಲಾಗಿದೆ. ಒಟ್ಟು 1,490 ಆಧುನಿಕ ವಿನ್ಯಾಸದ ಮ್ಯಾನ್‌ಹೋಲ್‌ಗಳು ಹಿಂದಿನವುಗಳನ್ನು ಬದಲಾಯಿಸಿವೆ. ರಾಷ್ಟ್ರದ ಪವರ್ ಕಾರಿಡಾರ್ ಆಗಿರುವ ಸೆಂಟ್ರಲ್ ವಿಸ್ತಾದ ಪುನರಾಭಿವೃದ್ಧಿ ಯೋಜನೆಯಲ್ಲಿ ಹೊಸ ತ್ರಿಕೋನ ಮಾದರಿಯ ಸಂಸತ್ ಕಟ್ಟಡ, ಸೆಕ್ರೆಟೇರಿಯಟ್‌, ಮೂರು ಕಿಮೀನ ಕರ್ತವ್ಯ ಪಥ, ಹೊಸ ಪ್ರಧಾನ ಮಂತ್ರಿ ನಿವಾಸ ಮತ್ತು ಕಚೇರಿ, ಹೊಸ ಉಪಾಧ್ಯಕ್ಷರ ಭವನ ಬರಲಿವೆ.

ಇದನ್ನೂ ಓದಿ | ವಿಸ್ತಾರ Explainer | ಮನಮೋಹಕ ಸೆಂಟ್ರಲ್ ವಿಸ್ಟಾ ಅವೆನ್ಯೂ! ನಾಳೆ ಮೋದಿ ಉದ್ಘಾಟನೆ

Exit mobile version