Site icon Vistara News

Tollgates: ಇನ್ನು ಫಾಸ್ಟ್‌ಟ್ಯಾಗ್‌‌ ಮರೆತುಬಿಡಿ; ಟೋಲ್‌ ಸಂಗ್ರಹಕ್ಕೆ ಬರುತ್ತಿದೆ ಸ್ಯಾಟಲೈಟ್‌ ಆಧಾರಿತ ವ್ಯವಸ್ಥೆ: ಏನಿದರ ಪ್ರಯೋಜನ?

Tollgates

Tollgates

ನವದೆಹಲಿ: ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿನ ಟೋಲ್‌ ಸಂಗ್ರಹ (Tollgates) ವ್ಯವಸ್ಥೆಯ ಬದಲಾವಣೆಗೆ ಚಿಂತನೆ ನಡೆಸಿದೆ. ಕಳೆದ ವರ್ಷವೇ ಸರ್ಕಾರ ಈ ಬಗ್ಗೆ ಸೂಚನೆ ನೀಡಿದೆ. ಫಾಸ್ಟ್‌ಟ್ಯಾಗ್‌‌ (FASTag) ಟೋಲ್‌ ಸಂಗ್ರಹಕ್ಕಿಂತ ಭಿನ್ನವಾದ, ಸ್ಯಾಟಲೈಟ್‌ ಆಧಾರಿತ ಟೋಲ್‌ ಸಿಸ್ಟಂ ಜಾರಿಗೆ ತರುವುದು ಸರ್ಕಾರದ ಯೋಜನೆ. ಉಪಗ್ರಹ ಆಧಾರಿತವಾಗಿ ಇದು ಕಾರ್ಯ ನಿರ್ವಹಿಸಲಿದೆ (Satellite Based Toll System). ಉಪಗ್ರಹ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ವಿವಿಧ ಜಾಗತಿಕ ಸಂಸ್ಥೆಗಳ ಜತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NationalHighway aAuthority of India) ಚರ್ಚೆ ನಡೆಸಿದೆ. ಈ ಹೊಸ ತಂತ್ರಜ್ಞಾನದಿಂದ ಏನೆಲ್ಲ ಪ್ರಯೋಜನಗಳಿವೆ, ಸವಾಲುಗಳೇನು ಎನ್ನುವ ವಿವರ ಇಲ್ಲಿದೆ.

ಕೇಂದ್ರ ಸರ್ಕಾರವು 2021ರಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯಗೊಳಿಸಿದ್ದು, ಇದರಿಂದ ಟೋಲ್‌ಗೇಟ್‌ಗಳಲ್ಲಿ ಜನರ ಅರ್ಧ ಸಮಯ ಉಳಿತಾಯವಾಗಿದೆ. ರಸ್ತೆಯ ಉದ್ದಕ್ಕೂ ಕ್ಯೂ ನಿಲ್ಲುವ ಪ್ರಮೇಯ ತಪ್ಪಿದೆ. ಅದಾಗ್ಯೂ ಕಾಯುವ ಕಿರಿಕಿರಿ ಪೂರ್ತಿಯಾಗಿ ತಪ್ಪಿಲ್ಲ. ಇದೀಗ ಹೊಸ ವ್ಯವಸ್ಥೆ ಮೂಲಕ ಈ ಎಲ್ಲ ಸಮಸ್ಯೆ ಪರಿಹಾರವಾಗಲಿದೆ ಎನ್ನುವ ನಿರೀಕ್ಷೆ ಇದೆ.

ಜಿಪಿಎಸ್‌ ಆಧಾರಿತ ಟೋಲ್‌ ಸಿಸ್ಟಮ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಭಾರತದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಜಿಪಿಎಸ್ ಅಥವಾ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಫಾಸ್ಟ್‌ಟ್ಯಾಗ್‌ ಐಡಿಗಳನ್ನು ಸ್ಕ್ಯಾನ್ ಮಾಡುವ ಬದಲು, ವಾಹನದ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ. ಇದಕ್ಕಾಗಿ ಹೆದ್ದಾರಿಗಳನ್ನು ವರ್ಚುವಲ್ ಟೋಲ್‌ನಿಂದ ಸಜ್ಜುಗೊಳಿಸಲಾಗುತ್ತದೆ. ಇದರಲ್ಲಿನ ಕ್ಯಾಮೆರಾ ಚಲಿಸುತ್ತಿರುವ ವಾಹನಗಳ ನಂಬರ್‌ ಪ್ಲೇಟ್‌ ಅನ್ನು ಗುರುತಿಸುತ್ತದೆ. ಬಳಿಕ ವಾಹನ ಪ್ರಯಾಣಿಸಿದ ದೂರವನ್ನು ಆಧರಿಸಿ ಬ್ಯಾಂಕ್ ಖಾತೆಯಿಂದ ಟೋಲ್ ಮೊತ್ತವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಜತೆಗೆ ವಿವಿಧ ವಿವರಗಳನ್ನು ಮೇಲ್ವಿಚಾರಣೆ ನಡೆಸಲು ಜಿಪಿಎಸ್ ಅನ್ನು ಬಳಸಲಾಗುತ್ತದೆ. ಒಟ್ಟಿನಲ್ಲಿ ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯು ಜಾರಿಗೆ ಬಂದರೆ ಸಮಯದ ಜತೆಗೆ ಹಣವೂ ಉಳಿತಾಯವಾಗುತ್ತದೆ. ಟೋಲ್‌ ಸಂಗ್ರಹ ಇರುವ ಹೆದ್ದಾರಿಯಲ್ಲಿ ನಾವು ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಟೋಲ್‌ ಶುಲ್ಕ ಪಾವತಿಸದರೆ ಸಾಕಾಗುತ್ತದೆ.

ಅನುಕೂಲಗಳೇನು?

ಈ ಹೊಸ ಟೋಲ್ ಸಂಗ್ರಹ ವ್ಯವಸ್ಥೆಯ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ. ಇದು ಸರಾಸರಿ ಕಾಯುವ ಸಮಯವನ್ನು 714 ಸೆಕೆಂಡುಗಳಿಂದ (ಸುಮಾರು 11 ನಿಮಿಷ) 47 ಸೆಕೆಂಡುಗಳಿಗೆ ಇಳಿಸುತ್ತದೆ. ಅಂತಿಮವಾಗಿ ಪ್ರಯಾಣದ ಸಮಯವನ್ನೂ ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಈ ವಿಧಾನವು ಸಂಚಾರ ದಟ್ಟಣೆಯನ್ನು ಇಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ವಿಶೇಷ ಟೋಲ್ ಲೇನ್‌ಗಳನ್ನು ನಿರ್ಮಿಸುವ ಅಗತ್ಯವಿಲ್ಲ. ಟೋಲ್‌ ಬೂತ್‌ಗಳನ್ನು ತೆಗೆದುಹಾಕುವುದರಿಂದ ಇವುಗಳ ನಿರ್ವಹಣೆ ಮತ್ತು ನಿರ್ಮಾಣ ವೆಚ್ಚಗಳನ್ನು ಉಳಿಸಬಹುದು. ಇದಲ್ಲದೆ, ಬಿಲ್ಲಿಂಗ್ ಪ್ರಕ್ರಿಯೆಯು ಸುಲಭವಾಗುತ್ತದೆ. ಏಕೆಂದರೆ ಬಳಕೆದಾರರು ಅವರು ಪ್ರಯಾಣಿಸುವ ದೂರಕ್ಕೆ ಮಾತ್ರ ಪಾವತಿಸಿದರೆ ಸಾಕು. ಅಂದರೆ ಈಗ ನಾವು ಟೋಲ್‌ ಗೇಟ್‌ ನಂತರ ಅರ್ಧ ಕಿಲೋಮೀಟರ್‌ ಇದ್ದರೂ, ಪೂರ್ತಿ ಹಣವನ್ನು ಪಾವತಿಸಬೇಕು. ಆದರೆ ಸ್ಯಾಟಲೈಟ್‌ ಆಧಾರಿತ ಟೋಲ್‌ ವ್ಯವಸ್ಥೆ ಜಾರಿಗೆ ಬಂದರೆ, ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಹಣ ಪಾವತಿ ಮಾಡಿದರಾಯ್ತು.

ಸವಾಲುಗಳೇನು?

ಇನ್ನು ಸ್ಯಾಟಲೈಟ್‌ ಆಧಾರಿತ ಟೋಲ್‌ ವ್ಯವಸ್ಥೆ ಜಾರಿಗೆ ಹಲವು ಸವಾಲುಗಳಿವೆ. ಪ್ರಸ್ತುತ ಬಳಸಲಾಗುವ ಫಾಸ್ಟ್‌ಟ್ಯಾಗ್‌ಗೆ ಹೋಲಿಸಿದರೆ ಇದು ಮುಂದುವರಿದಿದ ತಂತ್ರಜ್ಞಾನವಾಗಿದ್ದರೂ ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ. ಉದಾಹರಣೆಗೆ, ವಾಹನ ದಟ್ಟಣೆ ಇರುವ ಸ್ಥಳಗಳಲ್ಲಿ ನಿಖರವಾದ ಡೇಟಾವನ್ನು ಸಂಗ್ರಹಿಸಲು ಸಿಸ್ಟಮ್‌ಗೆ ಸಾಧ್ಯವಾಗದಿರಬಹುದು. ಈ ಸಮಸ್ಯೆಗಳು ಗ್ರಾಮೀಣ ಭಾಗಗಳು ಅಥವಾ ಭೌಗೋಳಿಕವಾಗಿ ಸವಾಲಿನ ಭೂ ಪ್ರದೇಶವನ್ನು ಹೊಂದಿರುವ ಪ್ರದೇಶಗಳಲ್ಲಿ ನಿರಂತರವಾಗಿರಬಹುದು. ಈ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಅಲ್ಲದೆ ಇದು ಗ್ರಾಹಕರ ಗೌಪ್ಯತೆಯ ಬಗ್ಗೆಯೂ ಪ್ರಶ್ನೆ ಏಳುವಂತೆ ಮಾಡುತ್ತದೆ.

ಸ್ಯಾಟಲೈಟ್‌ ಆಧಾರಿತ ಟೋಲ್‌ ವ್ಯವಸ್ಥೆ ಜಾರಿಯಲ್ಲಿರುವ ದೇಶಗಳಿವು

ಈ ಸ್ಯಾಟಲೈಟ್‌ ಆಧಾರಿತ ಟೋಲ್‌ ವ್ಯವಸ್ಥೆಯನ್ನು ಈಗಾಗಲೇ ಹಲವು ದೇಶಗಳು ಬಳಸುತ್ತಿವೆ. ಜರ್ಮನಿ, ರಷ್ಯಾ ಮತ್ತು ಸ್ಲೋವಾಕಿಯಾದಂತಹ ಯುರೋಪಿಯನ್‌ ರಾಷ್ಟ್ರಗಳು ತಮ್ಮ ಹೆದ್ದಾರಿಗಳಲ್ಲಿ ಪ್ರಯಾಣವನ್ನು ಸುಗಮಗೊಳಿಸಲು ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಬಳಸುತ್ತಿವೆ. ಈ ದೇಶಗಳಲ್ಲಿನ ಸಾವಿರಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಭಾರತದಲ್ಲಿ ಯಾವಾಗ ಜಾರಿಗೆ ಬರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Money Guide: ಫಾಸ್ಟ್‌ಟ್ಯಾಗ್‌ ಇದ್ದರೂ ದಂಡ ಕಟ್ಟುತ್ತಿದ್ದೀರಾ?; ಪರಿಹಾರ ಇಲ್ಲಿದೆ

Exit mobile version