ಕೊಲೊಂಬೊ: ಶ್ರೀಲಂಕಾದಲ್ಲಿ 2019ರಲ್ಲಿ ನಡೆದ ಅಪಘಾತದಲ್ಲಿ (Accident) ಭಾರತದ ಪತ್ರಕರ್ತೆ ಕಾನುಪುರಿಯಾ ಸೈಗಲ್ (Kanupuriya Saigal) ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆಯ ಪತಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಥಾಮಸ್ ಕುಕ್ ಆ್ಯಂಡ್ ರೆಡ್ ಆ್ಯಪಲ್ ಟ್ರಾವೆಲ್ ಏಜೆನ್ಸಿಗೆ ಶ್ರೀಲಂಕಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ (Consumer Disputes Redressal Forum) ಆದೇಶಿಸಿದೆ.
2019ರಲ್ಲಿ ಕಾನುಪುರಿಯಾ ಸೈಗಲ್, ಅವರ ಪತಿ ಯೋಗೇಶ್ ಸೈಗಲ್, ಪುತ್ರ ಶ್ರೇಯಾ ಸೈಗಲ್, ತಂದೆ ಗಂಗಾ ಪ್ರಸಾದ್ ವಿಮಲ್ ಸೇರಿ ಕುಟುಂಬಸ್ಥರು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಅವರು ಥಾಮಸ್ ಕುಕ್ ಆ್ಯಂಡ್ ರೆಡ್ ಆ್ಯಪಲ್ ಟ್ರಾವೆಲ್ ಏಜೆನ್ಸಿಯ ವಾಹನ ಬುಕ್ ಮಾಡಿ, ಕೊಲೊಂಬೊದಲ್ಲಿ ಅವರು ತೆರಳುತ್ತಿದ್ದರು. ಆಗ ಸಂಭವಿಸಿದ ಅಪಘಾತದಲ್ಲಿ ಕಾನುಪುರಿಯಾ ಸೈಗಲ್, ಪುತ್ರ ಶ್ರೇಯಾ ಸೈಗಲ್ ಹಾಗೂ ತಂದೆ ಗಂಗಾ ಪ್ರಸಾದ್ ವಿಮಲ್ ಮೃತಪಟ್ಟಿದ್ದರು. ವಾಹನ ಚಾಲಕ ಕೂಡ ಮೃತಪಟ್ಟಿದ್ದ. ಯೋಗೇಶ್ ಸೈಗಲ್ ಹಾಗೂ ಪುತ್ರಿ ಐಶ್ವರ್ಯಾ ಸೈಗಲ್ ಬದುಕುಳಿದಿದ್ದರು.
ದೂರು ದಾಖಲಿಸಿದ್ದ ಯೋಗೇಶ್ ಸೈಗಲ್
ಅಪಘಾತದ ಬಳಿಕ ಥಾಮಸ್ ಕುಕ್ ಆ್ಯಂಡ್ ರೆಡ್ ಆ್ಯಪಲ್ ಟ್ರಾವೆಲ್ ವಿರುದ್ಧ ಯೋಗೇಶ್ ಸೈಗಲ್ ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು. “ಥಾಮಸ್ ಕುಕ್ ಆ್ಯಂಡ್ ರೆಡ್ ಆ್ಯಪಲ್ ಟ್ರಾವೆಲ್ ಏಜೆನ್ಸಿಯ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಅವರು ಸುಳ್ಳು ಜಾಹೀರಾತು ನೀಡಿ ನಮ್ಮನ್ನು ನಂಬಿಸಿದರು. ಸೇವೆಯಲ್ಲಿ ವ್ಯತ್ಯಯ ಮಾಡಿದರು. ಹಾಗೆಯೇ, ಚಾಲಕನ ನಿರ್ಲಕ್ಷ್ಯದಿಂದಾಗಿಯೇ ಅಪಘಾತ ಸಂಭವಿಸಿದೆ” ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: Electric Shock : ವಿದ್ಯುತ್ ದುರಂತಕ್ಕೆ ಒಂದೇ ಕುಟುಂಬದ ಮೂವರು ಬಲಿ; ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ
ನಮಗೆ 8.99 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಯೋಗೇಶ್ ಸೈಗಲ್ ದೂರು ನೀಡಿದ್ದರು. ಸುಮಾರು ನಾಲ್ಕು ವರ್ಷಗಳ ವಿಚಾರಣೆ ಬಳಿಕ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಯೋಗೇಶ್ ಸೈಗಲ್ ಅವರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಥಾಮಸ್ ಕುಕ್ ಆ್ಯಂಡ್ ರೆಡ್ ಆ್ಯಪಲ್ ಟ್ರಾವೆಲ್ ಏಜೆನ್ಸಿಗೆ ಆದೇಶಿಸಿದೆ. ಕಾನುಪುರಿಯಾ ಸೈಗಲ್ ಅವರು ಎನ್‌ಡಿಟಿವಿಯಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.