Site icon Vistara News

Triple Murder: ಬಿಹಾರದಲ್ಲಿ ‘ಸಾಯಿರಾಟ್’ ಕ್ಲೈಮಾಕ್ಸ್! ವರ್ಷದ ಮಗು ಸೇರಿ ಮಗಳು, ಅಳಿಯನನ್ನೇ ಕೊಂದರು!

Triple murder in bihar, Couple and their child killed Who eloped in 2021

ಪಾಟ್ನಾ: ಬಿಹಾರದ ಈ ಯುವ ದಂಪತಿಯ ಅಂತ್ಯ ಆಲ್ಮೋಸ್ಟ್, ಮರಾಠಿ ಭಾಷೆಯ ಅತ್ಯಂತ ಯಶಸ್ವಿ ಚಿತ್ರ ಎನಿಸಿರುವ ‘ಸಾಯಿರಾಟ್’ ಕ್ಲೈಮಾಕ್ಸ್ ರೀತಿಯಲ್ಲೇ ಇದೆ(sairat movie climax). ಎರಡು ವರ್ಷಗಳ ಹಿಂದೆ ಓಡಿ ಹೋಗಿದ್ದ ಯುವಜೋಡಿಯೊಂದನ್ನು ಅವರ 1 ವರ್ಷದ ಮಗು ಸಹಿತ ಕೊಲೆ (Couple eloped in 2021 killed) ಮಾಡಿದ ಘಟನೆ ಮಂಗಳವಾರ ಸಂಜೆ ಬಿಹಾರದ ನೌಗಾಚಿಯಾ ಪೊಲೀಸ್ ಜಿಲ್ಲೆಯ (Nawgachhia police District) ಭಾಗವಾಗಿರುವ ನೌಟೋಲಿಯಾ ಗ್ರಾಮದಲ್ಲಿ ನಡೆದಿದೆ(Triple murder in Bihar).

ಕೊಲೆಯಾದ ಜೋಡಿಯನ್ನು 21 ವರ್ಷದ ಚಾಂದಿನಿ ಕುಮಾರಿ, ಆಕೆಯ ಗಂಡ 23 ವರ್ಷದ ಚಂದನ್ ಕುಮಾರ್ ಸಿಂಗ್ ಹಾಗೂ ಒಂದು ವರ್ಷದ ಹೆಣ್ಣು ಮಗು ಎಂದು ಗುರುತಿಸಲಾಗಿದೆ.

ಚಾಂದನಿ ಕುಮಾರಿ ಅವರ ತಂದೆ ಹಾಗೂ ಸಹೋದರರೇ ಈ ಹತ್ಯೆಯ ಪ್ರಮುಖ ಆರೋಪಿಗಳಾಗಿದ್ದಾರೆ. ಚಾಂದಿನಿ ಕುಮಾರಿ ಅವರ ತಂದೆ ಪಪ್ಪು ಸಿಂಗ್ ಮತ್ತು ಆಕೆಯ ಸಹೋದರ ಧೀರಜ್ ಕುಮಾರ್ ಅವರು, ಈ ಜೋಡಿಯನ್ನು ನೌಟೋಲಿಯಾ ಗ್ರಾಮದ ಹೊರ ವಲಯದಲ್ಲಿ ತಡೆದಿದ್ದಾರೆ ಮತ್ತು ಮಗು ಸೇರಿದಂತೆ ಅವರ ಮೇಲೆ ಕಬ್ಬಿಣ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಕೊನೆಗೆ ಒಬ್ಬೊಬ್ಬರಾಗಿ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ನೌಗಾಚಿಯಾ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ್ ಕುಮಾರ್ ಸರೋಜ್ ಅವರು ಹೇಳಿದ್ದಾರೆ.

ಚಾಂದಿನಿ ಮತ್ತು ಚಂದನ್ ಒಂದೇ ಜಾತಿಗೆ ಸೇರಿದವರಾಗಿದ್ದಾರೆ. ಅಲ್ಲದೇ, ಅವರು ಒಂದೇ ಗ್ರಾಮ ಮತ್ತು ನೆರೆಹೊರೆಯವರಾಗಿರುವುದರಿಂದ ಅವರ ಮದುವೆಗೆ ಅವರ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಒಂದೇ ಗ್ರಾಮ ಮತ್ತು ನೆರೆಹೊರೆಯರಾಗಿರುವವರು ವಿವಾಹ ಬಂಧನಕ್ಕೊಳಗಾಗುವುದು ಸೂಕ್ತವಲ್ಲ ಎಂದು ನಂಬಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊಲೆಯಾದ ಯುವ ದಂಪತಿಯು 2021ರಲ್ಲಿ ಹಳ್ಳಿಯಿಂದ ಓಡಿ ಹೋಗುವ ಮುಂಚೆ ನಾಲ್ಕು ವರ್ಷಗಳಿಂದ ಪ್ರೇಮಿಸುತ್ತಿದ್ದರು. ಈ ಮದುವೆಗೆ ಚಂದನ್ ಕುಮಾರ್ ಅವರ ಕುಟುಂಬವು ಮುಕ್ತ ಮನಸ್ಸು ಹೊಂದಿತ್ತು. ಆದರೆ, ಚಾಂದಿನಿ ಕುಮಾರಿ ಅವರ ಕುಟುಂಬವು ಭಾರೀ ವಿರೋಧ ವ್ಯಕ್ತಪಡಿಸಿತ್ತು.

ಮದುವೆಯಾಗಿದ್ದ ಇಬ್ಬರನ್ನು ಒಪ್ಪಿಕೊಳ್ಳಲು ಚಂದನ್ ಕುಮಾರ್ ಕುಟುಂಬವು ಸಿದ್ಧವಾಗಿತ್ತು. ಆದರೆ, ಚಾಂದಿನಿ ಕುಮಾರಿ ಅವರ ಕುಟುಂಬವು ಮಾತ್ರ, ಆಕೆಯ(ಮಗಳು) ತಮ್ಮ ಸುತ್ತಮುತ್ತ ಎಲ್ಲೂ ಕಾಣಿಸಬಾರದು ಎಂದು ಬೆದರಿಕೆ ಹಾಕಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಂಪತಿಗೆ ಚಾಂದಿನಿಯ ಕುಟುಂಬದ ಜೀವ ಬೆದರಿಕೆಯ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು ಮತ್ತು ವಾಪಸ್ ಬರಲು ಇದು ಸೂಕ್ತ ಸಮಯವಲ್ಲ ಎಂದು ಹೇಳಿದ್ದರು. ಆದರೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಯುವ ದಂಪತಿ ತಮ್ಮ ಊರಿಗೆ ಭೇಟಿ ನೀಡಲು ಬಂದಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ತ್ರಿವಳಿ ಕೊಲೆಯ ಪ್ರಮುಖ ಆರೋಪಿಗಳಾಗಿರುವ ಪಪ್ಪು ಸಿಂಗ್ ಹಾಗೂ ಆತನ ಪುತ್ರನನ್ನು ಅರೆಸ್ಟ್ ಮಾಡಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Murder Case : ಒಂಟಿ ಮಹಿಳೆ ಕೊಲೆ ಕೇಸ್‌; ಹಣದಾಸೆಗೆ ಉಂಡ ಮನೆಗೆ ಕನ್ನ ಹಾಕಿದ ಕಿರಾತಕ ಅರೆಸ್ಟ್‌

Exit mobile version