ಹೈದರಾಬಾದ್: ಮುಸ್ಲಿಂ ಹೆಣ್ಣು ಮಕ್ಕಳ ಜೀವನಕ್ಕೇ ಕುತ್ತು ತರುತ್ತಿದ್ದ ತ್ರಿವಳಿ ತಲಾಕ್ (Triple Talaq) ಎಂಬ ಅನಿಷ್ಟ ಪದ್ಧತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆದರೆ ಈ ಬಗ್ಗೆ ಇನ್ನೂ ಕೆಲವರಿಗೆ ಅರಿವು ಮೂಡಿದಂತಿಲ್ಲ. ಅಂತಹ ಘಟನೆ ಮತ್ತೆ ಮತ್ತೆ ಘಟಿಸುತ್ತಲೇ ಇದೆ. ಅದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ತೆಲಂಗಾಣದ ಭೂಪನೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಕೆ.ಆರ್.ಕೆ. ಕಾಲೋನಿಯಲ್ಲಿ ಈ ಘಟನೆ ನಡೆದಿದೆ. 32 ವರ್ಷ ವಯಸ್ಸಿನ ಅಬ್ದುಲ್ ಅತೀಖ್ ಬಂಧಿತ ವ್ಯಕ್ತಿ. ಆತ ತನ್ನ ಪತ್ನಿಗೆ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್ ಮೆಸೇಜ್ ಮೂಲಕ ತ್ರಿವಳಿ ತಲಾಕ್ ನೀಡಿದ್ದ.
ಘಟನೆಯ ವಿವರ
ಅದಿಲಾಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಿ. ಶ್ರೀನಿವಾಸ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼಅಬ್ದುಲ್ ಅತೀಖ್ 2017ರಲ್ಲಿ ಜಾಸ್ಮಿನ್ (28) ಎಂಬಾಕೆಯೊಂದಿವೆ ವಿವಾಹವಾಗಿದ್ದ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲಾರಂಭಿಸಿತು. ಆಗಾಗ ಪತಿ-ಪತ್ನಿ ಕಿತ್ತಾಡಿಕೊಳ್ಳುತ್ತಿದ್ದರು. ಇದು ತಾರಕ್ಕೆ ಹೋಗಿ ಕಳೆದ ವರ್ಷ ಜಾಸ್ಮಿನ್ ತಮ್ಮ ಪತಿಯ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದರುʼʼ ಎಂದು ಹೇಳಿದ್ದಾರೆ.
ʼʼಬಳಿಕ ಕೇಸ್ ಕೋರ್ಟ್ ಮೆಟ್ಟಿಲೇರಿತ್ತು. ಕುಟುಂಬ ನಿರ್ವಹಣೆಗೆ ಹಣ ನೀಡಬೇಕೆಂದು ಜಾಸ್ಮಿನ್ ಕೋರ್ಟ್‌ನಲ್ಲಿ ವಾದಿಸಿದ್ದರು. ಅದರಂತೆ ಕೋರ್ಟ್ ಪ್ರತಿ ತಿಂಗಳು ಜಾಸ್ಮಿನ್‌ಗೆ 7,200 ರೂ. ಪಾವತಿಸುವಂತೆ ಅಬ್ದುಲ್ ಅತೀಖ್‌ಗೆ ಸೂಚಿಸಿತ್ತು. ಆದರೆ ಅತೀಖ್ ಕೋರ್ಟ್ ಸೂಚನೆಯನ್ನೂ ಧಿಕ್ಕರಿಸಿದ್ದ. ಹಣವನ್ನೇ ನೀಡುತ್ತಿರಲಿಲ್ಲʼʼ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಮತ್ತೊಮ್ಮೆ ಜಾಸ್ಮಿನ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವೇಳೆ ಆತ ಜಾಸ್ಮಿನ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ ತ್ರಿವಳಿ ತಲಾಕ್ ನೀಡಿದ್ದ. ಈ ಮೆಸೇಜ್ ಅನ್ನು ಜಾಸ್ಮೀನ್ ತಮ್ಮ ಕುಟುಂಬಸ್ಥರಿಗೆ ಶೇರ್ ಮಾಡಿದ್ದರು. ಅವರ ಸಲಹೆ ಮೇರೆಗೆ ಜಾಸ್ಮಿನ್ ಪೊಲೀಸರಿಗೆ ದೂರು ನೀಡಿದ್ದರು. ʼʼಈ ಹಿನ್ನೆಲೆಯಲ್ಲಿ ಅಬ್ದುಲ್ ಅತೀಖ್ ವಿರುದ್ಧ ದೂರು ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆʼʼ ಎಂದು ಶ್ರೀನಿವಾಸ್ ವಿವರಿಸಿದ್ದಾರೆ.
ಇದನ್ನೂ ಓದಿ: Triple Talaq: ಮದುವೆಯಾದ 2 ಗಂಟೆಯಲ್ಲೇ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ದುರುಳ; ವರದಕ್ಷಿಣೆ ಆಸೆಗೆ ನೀಚ ಕೃತ್ಯ
ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಕ್
ಕೆಲವು ದಿನಗಳ ಹಿಂದೆಯಷ್ಟೇ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿದ್ದ. 28 ವರ್ಷದ ಮೊಹಮ್ಮದ್ ಅರ್ಷದ್ ಹೀಗೆ ತ್ರಿವಳಿ ತಲಾಕ್ ನೀಡಿದ ಭೂಪ. ಮೊಹಮ್ಮದ್ ಅರ್ಷದ್ ತನ್ನ ಪತ್ನಿ ಅಫ್ಸಾನಾ (26) ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್ ಸಮೀಪ ಈ ಘಟನೆ ನಡೆದಿತ್ತು. ರೈಲು ಝಾನ್ಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರ್ಷದ್ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿ ರೈಲಿನಿಂದ ಇಳಿದು ತಲೆ ಮರೆಸಿಕೊಂಡಿದ್ದ. ಬಳಿಕ ಅಫ್ಸಾನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
2019ರ ಜುಲೈಯಲ್ಲಿ ಸಂಸತ್ತು ಅಂಗೀಕರಿಸಿದ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ಪ್ರಕಾರ, ಮುಸ್ಲಿಮರಲ್ಲಿ ಚಾಲ್ತಿಯಲ್ಲಿದ್ದ ‘ತ್ರಿವಳಿ ತಲಾಖ್’ ಮೂಲಕ ತ್ವರಿತ ವಿಚ್ಛೇದನದ ನೀಡುವ ಕ್ರಮವನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಘೋಷಿಸಲಾಗಿದೆ.