Site icon Vistara News

Twitter shut down: ಭಾರತ ಸರ್ಕಾರ ಟ್ವಿಟರ್‌ ಮುಚ್ಚುವ ಬೆದರಿಕೆ‌ ಹಾಕಿತ್ತು ಎಂದ ಜಾಕ್‌ ಡೋರ್ಸೆ, ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಏನು?

jack dorsey rajiv chandrashekhar

ಹೊಸ ದಿಲ್ಲಿ: ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಬಗ್ಗೆ ಟ್ವಿಟರ್‌ ಮಾಜಿ ಸಿಇಒ ಜಾಕ್‌ ಡೋರ್ಸಿ ಮಾಡಿರುವ ಆಪಾದನೆಯೊಂದು ಈಗ ಬಿರುಗಾಳಿಗೆ ಕಾರಣವಾಗಿದೆ. ಭಾರತದಲ್ಲಿ ಟ್ವಿಟರ್‌ ಅನ್ನು ಮುಚ್ಚುವುದಾಗಿ (Twitter shut down) ಬೆದರಿಕೆ ಹಾಕಲಾಗಿತ್ತು ಎಂದು ಜಾಕ್‌ ಡೋರ್ಸಿ (Twitter shut down) ಆಪಾದಿಸಿದ್ದಾರೆ. ʼʼಇದು ಅಪ್ಪಟ ಸುಳ್ಳುʼʼ ಎಂದು ಕೇಂದ್ರ ಉದ್ಯಮಶೀಲತೆ ಸಹಕಾರಿ ಸಚಿವ ರಾಜೀವ್‌ ಚಂದ್ರಶೇಖರ್‌ (Rajiv chandrashekhar) ಹೇಳಿದ್ದಾರೆ.

ಜಾಕ್‌ ಡೋರ್ಸಿ ಒಂದು ಸಂದರ್ಶನದ ಸಮಯದಲ್ಲಿ ಈ ಮಾತನ್ನು ಹೇಳಿದ್ದರು. ಯಾವುದಾದರೂ ವಿದೇಶಿ ಸರ್ಕಾರಗಳಿಂದ ಒತ್ತಡವನ್ನು ಎದುರಿಸಿದ್ದೀರಾ ಎಂದು ಅವರನ್ನು ಪ್ರಶ್ನಿಸಲಾಗಿತ್ತು. “ಉದಾಹರಣೆಗೆ, ಭಾರತದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಅಂಥ ಕೆಲವು ಸೂಚನೆ ನಮಗೆ ಕೊಡಲಾಗಿತ್ತು. ಸರ್ಕಾರವನ್ನು ಟೀಕಿಸುತ್ತಿದ್ದ ಕೆಲವು ಪತ್ರಕರ್ತರ ಟ್ವೀಟ್‌ಗಳನ್ನು ತೆಗೆಯಲು ಹೇಳಲಾಗಿತ್ತು. ಇಲ್ಲವಾದರೆ ʼಭಾರತದಲ್ಲಿ ನಾವು ಟ್ವಿಟರ್ ಅನ್ನು ಮುಚ್ಚುತ್ತೇವೆ’ ʼನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ನಾವು ರೈಡ್‌ ಮಾಡುತ್ತೇವೆ’ ಎಂದು ಬೆದರಿಸಲಾಗಿತ್ತು. ರೈಡ್‌ ಕೂಡ ನಡೆಯಿತು. ಇದು ಪ್ರಜಾಪ್ರಭುತ್ವ ರಾಷ್ಟ್ರವೆನಿಸಿದ ಭಾರತದಲ್ಲಿ ನಡೆದದ್ದುʼʼ ಎಂದು ಡೋರ್ಸಿ ಹೇಳಿದ್ದರು.

ಇದಕ್ಕೆ ಟ್ವಿಟರ್‌ನಲ್ಲಿ ಪೋಸ್ಟ್‌ ಮೂಲಕ ಉತ್ತರ ನೀಡಿರುವ ಸಚಿವ ರಾಜೀವ್‌ ಚಂದ್ರಶೇಖರ್‌, ʼʼಇದೊಂದು ಅಪ್ಪಟ ಸುಳ್ಳುʼʼ ಎಂದಿದ್ದಾರೆ. ʼʼಜಾಕ್‌ ಡೋರ್ಸಿ ಆಡಳಿತದಡಿಯಲ್ಲಿ ಟ್ವಿಟರ್‌ ಭಾರತೀಯ ಕಾನೂನುಗಳನ್ನು ಸತತವಾಗಿ ಉಲ್ಲಂಘಿಸುತ್ತಿತ್ತು. 2020ರಿಂದ 2022ರವರೆಗೆ ಕಾನೂನು ಉಲ್ಲಂಘನೆ ಮಾಡುತ್ತಲೇ ಇದ್ದ ಅವರು 2022ರ ಬಳಿಕವೇ ಅದನ್ನು ಪಾಲಿಸಲು ಆರಂಭಿಸಿದರು. ಆದರೆ ಇದಕ್ಕಾಗಿ ಯಾರೂ ಅವರನ್ನು ಜೈಲಿಗೆ ಹಾಕಲಿಲ್ಲ ಅಥವಾ ಟ್ವಿಟರ್‌ ಅನ್ನು ಶಟ್‌ಡೌನ್‌ ಮಾಡಲಿಲ್ಲ. ಡೋರ್ಸಿಯ ಆಡಳಿತ ಭಾರತೀಯ ಸಾರ್ವಭೌಮ ಕಾನೂನುಗಳನ್ನು ಪಾಲಿಸುವಲ್ಲಿ ಸಮಸ್ಯೆ ಹೊಂದಿತ್ತು. ಭಾರತದ ಕಾನೂನು ತನಗೆ ಅನ್ವಯವಾಗುವುದಿಲ್ಲ ಎಂದು ಅದು ಹೇಳುತ್ತಿತ್ತು. ಭಾರತದಲ್ಲಿ ಕಾರ್ಯಾಚರಿಸುವ ಎಲ್ಲ ಸಂಸ್ಥೆಗಳು ಇಲ್ಲಿ ಕಾನೂನನ್ನು ಪಾಲಿಸಬೇಕುʼʼ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ʼʼ2021ರ ಜನವರಿಯಲ್ಲಿ ನಡೆದ ರೈತರ ಪ್ರತಿಭಟನೆಗಳ ಸಂದರ್ಭದಲ್ಲಿ ಸಾಕಷ್ಟು ಅಪಪ್ರಚಾರ, ಸುಳ್ಳು ಮಾಹಿತಿಯ ಪ್ರವಾಹವಿತ್ತು. ನರಮೇಧ ನಡೆಯುತ್ತಿದೆ ಎಂದೆಲ್ಲ ಸುಳ್ಳು ಹೇಳಲಾಗಿತ್ತು. ಈ ತಪ್ಪು ಮಾಹಿತಿಯನ್ನು ತೆಗೆದುಹಾಕಲು ಸರ್ಕಾರ ಒತ್ತಾಯಿಸಿತ್ತು. ಯಾಕೆಂದರೆ ನಕಲಿ ಸುದ್ದಿಗಳು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುವಂತಿದ್ದವು. ಜಾಕ್ ಆಡಳಿತದಲ್ಲಿ ಟ್ವಿಟರ್‌ನಲ್ಲಿ ಪಕ್ಷಪಾತದ ನಡವಳಿಕೆ ಇತ್ತು. ಅಮೆರಿಕದಲ್ಲಿ ಇದೇ ರೀತಿಯ ಘಟನೆಗಳು ನಡೆದಾಗ ಅವರು ಅಂಥ ಮಾಹಿತಿ ತೆಗೆದುಹಾಕಿದ್ದರು. ಆದರೆ ಭಾರತದಲ್ಲಿ ತಪ್ಪು ಮಾಹಿತಿ ತೆಗೆದುಹಾಕಲು ಒಪ್ಪಲಿಲ್ಲ. ಆದರೂ ಯಾರೂ ಅವರ ಮೇಲೆ ದಾಳಿ ಮಾಡಲಿಲ್ಲ ಅಥವಾ ಜೈಲಿಗೆ ಕಳುಹಿಸಲಿಲ್ಲ. ಭಾರತೀಯ ಕಾನೂನುಗಳನ್ನು ಅವರು ಅನುಸರಿಸಬೇಕು ಎಂಬುದರ ಮೇಲೆ ಮಾತ್ರ ನಮ್ಮ ಗಮನ ಇತ್ತು. ಜಾಕ್‌ ಡೋರ್ಸಿ ಅವರ ಅನಿಯಂತ್ರಿತ, ಸ್ಪಷ್ಟವಾದ ಪಕ್ಷಪಾತ ಮತ್ತು ತಾರತಮ್ಯದ ನಡವಳಿಕೆ ಮತ್ತು ಅಧಿಕಾರದ ದುರುಪಯೋಗದ ಬಗ್ಗೆ ಸಾರ್ವಜನಿಕ ಡೊಮೇನ್‌ನಲ್ಲಿ ಸಾಕಷ್ಟು ಪುರಾವೆಗಳಿವೆ. ಡೋರ್ಸೆಯ ಅಡಳಿತದಲ್ಲಿ ಟ್ವಿಟರ್ ಕೇವಲ ಭಾರತೀಯ ಕಾನೂನನ್ನು ಉಲ್ಲಂಘಿಸಿದ್ದು ಮಾತ್ರವಲ್ಲ, ಪಕ್ಷಪಾತಿಯಾಗಿ ನಮ್ಮ ಸಂವಿಧಾನದ ಆರ್ಟಿಕಲ್ 14,‌ 19ಗಳನ್ನು ಉಲ್ಲಂಘಿಸಿ, ನಿರಂಕುಶವಾದ ರೀತಿಯಲ್ಲಿ ತಪ್ಪು ಮಾಹಿತಿಯನ್ನು ಆಯುಧವಾಗಿ ಬಳಸುವಂತೆ ಸಹಾಯ ಮಾಡಿತುʼʼ ಎಂದು ಆರ್‌ಸಿ ಆರೋಪಿಸಿದ್ದಾರೆ.

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಾಮಾಜಿಕ ಮೀಡಿಯಾಗಳಿಗೆ ನಮ್ಮ ಸರ್ಕಾರದ ನೀತಿಗಳು ಸ್ಪಷ್ಟವಾಗಿವೆ. ಸುರಕ್ಷಿತತೆ ಮತ್ತು ವಿಶ್ವಾಸಾರ್ಹತೆಯ ಜತೆಗೆ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಇಲ್ಲಿನ ಕಾನೂನುಗಳನ್ನು ಅವರು ಅನುಸರಿಸಬೇಕು ಎಂದು ರಾಜೀವ್‌ ಚಂದ್ರಶೇಖರ್‌ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Hindenburg : ಟ್ವಿಟರ್‌ ಸಂಸ್ಥಾಪಕ ಜಾಕ್‌ ಡೋರ್ಸೆ ಕಂಪನಿ ಬ್ಲಾಕ್ ವಿರುದ್ಧ ಹಿಂಡೆನ್‌ಬರ್ಗ್‌ ಸ್ಫೋಟಕ ವರದಿ ಪ್ರಕಟ

Exit mobile version