ವಾಷಿಂಗ್ಟನ್: ಟ್ವಿಟರ್ ಇರುವುದೇ ಹಾಗೆ. ಅಲ್ಲಿ ನೀವು 280 ಕ್ಯಾರೆಕ್ಟರ್‌ಗಳನ್ನು (Twitter Characters) (ಕನ್ನಡದಲ್ಲಾದರೆ ಸುಮಾರು 28-30 ಪದ) ಮಾತ್ರ ಬರೆಯಬೇಕು. ಅಷ್ಟೇ ಪದಗಳಲ್ಲಿ ನಿಮ್ಮ ಅಭಿಪ್ರಾಯ, ಟೀಕೆ, ವ್ಯಂಗ್ಯ, ವಿಡಂಬನೆ, ಕವನ… ಹೀಗೆ ಎಲ್ಲವನ್ನೂ ಇಷ್ಟೇ ಪದಗಳಲ್ಲಿ ವಿವರಿಸಬೇಕು. ಹಾಗೆಯೇ, ಒಮ್ಮೆ ಟ್ವೀಟ್ ಮಾಡಿದ ಕಂಟೆಂಟ್‌ಅನ್ನು ಯಾವುದೇ ಕಾರಣಕ್ಕೂ ಎಡಿಟ್ ಮಾಡುವ ಅವಕಾಶವಿಲ್ಲ. ಆದರೂ, ಟ್ವಿಟರ್ ಜಗತ್ತಿನಾದ್ಯಂತ ಖ್ಯಾತಿಯಾಗಿದೆ. ಕೋಟ್ಯಂತರ ಜನ ಟ್ವಿಟರ್ ಬಳಸುತ್ತಾರೆ. ಆದರೀಗ, ಟ್ವಿಟರ್ ಕೂಡ ಬದಲಾಗುತ್ತಿದ್ದು, ಶೀಘ್ರದಲ್ಲೇ 280 ಕ್ಯಾರೆಕ್ಟರ್‌ಗಳ ಬದಲಿಗೆ 10 ಸಾವಿರ ಕ್ಯಾರೆಕ್ಟರ್‌ಗಳವರೆಗೆ ಬರೆಯುವ ಸೌಲಭ್ಯ ಸಿಗಲಿದೆ.
ಹೌದು, ಟ್ವಿಟರ್ ಸಿಇಒ ಎಲಾನ್ ಮಸ್ಕ್ ಅವರೇ ಈ ಕುರಿತು ಘೋಷಣೆ ಮಾಡಿದ್ದಾರೆ. “ಟ್ವಿಟರ್‌ನಲ್ಲಿ ಹೆಚ್ಚಿನ ಪದಗಳಲ್ಲಿ ಬರೆಯುವ ಅವಕಾಶ ನೀಡುವುದು ಅತ್ಯದ್ಭುತ ವಿಚಾರ. ಇದರಿಂದ ಬಹುತೇಕ ಜನ ಟ್ವಿಟರ್‌ಅನ್ನು ಸುದೀರ್ಘವಾಗಿ ಬಳಸಲು ಸಾಧ್ಯವಾಗುತ್ತದೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್, “ಶೀಘ್ರದಲ್ಲಿಯೇ ಟ್ವಿಟರ್ 10 ಸಾವಿರ ಕ್ಯಾರೆಕ್ಟರ್‌ಗಳವರೆಗೆ ಬರೆಯುವುದು ಸೇರಿ ಹಲವು ಸಿಂಪಲ್ ಫಾರ್ಮ್ಯಾಟಿಂಗ್ ಟೂಲ್‌ಗಳೊಂದಿಗೆ ನಿಮಗೆ ಸಿಗಲಿದೆ” ಎಂದು ಹೇಳಿದ್ದಾರೆ.
ಎಲಾನ್ ಮಸ್ಕ್ ರಿಪ್ಲೈ
ಪ್ರೀಮಿಯಂ ಕಂಟೆಂಟ್ ಬರಹಗಾರರು ಸುಲಭವಾಗಿ ಸಬ್‌ಸ್ಕ್ರೈಬ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ಕೂಡ ಮಸ್ಕ್ ಹೇಳಿದ್ದಾರೆ. ಅಲ್ಲಿಗೆ, ಸುದೀರ್ಘ ಬರಹಗಳಿಗೆ ಶುಲ್ಕ ವಿಧಿಸುವ ಕುರಿತು ಟ್ವಿಟರ್ ಸಿಇಒ ಸುಳಿವು ನೀಡಿದ್ದಾರೆ. ಈಗಾಗಲೇ ಅಮೆರಿಕದಲ್ಲಿ ಬ್ಲ್ಯೂಟಿಕ್ ಇರುವ ಟ್ವಿಟರ್ ಬಳಕೆದಾರರು ನಾಲ್ಕು ಸಾವಿರ ಕ್ಯಾರೆಕ್ಟರ್‌ಗಳನ್ನು ಬರೆಯಬಹುದಾಗಿದೆ. ಆದರೆ, ಟ್ವಿಟರ್‌ನಲ್ಲಿ ಬ್ಲ್ಯೂ, ಗ್ರೇ ಹಾಗೂ ಗೋಲ್ಡ್ ಕಲರ್ ಟಿಕ್‌ಗಳು ಇರುವ ಕಾರಣ, ಇವರಿಗೆ ಎಷ್ಟು ಕ್ಯಾರೆಕ್ಟರ್ ಇರಲಿದೆ, ನೋಂದಣಿ ಶುಲ್ಕ ಎಷ್ಟಿರಲಿದೆ ಎಂಬುದರ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: Manchester United: ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸಲು ಬಿಡ್ ಸಲ್ಲಿಸಿದ ಎಲಾನ್ ಮಸ್ಕ್; ವರದಿ
ಎಲಾನ್ ಮಸ್ಕ್ ಅವರು ಟ್ವಿಟರ್‌ಅನ್ನು ಖರೀದಿಸಿ, ಅದರ ಸಿಇಒ ಆದ ಬಳಿಕ ಹಲವು ಬದಲಾವಣೆ ಮಾಡಲಾಗಿದೆ. ಬ್ಲ್ಯೂಟಿಕ್, ಟ್ವಿಟರ್ ನಿಯಮಗಳು ಸೇರಿ ಹಲವು ಮಾರ್ಪಾಡು ಮಾಡಲಾಗಿದೆ. ಇದರ ಬೆನ್ನಲ್ಲೇ, ಚಾಟ್‌ಜಿಪಿಟಿಯಂತೆ ಟ್ವಿಟರ್ ಕೂಡ ಎಐ ಆಧರಿತ ಚಾಟ್‌ಬಾಟ್ ಅಭಿವೃದ್ಧಿಗೆ ಮುಂದಾಗಿದ್ದು, ಎಐ ಸಂಶೋಧಕರನ್ನು ನೇಮಕ ಮಾಡಿಕೊಂಡಿದೆ.
ಎಲಾನ್ ಮಸ್ಕ್ ಅವರು, ಇತ್ತೀಚೆಗೆ ಆಲ್ಫಾಬೆಟ್‌ನ ಡೀಪ್‌ಮೈಂಡ್ ಎಐ ಘಟಕವನ್ನು ತೊರೆದ ಸಂಶೋಧಕ ಇಗೊರ್ ಬಾಬುಶ್ಕಿನ್ ಅವರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಓಪನ್‌ಎಐ ಅಭಿವೃದ್ಧಿಪಡಿಸಿದ ಪಠ್ಯ-ಆಧಾರಿತ ಜಾಟ್‌ಜಿಪಿಟಿ ಚಾಟ್‌ಬಾಟ್, ಗದ್ಯ, ಕವನ ಅಥವಾ ಕಮಾಂಡ್‌ನಲ್ಲಿ ಕಂಪ್ಯೂಟರ್ ಕೋಡ್ ಅನ್ನು ರಚಿಸಬಹುದು. ಸದ್ಯ ಈ ಚಾಟ್‌ಬಾಟ್ ಬಳಕೆಯ ಆಯಾಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್ ಕೂಡ ಎಐ ಚಾಟ್‌ಬಾಟ್ ಅಭಿವೃದ್ಧಿಗೆ ಮುಂದಾಗಿರುವುದು ಕುತೂಹಲಕಾರಿಯಾಗಿದೆ.