ಲಕ್ನೋ: ಉತ್ತರ ಪ್ರದೇಶದ ಕಾನ್ಪುರ ಘಟಂಪುರ್ ಕೊಟ್ವಾಲಿ ಗ್ರಾಮದ ಇಟ್ಟಿಗೆ ಗೂಡು ಬಳಿ ಇಬ್ಬರು ಬಾಲಕಿಯರ ದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಟ್ಟಿಗೆ ಗೂಡುಗಳ ಗುತ್ತಿಗೆದಾರ, ಆತನ ಮಗ ಮತ್ತು ಸೋದರಳಿಯ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಕೆಲವು ದಿನಗಳ ನಂತರ ಈ ಬಾಲಕಿಯರ ಮೃತದೇಹ ಪತ್ತೆಯಾಗಿದೆ (Crime News).
ಇಟ್ಟಿಗೆ ಗೂಡುಗಳ ಗುತ್ತಿಗೆದಾರ ರಾಮ್ ರೂಪ್ ನಿಷಾದ್ (48), ಆತನ ಮಗ ರಾಜು (18) ಮತ್ತು ಸೋದರಳಿಯ ಸಂಜಯ್ (19) ಕೆಲವು ದಿನಗಳ ಹಿಂದೆ ಈ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಬಾಲಕಿಯರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಹೆಚ್ಚುವರಿ ಎಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹರೀಶ್ ಚಂದ್ರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಬ್ಲ್ಯಾಕ್ ಮೇಲ್
ಬಾಲಕಿಯರಿಗೆ ಬ್ಲ್ಯಾಕ್‌ಮೇಲ್ ಮಾಡಲು ಆರೋಪಿಗಳು ಅತ್ಯಾಚಾರದ ವಿಡಿಯೊ ಮಾಡಿದ್ದರು. ಇದರಿಂದ ಮನನೊಂದ 14 ಮತ್ತು 16 ವರ್ಷದ ಬಾಲಕಿಯರು ಬುಧವಾರ (ಫೆಬ್ರವರಿ 28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಬಾಲಕಿಯರಿಗೆ ಬಲವಂತದಿಂದ ಮದ್ಯಪಾನ ಮಾಡಿಸಿ ಕೃತ್ಯ ಎಸಗಲಾಗಿದೆ ಎಂದು ಅವರು ಅರೋಪಿಸಿದ್ದಾರೆ. ಬುಧವಾರ ಬಾಲಕಿಯರು ನಾಪತ್ತೆಯಾಗಿದ್ದರು. ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿದಾಗ ಸಂಜೆಯ ವೇಳೆಗೆ ಅವರ ಮೃತದೇಹ ಇಟ್ಟಿಗೆ ಗೂಡಿನಿಂದ ಸುಮಾರು 400 ಮೀಟರ್ ದೂರದ ಮರವೊಂದರಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಹರೀಶ್ ಚಂದ್ರ ವಿವರಿಸಿದ್ದಾರೆ.
ಘಟನೆಯ ಸಂಬಂಧ ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯ ನಿವಾಸಿಗಳಾದ ಎಲ್ಲ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. “ಆರೋಪಿಗಳ ಮೊಬೈಲ್ ಫೋನ್‌ಗಳಿಂದ ಹುಡುಗಿಯರ ವಿಡಿಯೊಗಳು ಮತ್ತು ಫೋಟೊಗಳನ್ನು ವಶಪಡಿಸಿಕೊಂಡಿದ್ದೇವೆ. ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು” ಎಂದು ಹರೀಶ್ ಚಂದ್ರ ಹೇಳಿದ್ದಾರೆ.
ʼʼಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಮತ್ತು ಸಾಮೂಹಿಕ ಅತ್ಯಾಚಾರ ಆರೋಪಗಳನ್ನು ಪರಿಶೀಲಿಸಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆʼʼ ಎಂದು ಹರೀಶ್ ಚಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: Actor Manoj Rajput: ಅತ್ಯಾಚಾರ ಎಸಗಿದ ಆರೋಪದ ಮೇಲೆ ನಟ ಮನೋಜ್ ರಜಪೂತ್ ಬಂಧನ
ದಕ್ಷಿಣ ವಲಯ ಡಿಸಿಪಿ ರವೀಂದ್ರ ಕುಮಾರ್ ಮಾತನಾಡಿ, “ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆʼʼ ಎಂದು ಗುಡುಗಿದ್ದಾರೆ. ಮೃತರು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಇಬ್ಬರು ಕಾರ್ಮಿಕರ ಮಕ್ಕಳಾಗಿದ್ದು, ಇಟ್ಟಿಗೆ ಗೂಡು ಇರುವ ಸ್ಥಳದಲ್ಲಿ ತಮ್ಮ ಕುಟುಂಬಗಳೊಂದಿಗೆ ವಾಸಿಸುತ್ತಿದ್ದರು. ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಶೀಘ್ರ ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.