ನವದೆಹಲಿ: ಕೇರಳದ (Kerala) ಕೋಯಿಕ್ಕೋಡ್ (Kozhikode district) ಜಿಲ್ಲೆಯಲ್ಲಿ ಇಬ್ಬರು ನಿಫಾ ವೈರಸ್ ಸೋಂಕಿನಿಂದಾಗಿ (Nipah Virus Deaths) ಮೃತಪಟ್ಟಿರುವುದನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ (Union health minister Mansukh Mandaviya) ಅವರು ಖಚಿತಪಡಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ನಿಪಾ ವೈರಸ್ ಸೋಂಕಿನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಕೇಂದ್ರ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಲಾಗಿದೆ ಎಂದು ಮಾಂಡವಿಯಾ ಹೇಳಿದರು.
ನಿಫಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳದ ಕೋಯಿಕ್ಕೋಡ್ ಜಿಲ್ಲೆಯಾದ್ಯಂತ ಕಟ್ಟೆಚ್ಚರಿಕೆಯನ್ನು ವಹಿಸಲಾಗಿದೆ. ಸೋಂಕು ದೃಢಪಟ್ಟವರು ಸೋಮವಾರ ಮೃತಪಟ್ಟಿದ್ದರು. ಕೇರಳದಲ್ಲಿ 2018ರಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು ಕೆಲವರು ಸಾವಿಗೀಡಾಗಿದ್ದರು.
ಈ ಮಧ್ಯೆ, ಕೇರಳ ಸರ್ಕಾರವು ಕೋಯಿಕ್ಕೋಡ್‌ನಲ್ಲಿ ಕಂಟ್ರೋಲ್ ರೂಮ್ ತೆರಿದೆದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
“ನಾವು ಇಲ್ಲಿ(ಕೋಯಿಕ್ಕೋಡ್) ನಿಯಂತ್ರಣ ಕೊಠಡಿಯನ್ನು ತೆರೆದಿದ್ದೇವೆ. ಮುನ್ನೆಚ್ಚರಿಕೆ ಕ್ರಮ ಜಾರಿಗೊಳಿಸಲು, ನಾವು 16 ಸಮಿತಿಗಳನ್ನು ರಚಿಸಿದ್ದೇವೆ ಮತ್ತು ಎಲ್ಲಾ ಆಸ್ಪತ್ರೆಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್‌ಗಳನ್ನು ಧರಿಸುವುದು ಸೇರಿದಂತೆ ಸೋಂಕು ನಿಯಂತ್ರಣ ಪ್ರೋಟೋಕಾಲ್ ಅನ್ನು ಅನುಸರಿಸಲು ಸೂಚಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಅಲ್ಲದೇ, ಅನಗತ್ಯವಾಗಿ ಆಸ್ಪತ್ರೆಗೆ ಭೇಟಿ ನೀಡದಂತೆ ಜನರಲ್ಲಿ ಕೇಳಿಕೊಂಡಿದ್ದಾರೆ.
ಸದ್ಯಕ್ಕೆ ಯಾವುದೇ ಭಯ ಅಥವಾ ಆತಂಕ ಪಡುವ ಅಗತ್ಯವಿಲ್ಲ. ಹೆಚ್ಚಿನ ಟೆಸ್ಟ್‌ಗಳು ಪಾಸಿಟಿವ್ ಕಂಡು ಬಂದರೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಈಗ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಬಹುತೇಕ ಟೆಸ್ಟ್‌ಗಳು ನೆಗೆಟಿವ್ ಫಲಿತಾಂಶವನ್ನು ನೀಡಲಿ ಎಂದು ನಾನು ಬಯುಸುವೆ ಎಂದು ಸಚಿವ ವೀಣಾ ಜಾರ್ಜ್ ಹೇಳಿದರು.
ಈ ಸುದ್ದಿಯನ್ನೂ ಓದಿ: Covid Origin: ಪ್ರಾಣಿಗಳಿಂದಲೇ ಮನುಷ್ಯರಿಗೆ ತಗುಲಿದ ಕೋವಿಡ್ ಸೋಂಕು!
ಇದಕ್ಕೂ ಮುನ್ನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಡಿಯೋ ಸಂದೇಶದಲ್ಲಿ ಎರಡು ಸಾವುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದ್ದರು. ಜನರು ಜಾಗರೂಕರಾಗಿರಲು ಮುಖ್ಯಮಂತ್ರಿ ಸಲಹೆ ನೀಡಿದರು ಮತ್ತು ಮೃತರ ನಿಕಟ ಸಂಪರ್ಕದಲ್ಲಿದ್ದವರು ಚಿಕಿತ್ಸೆಯಲ್ಲಿರುವುದರಿಂದ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದರು.