ನವದೆಹಲಿ: 2015ರ ಉಧಮ್‌ಪುರ ಉಗ್ರ ದಾಳಿಯ (Udhampur attack) ಮಾಸ್ಟರ್‌ಮೈಂಡ್, ಲಷ್ಕರೆ ತಯ್ಬಾದ ಭಯೋತ್ಪಾದಕ ಹಂಜ್ಲಾಲ್ ಅದ್ನಾನ್‌ನನ್ನು(Hanzla Adnan) ಪಾಕಿಸ್ತಾನದ ಕರಾಚಿಯಲ್ಲಿ(Karachi Pakistan) ಅಪರಿಚಿತ ಬಂದೂಕುಧಾರಿಗಳು ಕೊಲೆಗೈದಿದ್ದಾರೆ(LeT terrorist killed). 2015 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಈಗ ಹತ್ಯೆಗೀಡಾಗಿರುವ ಅದ್ನಾನ್ ಈ ದಾಳಿಯನ್ನು ರೂಪಿಸಿದ್ದ ಎಂದು ಭದ್ರತಾ ಪಡೆಗಳು ಹೇಳಿದ್ದವು. ಆಶ್ಚರ್ಯ ಎಂದರೆ, ಸ್ವತಃ ಪಾಕಿಸ್ತಾನ ಸೇನೆಯು (Pakistan Army) ಗುಂಡೇಟು ತಿಂದಿದ್ದ ಈ ಉಗ್ರನನ್ನು ರಹಸ್ಯವಾಗಿ ಆಸ್ಪತ್ರೆಗೆ ದಾಖಲಿಸಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಈಗ ಹತ್ಯೆಗೀಡಾಗಿರುವ ಅದ್ನಾನ್, 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಲ್ಇಟಿ ನಾಯಕ ಹಫೀಜ್ ಸಯೀದ್‌ನ ನಿಕಟವರ್ತಿಯಾಗಿದ್ದ. ಡಿಸೆಂಬರ್ 2 ಮತ್ತು 3 ರ ಮಧ್ಯರಾತ್ರಿಯ ರಾತ್ರಿ ಹಂಝ್ಲಾ ಅದ್ನಾನ್‌ನನ್ನು ಆತನ ಮನೆಯ ಹೊರಗೆ ಗುಂಡು ಹೊಡೆದು ಹತ್ಯೆ ಮಾಡಲಾಗಿದೆ. ಆತನ ದೇಹದಲ್ಲಿ ನಾಲ್ಕು ಗುಂಡುಗಳು ಪತ್ತೆಯಾಗಿವೆ.
ಎಲ್‌ಇಟಿ ಭಯೋತ್ಪಾದಕನನ್ನು ಪಾಕಿಸ್ತಾನಿ ಸೇನೆಯು ಕರಾಚಿಯ ಆಸ್ಪತ್ರೆಗೆ ರಹಸ್ಯವಾಗಿ ಕರೆದೊಯ್ದಿದೆ. ತೀವ್ರವಾಗಿ ಗುಂಡೇಟಿನಿಂದ ಬಳಲುತ್ತಿದ್ದ ಅದ್ನಾನ್ ಡಿಸೆಂಬರ್ 5 ರಂದು ಅಸು ನೀಗಿದ್ದಾನೆ. ಇತ್ತೀಚೆಗೆ, ಹಂಝ್ಲಾ ಅದ್ನಾನ್ ರಾವಲ್ಪಿಂಡಿಯಿಂದ ಕರಾಚಿಗೆ ತನ್ನ ಕಾರ್ಯಾಚರಣೆಯ ನೆಲೆಯನ್ನು ಬದಲಾಯಿಸಿದ್ದ.
2015ರ ಉಧಮ್‌ಪುರ ದಾಳಿಯಲ್ಲಿ ಬಿಎಸ್‌ಎಫ್‌ನ ಇಬ್ಬರು ಸೈನಿಕರು ಮೃತಪಟ್ಟಿದ್ದರು ಮತ್ತು 13 ಯೋಧರಿಗೆ ಗಾಯವಾಗಿತ್ತು. ಬಿಎಸ್‌ಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯ ಪ್ರಕರಣವನ್ನು ತನಿಖೆ ನಡೆಸಿದ ಭಾರತೀಯ ತನಿಖಾ ಏಜೆನ್ಸಿ(ಎನ್ಐಎ) ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿತ್ತು.
2016 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ಪ್ರದೇಶದಲ್ಲಿ ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಬೆಂಗಾವಲು ಪಡೆ ಮೇಲೆ ಭಯೋತ್ಪಾದಕ ದಾಳಿಯನ್ನು ಲಷ್ಕರೆ ಸಂಘಟಿಸಿತ್ತು. ಈ ದಾಳಿಯಲ್ಲಿ 8 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದರು ಮತ್ತು 22 ಮಂದಿ ಗಾಯಗೊಂಡಿದ್ದರು.
ಮೂಲಗಳ ಪ್ರಕಾರ, ಹೊಸದಾಗಿ ನೇಮಕಗೊಂಡಿರುವ ಭಯೋತ್ಪಾದಕರನ್ನು ಪ್ರೇರೇಪಿಸಲು ಹಂಝ್ಲಾ ಅದ್ನಾನ್‌ನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಎಲ್‌ಇಟಿ ಶಿಬಿರಕ್ಕೆ ಕಳುಹಿಸಲಾಗಿತ್ತು. ಭಾರತಕ್ಕೆ ನುಸುಳಲು ಮತ್ತು ಭಯೋತ್ಪಾದಕ ದಾಳಿಗಳನ್ನು ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ, ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಪಾಕಿಸ್ತಾನದ ಸೈನ್ಯವು ಆತನಿಗೆ ಬೆಂಬಲ ನೀಡಿತ್ತು.
ಈ ಸುದ್ದಿಯನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಐವರು ಲಷ್ಕರ್ ಉಗ್ರರ ಹತ್ಯೆ