ನ್ಯೂಯಾರ್ಕ್: ಶಾಂತಿಸ್ಥಾಪನೆ, ಹೋರಾಟ, ಜನರ ರಕ್ಷಣೆ ಸೇರಿ ಹಲವು ರೀತಿಯಲ್ಲಿ ಕಾರ್ಯನಿರ್ವಹಿಸುವಾಗ ಹುತಾತ್ಮರಾದ ವಿಶ್ವಸಂಸ್ಥೆ ಶಾಂತಿಸ್ಥಾಪಕರಿಗೆ ಗೌರವ ಸಲ್ಲಿಸಬೇಕು ಎಂಬ ದಿಸೆಯಲ್ಲಿ ಭಾರತ ಮಂಡಿಸಿದ ನಿರ್ಣಯವನ್ನು (UNGA Resolution) ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಅಳವಡಿಸಿಕೊಂಡಿದೆ. ಆ ಮೂಲಕ ಭಾರತ ಮಂಡಿಸಿದ ನಿರ್ಣಯಕ್ಕೆ ಜಾಗತಿಕ ಮನ್ನಣೆ ದೊರೆತಂತಾಗಿದೆ.
ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ವಿಶ್ವಸಂಸ್ಥೆ ಹುತಾತ್ಮ ಶಾಂತಿಸ್ಥಾಪಕರಿಗೆ ಗೌರವ ಸಲ್ಲಿಸುವ ದಿಸೆಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಬೇಕು ಎಂಬ ಭಾರತದ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ರಾಯಭಾರಿ ರುಚಿರಾ ಕಾಂಬೋಜ್ ಅವರು ಮಂಡಿಸಿದರು. ಭಾರತದ ನಿರ್ಣಯಕ್ಕೆ ವಿಶ್ವಸಂಸ್ಥೆಯ 190 ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸಿದ ಕಾರಣ, ಒಮ್ಮತದ ಮೇರೆಗೆ ನಿರ್ಣಯವನ್ನು ಅಳವಡಿಸಿಕೊಳ್ಳಲಾಯಿತು.
ಪ್ರಧಾನಿ ಟ್ವೀಟ್
Delighted that the Resolution to establish a new Memorial Wall for fallen Peacekeepers, piloted by India, has been adopted in the UN General Assembly. The Resolution received a record 190 co-sponsorships. Grateful for everyone's support.
— Narendra Modi (@narendramodi) June 15, 2023
“ಹುತಾತ್ಮ ಶಾಂತಿಸ್ಥಾಪಕರಿಗೆ ಗೌರವ ಸಲ್ಲಿಸಲು ವಿಶ್ವಸಂಸ್ಥೆಯ ಪ್ರಮುಖ ಸ್ಥಳದಲ್ಲಿ ಸ್ಮಾರಕ ಗೋಡೆ ನಿರ್ಮಿಸಲಾಗುವುದು. ಶಾಂತಿಸ್ಥಾಪನೆಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಅವರ ಹೆಸರುಗಳನ್ನು ಕೂಡ ಗೋಡೆಯ ಮೇಲೆ ಕೆತ್ತಲಾಗುತ್ತದೆ. ಆ ಮೂಲಕ ಹುತಾತ್ಮಕರ ಪರಮೋಚ್ಚ ತ್ಯಾಗವನ್ನು ಸ್ಮರಣೀಯಗೊಳಿಸಲಾಗುತ್ತದೆ” ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ತಿಳಿಸಿದೆ.
ಇದನ್ನೂ ಓದಿ: Sagara Marikamba Jatra : ಭಾರತೀಯ ಪರಂಪರೆಗೆ ಈಗ ಜಾಗತಿಕ ಮನ್ನಣೆ; ಟಿ.ಎಸ್.ನಾಗಾಭರಣ ಸಂತಸ
ಬೆಂಬಲಕ್ಕೆ ಧನ್ಯವಾದ ಎಂದ ಮೋದಿ
ಭಾರತದ ನಿರ್ಣಯವನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಅಳವಡಿಸಿಕೊಂಡ ಕಾರಣ, ದೇಶಕ್ಕೆ ಬೆಂಬಲ ನೀಡಿದ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದರು. “ಹುತಾತ್ಮ ಶಾಂತಿಸ್ಥಾಪಕರಿಗಾಗಿ ಸ್ಮಾರಕ ನಿರ್ಮಿಸಬೇಕು ಎಂಬ ಭಾರತದ ನಿರ್ಣಯವನ್ನು ಅಳವಡಿಸಿಕೊಂಡಿರುವ ವಿಷಯ ತಿಳಿದು ಸಂತಸವಾಯಿತು. ಭಾರತಕ್ಕೆ ಬೆಂಬಲ ನೀಡಿದ 190 ರಾಷ್ಟ್ರಗಳಿಗೆ ಧನ್ಯವಾದ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.