Site icon Vistara News

ಹಮಾಸ್‌ ಮೇಲೆ ಇಸ್ರೇಲ್‌ ದಾಳಿ ಖಂಡಿಸಿ ವಿಶ್ವಸಂಸ್ಥೆ ನಿರ್ಣಯ; ‘ಸ್ನೇಹಿತ’ನಿಗಾಗಿ ಮತ ಹಾಕದ ಭಾರತ

ಭಾರತ

UNHRC adopts resolution condemning Israel’s war crimes in Gaza; India, 12 other countries abstain

ನ್ಯೂಯಾರ್ಕ್:‌ ಇಸ್ರೇಲ್‌ ಮೇಲೆ 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಮಾಡಿದ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಸೇನೆಯು ಪ್ಯಾಲೆಸ್ತೀನ್‌ನ ಗಾಜಾ ನಗರದ (Gaza City) ಮೇಲೆ ನಿರಂತರವಾಗಿ ದಾಳಿ (Israel Palestine War) ಮಾಡಿದ ವಿರುದ್ಧ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಲಾಗಿದೆ. ಆದರೆ, ಭಾರತಕ್ಕೆ ಇಸ್ರೇಲ್‌ (India Israel Relations) ಮಿತ್ರರಾಷ್ಟ್ರವಾಗಿರುವ ಕಾರಣ ಭಾರತವು ವಿಶ್ವಸಂಸ್ಥೆ ನಿರ್ಣಯದ ಕುರಿತಂತೆ ಮತದಾನ ಮಾಡುವುದರಿಂದ ದೂರ ಉಳಿದಿದೆ. ಆ ಮೂಲಕ ಇಸ್ರೇಲ್‌ ಪರವಾಗಿ ನಿಂತಿದೆ.

ಹೌದು, ಗಾಜಾ ನಗರದಲ್ಲಿ ಇಸ್ರೇಲ್‌ ಯುದ್ಧಾಪರಾಧ ಎಸಗಿದೆ ಎಂಬುದಾಗಿ ಇಸ್ರೇಲ್‌ ವಿರುದ್ಧ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯ (UNHRC) ಸಭೆಯಲ್ಲಿ ನಿರ್ಣಯ ಮಂಡಿಸಲಾಗಿದೆ. ನಿರ್ಣಯದ ಪರವಾಗಿ 28 ರಾಷ್ಟ್ರಗಳು ಮತ ಚಲಾಯಿಸಿದರೆ, ನಿರ್ಣಯದ ವಿರುದ್ಧ 6 ದೇಶಗಳು ಮತ ಹಾಕಿದವು. ಭಾರತ ಸೇರಿ 13 ದೇಶಗಳು ಮತದಾನದಿಂದ ದೂರ ಉಳಿದವು. ಜರ್ಮನಿ, ಅಮೆರಿಕ, ಅರ್ಜೆಂಟೀನಾ, ಪುರುಗ್ವೆ, ಬಲ್ಗೇರಿಯಾ ಹಾಗೂ ಮಲಾವಿ ದೇಶಗಳು ವಿಶ್ವಸಂಸ್ಥೆ ನಿರ್ಣಯದ ವಿರುದ್ಧ ಮತ ಹಾಕಿದವು.

“ಗಾಜಾ ನಗರದ ಮೇಲೆ ನಿರಂತರವಾಗಿ ದಾಳಿ ಮಾಡುವ ಮೂಲಕ ಇಸ್ರೇಲ್‌ ಯುದ್ಧಾಪರಾಧ ಎಸಗಿದೆ. ಇಸ್ರೇಲ್‌ ದಾಳಿಯು ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಇದು ಉಗ್ರರ ಕೃತ್ಯಕ್ಕೆ ಸಮನಾಗಿದೆ” ಎಂಬುದು ನಿರ್ಣಯದ ಸಾರಾಂಶವಾಗಿದೆ. ಆದರೆ, ವಿಶ್ವಸಂಸ್ಥೆ ನಿರ್ಣಯವನ್ನು ಇಸ್ರೇಲ್‌ ವಿರೋಧಿಸಿದ್ದು, ಮೊದಲು ದಾಳಿ ಮಾಡಿದ್ದು ಹಮಾಸ್‌ ಉಗ್ರರು. ನಮ್ಮ ದೇಶದಲ್ಲಿ 1,200 ಜನರನ್ನು ಹಮಾಸ್‌ ಉಗ್ರರು ಕೊಂದಿದ್ದಾರೆ ಎಂದು ತಿಳಿಸಿದೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿವೆ.

ಇದಕ್ಕೂ ಮೊದಲು ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ವಿರುದ್ಧ ಮಂಡಿಸಿದ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿತ್ತು. ಪ್ಯಾಲೆಸ್ತೀನ್‌ನ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್‌ ಆಕ್ರಮಣಕಾರಿ ನೀತಿಯನ್ನು ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಈ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿರುವುದು ವಿಶೇಷವಾಗಿತ್ತು.

ಇದನ್ನೂ ಓದಿ: Israel Strike: ಒಂದೇ ದಾಳಿಯಲ್ಲಿ 7 ಇರಾನ್‌ ಕಮಾಂಡರ್‌ಗಳನ್ನು ಮುಗಿಸಿದ ಇಸ್ರೇಲ್;‌ ಹಿಜ್ಬುಲ್ಲಾ ನಾಯಕ ಜಹೇದಿ ಹತ

Exit mobile version