ಲಂಡನ್: ಭಾರತ ಮೂಲದ ರಿಷಿ ಸುನಕ್ (Rishi Sunak) ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಅಕ್ಟೋಬರ್ 28ರಂದು ಪದಗ್ರಹಣ ಮಾಡಲಿದ್ದಾರೆ. 45 ದಿನಗಳಷ್ಟೇ ಪ್ರಧಾನಿಯಾಗಿದ್ದ ಲಿಜ್ ಟ್ರಸ್ ರಾಜೀನಾಮೆ ಹಿನ್ನೆಲೆಯಲ್ಲಿ ಪ್ರಧಾನಿ ಆಯ್ಕೆ ಪ್ರಕ್ರಿಯೆಗಳು ನಡೆದಿದ್ದವು. ಸುನಕ್ ಅವರಿಗೆ 196 ಕನ್ಸರ್ವೇಟಿವ್ ಪಕ್ಷದ ಸಂಸದರ ಬೆಂಬಲ ವ್ಯಕ್ತವಾಗಿತ್ತು. ಆದರೆ, ಪ್ರತಿಸ್ಪರ್ಧಿ ಪೆನ್ನಿ ಮೋರ್ಡಾಂಟ್ ಅವರಿಗೆ ಕೇವಲ 27 ಸಂಸದರು ಬೆಂಬಲ ಘೋಷಿಸಿದ್ದರು. ಮತದಾನ ನಡೆಯಬೇಕಿದ್ದರೆ, ಕನಿಷ್ಠ 10 ಸಂಸದರ ಬೆಂಬಲವನ್ನು ಪೆನ್ನಿ ಅವರ ಪಡೆಯಬೇಕಿತ್ತು. ಆದರೆ, ಅವರು ವಿಫಲವಾದ ಹಿನ್ನೆಲೆಯಲ್ಲಿ ಸುನಕ್ ಅವರನ್ನು ಮುಂದಿನ ಪ್ರಧಾನಿಯಾಗಿ ಘೋಷಿಸಲಾಯಿತು.
ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗಿರುವ ರಿಷಿ ಸುನಕ್ ಅವರು, ಇಂಗ್ಲೆಂಡ್ ರಾಜನಗಿಂತಲೂ ಹೆಚ್ಚು ಶ್ರೀಮಂತರಾಗಿದ್ದಾರೆ. ಅವರ ಬಗ್ಗೆ ಗೊತ್ತಿರದ ಸಂಗತಿಗಳು ಇಲ್ಲಿವೆ ಓದಿ…
೧. ರಿಷಿ ಸುನಕ್ ಅವರು ಬ್ರಿಟನ್ ಸಂಜಾತ. ಇವರ ತಂದೆ ತಾಯಿ ಭಾರತೀಯ ಮೂಲದವರು. ರಿಷಿ ಇಂಗ್ಲೆಂಡಿನ ಸೌತಾಂಪ್ಟನ್‌ನಲ್ಲಿ ನೆಲೆಸಿದ್ದ ಪಂಜಾಬ್ ಮೂಲದ ಯಶ್ವೀರ್ ಮತ್ತು ಉಷಾ ಸುನಕ್ ಎಂಬ ದಂಪತಿಗೆ 1980ರಲ್ಲಿ ಜನಿಸಿದವರು. ಇವರ ಅಜ್ಜ ಅಜ್ಜಿ ಪಂಜಾಬ್‌ನಿಂದ ವಲಸೆ ಹೋದವರು. ತಂದೆ ವೈದ್ಯರು.
೨. ವಿದ್ಯಾರ್ಥಿ ದೆಸೆಯಲ್ಲೇ ಇನ್‌ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರನ್ನು ಭೇಟಿಯಾಗಿ, ಪ್ರೇಮಿಸಿ, 2009ರಲ್ಲಿ ರಿಷಿ ಹಾಗೂ ಅಕ್ಷತಾ ಮೂರ್ತಿ ಮದುವೆಯಾದರು. ಅದಕ್ಕೂ ಮುನ್ನ ರಿಷಿ ಅವರು ನಾರಾಯಣಮೂರ್ತಿ ಪಾಲುದಾರರಾಗಿದ್ದ ಇಂಗ್ಲೆಂಡ್‌ನ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿದ್ದರು.
೩. ರಿಷಿ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಫಿಲಾಸಫಿ, ಪಾಲಿಟಿಕ್ಸ್ ಮತ್ತು ಎಕಾನಮಿಕ್ಸ್ ಓದಿದರು. ಪದವಿ ಪಡೆದ ನಂತರ ಗೋಲ್ಡ್‌ಮನ್ ಸ್ಯಾಕ್ಸ್ ಬ್ಯಾಂಕ್‌ನಲ್ಲಿ ಅನಲಿಸ್ಟ್ ಆಗಿ ಸೇರಿಕೊಂಡರು. 2014ರಲ್ಲಿ ರಿಚ್ಮಂಡ್ ಎಂಬಲ್ಲಿಂದ ಕನ್ಸರ್ವೇಟಿಕ್ ಪಕ್ಷದಿಂದ ಸ್ಪರ್ಧಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಬಳಿಕ ಎರಡು ಬಾರಿ ಆರಿಸಿ ಬಂದಿದ್ದಾರೆ. ಪ್ರತಿಸಲವೂ ಅವರ ಜನಪ್ರಿಯತೆ ಏರುತ್ತಾ ಹೋಯಿತು.
೪. ಕೋವಿಡ್ ಸಂದರ್ಭದಲ್ಲಿ ರಿಷಿ ಅವರ ಜನಪ್ರಿಯತೆ ಉತ್ತುಂಗಕ್ಕೆ ಏರಿತು. ಪ್ರಧಾನಿ ಬೋರಿಸ್ ಜಾನ್ಸನ್ ಕೊರೊನಾದ ಅಪಕ್ವ ನಿರ್ವಹಣೆ ಸೇರಿದಂತೆ ಅನೇಕ ವಿವಾದಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡ ಬಳಿಕ, ರಿಷಿ ಅವರು ಜಾನ್ಸನ್‌ನ ಉತ್ತರಾಧಿಕಾರಿ ಎಂದು ಬ್ರಿಟಿಷ್ ಮಾಧ್ಯಮಗಳು ಹೇಳತೊಡಗಿದವು. ಆ
೫. ಬೋರಿಸ್ ಪ್ರಧಾನಿಯಾಗುವುದಕ್ಕೆ ಮುನ್ನ ಹಲವು ಸಣ್ಣಪುಟ್ಟ ಖಾತೆಗಳ್ನು ರಿಷಿ ನಿರ್ವಹಿಸಿದ್ದರು. ಅವರಿಗೆ ಹಣಕಾಸು ಖಾತೆಯನ್ನು ಹೊರಿಸಿದ್ದು ಬೋರಿಸ್. ಅದನ್ನು ರಿಷಿ ಸಮರ್ಥವಾಗಿ ನಿಭಾಯಿಸಿದರು. ಕೊರೊನಾ ಕಾಲಘಟ್ಟದಲ್ಲಿ ಅವರು ಘೋಷಿಸಿದ ಪ್ಯಾಕೇಜ್‌ಗಳು ಅವರಿಗೆ ಜನಪ್ರಿಯತೆಯನ್ನ ತಂದುಕೊಟ್ಟವು.
೬. ಹಗರಣಗಳಲ್ಲಿ ಸಿಲುಕಿಕೊಂಡ ಬೋರಿಸ್ ಜಾನ್ಸನ್ ಅವರನ್ನು ಸಮರ್ಥಿಸಿಕೊಂಡು ಬಂದದ್ದರಿಂದ ರಿಷಿ ಅವರ ಜನಪ್ರಿಯತೆ ತುಸು ಇಳಿಯಿತು. ಕೊನೆಗೂ ರಿಷಿ ರಾಜೀನಾಮೆ ನೀಡಿದ್ದರು. ರಿಷಿ ಅವರು ರಾಜೀನಾಮೆಯಿಂದಾಗಿ ಬೋರಿಸ್ ಅನಿವಾರ್ಯವಾಗಿ ಪಿಎ ಹುದ್ದೆಗೂ ರಾಜೀನಾಮೆ ನೀಡಬೇಕಾಯಿತು. ನಂತರ ನಡೆದ ಪಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ರಿಷಿ ಸುನಕ್ ಅವರೇ ಪ್ರಧಾನಿಯಾಗುತ್ತಾರೆಂದು ಭಾವಿಸಲಾಗಿತ್ತು. ಕೊನೆಯ ಹಂತದವರೆಗೂ ಅವರು ಸ್ಪರ್ಧೆಯಲ್ಲಿದ್ದರು. ಆದರೆ, ಅಂತಿಮವಾಗಿ ಕನ್ಸರ್ವೇಟಿವ್ ಪಕ್ಷದ ಮತದಾರರು ಲಿಜ್ ಟ್ರಸ್ ಅವರನ್ನು ಆಯ್ಕೆ ಮಾಡಿದ್ದರು. ಹಾಗಾಗಿ, ಸ್ವಲ್ಪದರಲ್ಲೇ ಅವರು ಪ್ರಧಾನಿ ಹುದ್ದೆಯಿಂದ ವಂಚಿತರಾಗಿದ್ದರು.
೭. ಪತ್ನಿ ಅಕ್ಷತಾ ಅವರು ಇಂಗ್ಲೆಂಡ್ ಸರಕಾರಕ್ಕೆ ಸಲ್ಲಿಸಬೇಕಾದ 20 ದಶಲಕ್ಷ ಪೌಂಡ್ (ಸುಮಾರು 197 ಕೋಟಿ ರೂಪಾಯಿ) ತೆರಿಗೆಯನ್ನು ತಪ್ಪಿಸಿದ್ದಾರೆ ಎಂಬ ಆರೋಪ ಬಂತು. ರಿಷಿ ಸಕಾಲದಲ್ಲಿ ಅದಕ್ಕೆ ಉತ್ತರಿಸಲಿಲ್ಲ. ಅಕ್ಷತಾ ಅವರು ಬ್ರಿಟನ್‌ನ non domicile ಪ್ರಜೆಯಾಗಿದ್ದರೆ ಅವರು ದೇಶದಾಚೆಯ ಮೂಲಗಳಿಂದ ಪಡೆದ ಆದಾಯಕ್ಕೆ ಬ್ರಿಟನ್‌ನಲ್ಲಿ ತೆರಿಗೆ ಕಟ್ಟಬೇಕಿಲ್ಲ. ಆದರೆ ನಾನ್ ಡೊಮಿಸೈಲ್ ಸ್ಥಾನಮಾನ ಅವರು ಪಡೆದಿರಲಿಲ್ಲ. ಕೊನೆಗೆ ಈ ತೆರಿಗೆ ಕಟ್ಟಲು ಅಕ್ಷತಾ ಒಪ್ಪಿದರು.
೮. ರಿಷಿ ಆಲ್ಕೋಹಾಲ್ ಸೇವಿಸುವುದಿಲ್ಲ. ಆದರೆ ಬೋರಿಸ್ ಜಾನ್ಸನ್ ಅವರ ವಿವಾದಿತ ಕೋವಿಡ್ ಕಾಲದ ಪಾರ್ಟಿಯಲ್ಲಿ ಇವರೂ ಇದ್ದರು. ಇವರನ್ನು ಆತ್ಮೀಯರು ʼDishy’ ಎಂದು ಕರೆಯುತ್ತಾರೆ.
೯. ಉಕ್ರೇನ್ ಮೇಲಿನ ಯುದ್ಧಕ್ಕಾಗಿ ರಷ್ಯಾದ ಮೇಲೆ ಹಲವು ವಾಣಿಜ್ಯ ನಿರ್ಬಂಧಗಳನ್ನು ಇಂಗ್ಲೆಂಡ್ ವಿಧಿಸಿದೆ. ಆದರೆ ಇನ್‌ಫೋಸಿಸ್ ಮಾತ್ರ ರಷ್ಯಾದಲ್ಲಿ ಎಂದಿನಂತೆ ತನ್ನ ವ್ಯವಹಾರ ನಡೆಸುತ್ತಿದೆ. ಇದರ ಬಗ್ಗೆ ರಿಷಿ ತುಟಿ ಪಿಟಿಕ್ ಎಂದಿಲ್ಲ.
10. ಬ್ರಿಟನ್ ಪ್ರಧಾನಿಯಾಗಿರುವ ರಿಷಿ ಸುನಕ್ ಅವರು ತಾವೊಬ್ಬ ಹೆಮ್ಮೆಯ ಹಿಂದೂ ಎಂದು ಹೇಳಿಕೊಳ್ಳುತ್ತಾರೆ. ಲಂಡನ್ ಇಸ್ಕಾನ್‌ಗೆ ಭೇಟಿ ನೀಡಿ, ಗೋವು ಪೂಜೆ ಮಾಡಿದ ಫೋಟೋಗಳು ಭಾರತದಲ್ಲಿ ಸಖತ್ ವೈರಲ್ ಆಗಿದ್ದವು.
ಇದನ್ನೂ ಓದಿ | Rishi Sunak | ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿ, ಅ.28ಕ್ಕೆ ಪದಗ್ರಹಣ