Site icon Vistara News

Yana Mir: ಮಲಾಲಾಳಂತೆ ದೇಶ ಬಿಡಲ್ಲ, ಕಾಶ್ಮೀರ ಸೇಫ್; ಬ್ರಿಟನ್‌ ಸಂಸತ್ತಲ್ಲಿ ಕಾಶ್ಮೀರ ಯುವತಿ ಚಾಟಿ

Yana Mir

'I’m not Malala’ fame Kashmiri activist vs Delhi Customs in videos

ಲಂಡನ್: ಜಮ್ಮು-ಕಾಶ್ಮೀರದ ವಿಷಯದಲ್ಲಿ ಆಗಾಗ ಮೂಗು ತೂರಿಸುವ ನೊಬೆಲ್‌ ಶಾಂತಿ ಪುರಸ್ಕೃತ ಹೋರಾಟಗಾರ್ತಿ ಮಲಾಲಾ ಯೂಸುಫ್‌ಜಾಯ್‌ (Malala Yousafzai) ಅವರಿಗೆ ಜಮ್ಮು-ಕಾಶ್ಮೀರದ ಯುವತಿ ಯಾನಾ ಮಿರ್‌ (Yana Mir) ಅವರು ಬ್ರಿಟನ್‌ ಸಂಸತ್ತಲ್ಲಿ ತಿರುಗೇಟು ನೀಡಿದ್ದಾರೆ. “ಜಮ್ಮು-ಕಾಶ್ಮೀರ (Jammu Kashmir) ಸುರಕ್ಷಿತವಾಗಿದೆ. ನಾನು ಮಲಾಲಾ ಯೂಸುಫ್‌ಜಾಯ್‌ ಅವರಂತೆ ನನ್ನ ದೇಶವನ್ನು ತೊರೆಯುವುದಿಲ್ಲ” ಎಂದು ಹೇಳುವ ಮೂಲಕ ಜಮ್ಮು-ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ಹಾಗೂ ಮಲಾಲಾ ಯೂಸುಫ್‌ಜಾಯ್‌ ಅವರ ಕುತಂತ್ರವನ್ನು ಬಯಲಿಗೆಳೆದಿದ್ದಾರೆ.

ಬ್ರಿಟನ್‌ ಸಂಸತ್‌ನಲ್ಲಿ ಆಯೋಜಿಸಿದ್ದ ಸಂಕಲ್ಪ ದಿವಸ ಕಾರ್ಯಕ್ರಮದಲ್ಲಿ ಯಾನಾ ಮಿರ್‌ ಮಾತನಾಡಿದರು. ಜಮ್ಮು-ಕಾಶ್ಮೀರದಲ್ಲಿ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿಯಾಗಿರುವ ಯಾನಾ ಮಿರ್‌ ಅವರಿಗೆ ಕಾರ್ಯಕ್ರಮದಲ್ಲಿ ಡೈವರ್ಸಿಟಿ ಅಂಬಾಸಿಡರ್‌ ಅವಾರ್ಡ್‌ ನೀಡಿ ಗೌರವಿಸಲಾಯಿತು. ಇದಾದ ಬಳಿಕ ಮಾತನಾಡಿದ ಅವರು, “ನಾನು ಮಲಾಲಾ ಯೂಸುಫ್‌ಜಾಯ್‌ ಅಲ್ಲ. ಏಕೆಂದರೆ, ನನ್ನ ಭಾರತ ದೇಶವು ಸುರಕ್ಷಿತವಾಗಿದೆ. ನನ್ನ ಜಮ್ಮು-ಕಾಶ್ಮೀರವು ಸುಭ್ರವಾಗಿದೆ. ನಾನು ಎಂದಿಗೂ ಭಾರತವನ್ನು ಬಿಟ್ಟು ಬರುವುದಿಲ್ಲ ಹಾಗೂ ಈ ದೇಶದ ಆಶ್ರಯ ಬೇಡುವುದಿಲ್ಲ” ಎಂದು ಹೇಳಿದ್ದಾರೆ.

ಭಾರತ ವಿರುದ್ಧದ ಮನಸ್ಥಿತಿ ಬಯಲು

ಜಾಗತಿಕವಾಗಿ ಭಾರತದ ವಿರುದ್ಧ ಷಡ್ಯಂತ್ರ ಮಾಡುವ, ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಕುತಂತ್ರ ಮೆರೆಯುವ ಮನಸ್ಥಿತಿಗಳನ್ನು ಯಾನಾ ಮಿರ್‌ ಬಯಲಿಗೆಳೆದಿದ್ದಾರೆ. “ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮಲಾಲಾ ಯೂಸುಫ್‌ಜಾಯ್‌ ಅವರ ಮನಸ್ಥಿತಿಯನ್ನು ನಾನು ಖಂಡಿಸುತ್ತೇನೆ. ಅಷ್ಟೇ ಅಲ್ಲ, ಜಾಗತಿಕವಾಗಿ ಯಾರೇ ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡಿದರೂ ನಾನು ಅದನ್ನು ಸಹಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಟೂಲ್‌ಕಿಟ್‌ಗಳ ಮೂಲಕ ನನ್ನ ಮಾತೃಭೂಮಿಯ ಬಗ್ಗೆ ಮಾತನಾಡುವುದು ಸರಿಯಲ್ಲ” ಎಂದು ಯಾನಾ ಮಿರ್‌ ಚಾಟಿ ಬೀಸಿದರು.

ಕಾಶ್ಮೀರದ ಬಗ್ಗೆ ಹೇಳಿದ್ದಿಷ್ಟು

ಜಮ್ಮು-ಕಾಶ್ಮೀರದ ಬಗ್ಗೆ ಯಾನಾ ಮಿರ್‌ ಮಾತನಾಡಿದರು. “ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಅಲ್ಲಿ ಶಾಂತಿ ನೆಲೆಸಿದೆ. ಜಮ್ಮು-ಕಾಶ್ಮೀರವು ಸುರಕ್ಷಿತವಾಗಿದೆ. ಮಾನವ ಹಕ್ಕುಗಳ ರಕ್ಷಣೆಯಾಗುತ್ತಿದೆ. ಹಾಗಾಗಿ, ಪಾಕಿಸ್ತಾನ ಸೇರಿ ಯಾವುದೇ ರಾಷ್ಟ್ರಗಳು ಪಾಕಿಸ್ತಾನದ ವಿಷಯದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಸಂಕಲ್ಪ ದಿವಸ ಆಚರಣೆ ಮಾಡಿದ ಬಳಿಕವಾದರೂ, ಜಮ್ಮು-ಕಾಶ್ಮೀರದ ಕುರಿತು ಪಾಕಿಸ್ತಾನ ಸೇರಿ ಯಾವುದೇ ದೇಶವು ಸುಳ್ಳು ಮಾಹಿತಿ ಹರಡುವುದಿಲ್ಲ ಎಂಬ ವಿಶ್ವಾಸವಿದೆ. ಯಾರೂ ಜಮ್ಮು-ಕಾಶ್ಮೀರದ ಜನರನ್ನು ಪ್ರತ್ಯೇಕಿಸಿ ನೋಡುವುದಿಲ್ಲ ಎಂಬ ನಂಬಿಕೆ ಇದೆ” ಎಂದು ತಿಳಿಸಿದರು.

ಜಮ್ಮು-ಕಾಶ್ಮೀರದ ಕುರಿತು ಯಾನಾ ಮಿರ್‌ ಅವರು ಹೆಮ್ಮೆಯಿಂದ ಆಡಿದ ಮಾತುಗಳಿಗೆ ಬ್ರಿಟನ್‌ ಸಂಸತ್ತಿನಲ್ಲಿಯೇ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದ್ದು, ಜನ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಪಾಕಿಸ್ತಾನದ ಮಲಾಲಾ ಯೂಸುಫ್‌ಜಾಯ್‌ ಅವರು ಜಮ್ಮು-ಕಾಶ್ಮೀರದ ಕುರಿತು ಆಗಾಗ ಮಾತನಾಡುತ್ತಿರುತ್ತಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದೆಲ್ಲ ಇದಕ್ಕೂ ಮೊದಲು ಹೇಳಿದ್ದರು. ಅವರಿಗೆ ಯಾನಾ ಮಿರ್‌ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಅಂದಹಾಗೆ, ಪಾಕಿಸ್ತಾನ ತೊರೆದಿರುವ ಮಲಾಲಾ ಯೂಸುಫ್‌ಜಾಯ್‌, ಬ್ರಿಟನ್‌ನಲ್ಲಿ ನೆರೆಯೂರಿದ್ದಾರೆ.

ಇದನ್ನೂ ಓದಿ: Israel Palestine War: ಗಾಜಾಗೆ 2.5 ಕೋಟಿ ರೂ. ದೇಣಿಗೆ ನೀಡಿದ ಮಲಾಲಾ; ದಾಳಿಗೆ ಖಂಡನೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version