Site icon Vistara News

ಆತ್ಮಹತ್ಯೆಗೆ ಅವಕಾಶ ಕೊಡಿ ಎಂದು ಸುಪ್ರೀಂ ಕೋರ್ಟ್ ಸಿಜೆಗೆ ಪತ್ರ ಬರೆದ ಉ.ಪ್ರ ನ್ಯಾಯಾಧೀಶೆ!

CJI Chandrachood

ಹೊಸದಿಲ್ಲಿ: ಹಿರಿಯ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳಕ್ಕೆ (physical abuse, Sexual harassment) ಒಳಗಾದ ಉತ್ತರ ಪ್ರದೇಶದ ಮಹಿಳಾ ನ್ಯಾಯಾಧೀಶರೊಬ್ಬರು, ತನಗೆ ಆತ್ಮಹತ್ಯೆಗೆ ಅನುಮತಿ ಕೊಡಿ ಎಂದು ಕೋರಿ ಸುಪ್ರೀಂ ಕೋರ್ಟ್‌ (Supreme court) ಮುಖ್ಯ ನ್ಯಾಯಮೂರ್ತಿ (Chief Justice of India – CJI) ಡಿ.ವೈ ಚಂದ್ರಚೂಡ್ (DY Chandrachud) ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತ ಸುದ್ದಿ ಹಾಗೂ ಬಹಿರಂಗ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಿಜೆಐ ಪ್ರಕರಣದ ಬಗ್ಗೆ ವರದಿ ಕೇಳಿದ್ದಾರೆ.

“ನನ್ನ ಜೀವನವನ್ನು ಗೌರವಯುತವಾಗಿ ಕೊನೆಗೊಳಿಸಲು ದಯವಿಟ್ಟು ನನಗೆ ಅನುಮತಿ ಕೊಡಿ. ನನ್ನ ಜೀವನವನ್ನು ʼಡಿಸ್‌ಮಿಸ್‌ʼ ಮಾಡಿ” ಎಂದು ಉತ್ತರ ಪ್ರದೇಶದ ಬಂಡಾದ ಮಹಿಳಾ ನ್ಯಾಯಾಧೀಶಶೆಯೊಬ್ಬರು ಮುಖ್ಯ ನ್ಯಾಯಾಧೀಶರನ್ನು ಉದ್ದೇಶಿಸಿ ಪತ್ರದಲ್ಲಿ ಬರೆದಿದ್ದಾರೆ. ಬಾರಾಬಂಕಿಯ ಜಿಲ್ಲಾ ನ್ಯಾಯಾಧೀಶರು ಮತ್ತು ಅವರ ಸಹಚರರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. “ನನಗೆ ತುಂಬಾ ಲೈಂಗಿಕ ಕಿರುಕುಳ ನೀಡಲಾಗಿದೆ. ನನ್ನನ್ನು ಸಂಪೂರ್ಣ ಕಸದಂತೆ ನಡೆಸಿಕೊಳ್ಳಲಾಗಿದೆ. ಇದರಿಂದ ನಾನೊಬ್ಬ ಕ್ರಿಮಿಯಂತೆ ಭಾಸವಾಗುತ್ತಿದೆ” ಎಂದು ಅವರು ವ್ಯಾಪಕವಾಗಿ ಪ್ರಸಾರವಾದ ಪತ್ರದಲ್ಲಿ ಹೇಳಿದ್ದಾರೆ.

ಇದಕ್ಕೆ ಸ್ಪಂದಿಸಿರುವ ಸಿಜೆಐ ಚಂದ್ರಚೂಡ್ ಅವರ ಸೂಚನೆಯ ಮೇರೆಗೆ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್ ಅತುಲ್ ಎಂ. ಕುರ್ಹೇಕರ್ ಅವರು ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದು, ಮಹಿಳಾ ನ್ಯಾಯಾಧೀಶರ ಎಲ್ಲಾ ದೂರುಗಳ ಸ್ಥಿತಿಗತಿಯ ಬಗ್ಗೆ ಇಂದು ಬೆಳಿಗ್ಗೆ ವರದಿಯನ್ನು ಕೇಳಿದ್ದಾರೆ.

ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳೂ ಈ ಬಹಿರಂಗ ಪತ್ರದ ಬಗ್ಗೆ ಗಮನ ಹರಿಸಿದ್ದಾರೆ. 2023ರ ಜುಲೈಯಲ್ಲಿ ಹೈಕೋರ್ಟ್‌ನ ಆಂತರಿಕ ದೂರುಗಳ ಸಮಿತಿಗೆ ಈ ಬಗ್ಗೆ ನ್ಯಾಯಾಧೀಶೆ ದೂರು ಸಲ್ಲಿಸಿದ್ದರು. ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು. ಆದರೆ ʼವಿಚಾರಣೆಯ ಪ್ರಹಸನ ಮಾತ್ರ ನಡೆದಿದೆʼ ಎಂದು ನ್ಯಾಯಾಧೀಶೆ ಆರೋಪಿಸಿದ್ದಾರೆ. “ತನಿಖೆಯಲ್ಲಿರುವ ಸಾಕ್ಷಿಗಳು ಜಿಲ್ಲಾ ನ್ಯಾಯಾಧೀಶರ ಅಧೀನದವರಾಗಿದ್ದಾರೆ. ಸಾಕ್ಷಿಗಳು ತಮ್ಮ ಬಾಸ್ ಅನ್ನು ಪದಚ್ಯುತಿಗೊಳಿಸಬೇಕೆಂದು ಸಮಿತಿಯು ನಿರೀಕ್ಷಿಸುತ್ತಿರುವುದು ನನ್ನ ತಿಳಿವಳಿಕೆಗೆ ಮೀರಿದೆ” ಎಂದು ಅವರು ಬರೆದಿದ್ದಾರೆ.

“ನ್ಯಾಯಯುತ ತನಿಖೆ ಸಾಧ್ಯವಾಗುವಂತೆ ಆರೋಪಿ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವಂತೆ ನಾನು ವಿನಂತಿಸಿದ್ದೇನೆ. ಆದರೆ ಸುಪ್ರೀಂ ಕೋರ್ಟ್ ತನ್ನ ಅರ್ಜಿಯನ್ನು ಕೇವಲ ಎಂಟು ಸೆಕೆಂಡುಗಳಲ್ಲಿ ವಜಾಗೊಳಿಸಿದೆ. ಕನಿಷ್ಠ ನನ್ನ ಪ್ರಾರ್ಥನೆಗೆ ಕಿವಿಗೊಡಲಿಲ್ಲ. ನನಗೆ ಇನ್ನು ಬದುಕುವ ಇಚ್ಛೆ ಇಲ್ಲ. ಕಳೆದ ಒಂದೂವರೆ ವರ್ಷದಲ್ಲಿ ನನ್ನನ್ನು ನಡೆದಾಡುವ ಶವದಂತೆ ಕಾಣಲಾಗಿದೆ. ಇನ್ನು ಮುಂದೆ ಈ ನಿರ್ಜೀವ ದೇಹವನ್ನು ಹೊತ್ತುಕೊಂಡು ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ. ನನ್ನ ಜೀವನದಲ್ಲಿ ಯಾವುದೇ ಉದ್ದೇಶವಿಲ್ಲ” ಎಂದು ಎರಡು ಪುಟಗಳ ಪತ್ರದಲ್ಲಿ ಬರೆಯಲಾಗಿದೆ.

Exit mobile version