Site icon Vistara News

UPSC exam: ಕಟ್‌ಆಫ್‌ ಅವಧಿಯ ಫಾರಂ ಕೊಡದಿದ್ದರೆ EWS ಕೋಟಾ ಮೀಸಲು ಇಲ್ಲ: ಸುಪ್ರೀಂ ಕೋರ್ಟ್

supreme

ಹೊಸದಿಲ್ಲಿ: ಕಟ್‌ಆಫ್‌ ಅವಧಿಯ ಆದಾಯ ಪ್ರಮಾಣ ಪತ್ರವನ್ನು ನಿಗದಿತ ಫಾರಂಗಳಲ್ಲಿ ಸಲ್ಲಿಸದಿದ್ದರೆ, ಆರ್ಥಿಕವಾಗಿ ದುರ್ಬಲ ವರ್ಗದ (EWS) ಮೀಸಲು (EWS reservation) ಕೋಟಾವನ್ನು ಕ್ಲೇಮ್‌ ಮಾಡಲು ಸಾಧ್ಯವಿಲ್ಲ ಎಂದು ಯುಪಿಎಸ್‌ಸಿಗೆ ಪರೀಕ್ಷೆಗಳಿಗೆ (UPSC exam) ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ (supreme court) ತೀರ್ಪು ಹೇಳಿದೆ.

ಈ ಕುರಿತು ಸಲ್ಲಿಸಲಾದ ಮೂರು ರಿಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಮೂವರು ನಾಗರಿಕ ಸೇವಾ ಪರೀಕ್ಷಾ ಆಕಾಂಕ್ಷಿಗಳು ಕೇಂದ್ರ ಲೋಕಸೇವಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇವರು ಆದಾಯದ ಕಟಾಫ್‌ ಅರ್ಜಿ ಫಾರಂ ಸಲ್ಲಿಸಲು ವಿಫಲರಾಗಿದ್ದರಿಂದ ಅವರನ್ನು ಮೀಸಲು ಇಲ್ಲದ ಸಾಮಾನ್ಯ ವರ್ಗದ ಅಭ್ಯರ್ಥಿಗಳಾಗಿ ಆಯೋಗ ಪರಿಗಣಿಸಿತ್ತು.

ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಈ ತೀರ್ಪು ನೀಡಿದ್ದಾರೆ. ಯುಪಿಎಸ್‌ಸಿ ನಿರ್ಧಾರವನ್ನು ಅವರು ಎತ್ತಿ ಹಿಡಿದಿದ್ದಾರೆ. ನಾಗರಿಕ ಸೇವಾ ಪರೀಕ್ಷೆಗಳ ನಿಯಮಾವಳಿ ಕಾನೂನುಬದ್ಧ ಹಾಗೂ ಸಂವಿಧಾನಾತ್ಮಕವಾಗಿದೆ ಎಂದಿದ್ದಾರೆ.

EWS ವರ್ಗದ ಪ್ರಯೋಜನವನ್ನು ಪಡೆದುಕೊಳ್ಳುವ ಅಭ್ಯರ್ಥಿಗಳು ಕೇಂದ್ರ ಸರ್ಕಾರ 2019ರ ಜನವರಿಯಲ್ಲಿ ನಿಗದಿಪಡಿಸಿದ ಮಾನದಂಡವನ್ನು ಪೂರೈಸಿದರೆ ಮಾತ್ರ ಮೀಸಲಿಗೆ ಅರ್ಹತೆ ಪಡೆಯುತ್ತಾರೆ. 2022ರ ಪರೀಕ್ಷೆಗೆ ಹಾಜರಾಗಬಯಸುವವರು 2020-21ರ ಅಗತ್ಯ ಆದಾಯ ಮತ್ತು ಆಸ್ತಿ ಪ್ರಮಾಣಪತ್ರಗಳನ್ನು ನಿಗದಿತ ದಿನದೊಳಗೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ಈ ಅಭ್ಯರ್ಥಿಗಳು ತಮ್ಮನ್ನು ಜನರಲ್‌ ಕೆಟಗರಿಯಲ್ಲಿ ಪರಿಗಣಿಸಿದ್ದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದು ಸಂವಿಧಾನದ 14, 16 ಹಾಗೂ 21ನೇ ವಿಧಿಗಳ ಉಲ್ಲಂಘನೆ ಎಂದಿದ್ದರು. ತಮ್ಮನ್ನು ಮೊದಲು EWS ವಿಭಾಗದಲ್ಲಿ ಸೇರಿಸಲಾಗಿತ್ತಾದರೂ, ಫಲಿತಾಂಶದ ಬಳಿಕ ತಾವು EWS ಕಟ್‌ಆಫ್‌ಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, ಯಾವುದೇ ಕಾರಣ ನೀಡದೆ ತಮ್ಮನ್ನು ಮೀಸಲು ವಿಭಾಗದಿಂದ ತೆಗೆದು ಜನರಲ್‌ ವಿಭಾಗಕ್ಕೆ ಹಾಕಲಾಗಿದೆ ಎಂದು ಆರೋಪಿಸಿದ್ದರು.

ನಿಗದಿತ ದಿನಾಂಕದೊಳಗೆ ತಾವು ಅರ್ಜಿ ಸಲ್ಲಿಸಿದ್ದುದಾಗಿ ಅರ್ಜಿದಾರರು ವಾದಿಸಿದ್ದರು. ಆದರೆ ಅರ್ಜಿಯಲ್ಲಿ ವರ್ಷವನ್ನು 2020-21ರ ಬದಲಾಗಿ 2021-22 ಎಂದು ನಮೂದಿಸಿದ್ದುದು ಕಂಡುಬಂದಿತ್ತು.

ಇದನ್ನೂ ಓದಿ: UPSC Exam: ಸ್ಯಾಂಡಲ್‌ವುಡ್‌ನ ಖ್ಯಾತ ಬಾಲನಟಿ ಈಗ ಐಎಎಸ್‌ ಅಧಿಕಾರಿ!

Exit mobile version