ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ (PM Modi US Visit) ಕೈಗೊಂಡಿದ್ದು, ಅನಿವಾಸಿ ಭಾರತೀಯರು ಸೇರಿ ಅಮೆರಿಕ ಸರ್ಕಾರವೇ ವಿಶೇಷ ಗೌರವ ನೀಡಿದೆ. ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದಲ್ಲಿ ಯೋಗಾಭ್ಯಾಸ, ವಿಶ್ವಸಂಸ್ಥೆಯಲ್ಲಿ ಮೋದಿ ಅವರಿಗೆ ಆದರದ ಸ್ವಾಗತ, ಜೋ ಬೈಡೆನ್ ಜತೆ ಭೋಜನಕೂಟ ನಡೆದಿದೆ. ಇನ್ನು, ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿರುವುದು ಭಾರತಕ್ಕೆ ಹಲವು ದೃಷ್ಟಿಯಿಂದ ಉಪಯೋಗವಾಗಿದೆ. ಅದರಲ್ಲೂ, ಭಾರತೀಯರಿಗೆ ಎಚ್-1B ವೀಸಾ ನೀಡುವುದು, ಭಾರತೀಯರಿಗೆ ಉದ್ಯೋಗ ಸೇರಿ ವಿವಿಧ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ವರದಿಯೊಂದು ತಿಳಿಸಿದೆ.
“ಮೋದಿ ಅವರು ಅಮೆರಿಕ ಭೇಟಿ ನೀಡಿದ ಬಳಿಕ ಭಾರತೀಯರು ಅಮೆರಿಕದಲ್ಲಿ ಸುಲಭವಾಗಿ ಜೀವನ ಸಾಗಿಸುವ ದಿಸೆಯಲ್ಲಿ ನಿಯಮ ಬದಲಾವಣೆಗೆ ಜೋ ಬೈಡೆನ್ ಸರ್ಕಾರ ನಿರ್ಧರಿಸುವುದು. ಎಚ್-1B ವೀಸಾ ನೀಡುವುದು, ವೀಸಾ ನಿಯಮ ಸರಳಗೊಳಿಸುವುದು, ಕಾರ್ಮಿಕರು ಸೇರಿ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿರುವ ಭಾರತೀಯರು ಅಮೆರಿಕದಲ್ಲಿಯೇ ನೆಲೆಸುವುದು ಹಾಗೂ ಅವರಿಗೆ ವೀಸಾ ತೊಡಕಾಗದಂತೆ ನೋಡಿಕೊಳ್ಳುವುದು ಸೇರಿ ಹಲವು ದಿಸೆಯಲ್ಲಿ ಭಾರತದ ಅನುಕೂಲವಾಗುವ ರೀತಿ ನಿಯಮ ರೂಪಿಸುವುದು ಬೈಡೆನ್ ಸರ್ಕಾರದ ಉದ್ದೇಶ” ಎಂದು ವರದಿ ತಿಳಿಸಿದೆ.
US H-1B ಯೋಜನೆ ಅಡಿಯಲ್ಲಿ ಅಮೆರಿಕವು ಪ್ರತಿವರ್ಷ ಜಗತ್ತಿನ ಹಲವು ದೇಶಗಳ ಉದ್ಯೋಗಿಗಳಿಗೆ 65 ಸಾವಿರ ಎಚ್-1B ವೀಸಾ ನೀಡುತ್ತದೆ. ಅಡ್ವಾನ್ಸ್ಡ್ ಡಿಗ್ರಿ ಇರುವವರಿಗೆ 20 ಸಾವಿರ ಹೆಚ್ಚುವರಿ ವೀಸಾ ನೀಡುತ್ತದೆ. ಹೀಗೆ, ಸಾವಿರಾರು ಕೆಲಸಗಾರರು ಅಮೆರಿಕದಲ್ಲಿ ನೆಲೆಸುವಂತಾಗಲು ಎಚ್-1B ವೀಸಾ ಸಹಕಾರಿಯಾಗಲಿದೆ. ಹಾಗೆಯೇ, ಇವುಗಳ ಅವಧಿ ವಿಸ್ತರಣೆಗೆ ಹೊಸ ನಿಯಮಗಳು ಸಹಕಾರಿಯಾಗಲಿವೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: PM Modi US Visit: ಬೈಡೆನ್‌ಗೆ ಮೋದಿ ನೀಡಿದ ವಿಶೇಷ ಉಡುಗೊರೆಗೂ, ಮೈಸೂರಿಗೂ ಇದೆ ನಂಟು
ಅಮೆರಿಕದಲ್ಲಿರುವ ಭಾರತ ಮೂಲದ ಇನ್ಫೋಸಿಸ್, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ಅಮೆಜಾನ್, ಅಲ್ಫಾಬೆಟ್ ಹಾಗೂ ಮೆಟಾ (ಫೇಸ್‌ಬುಕ್) ಸೇರಿ ಹಲವು ಕಂಪನಿಗಳು ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಿಂದ ಎಚ್-1B ವೀಸಾ ಪಡೆದವರಿಗೆ ಉದ್ಯೋಗ ನೀಡುತ್ತಿವೆ. ಹಾಗಾಗಿ, ಅಮೆರಿಕವು ವೀಸಾ ನಿಯಮ ಸಡಿಲಗೊಳಿಸಿದರೆ ಭಾರತೀಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.