Site icon Vistara News

G20 Summit 2023: ಭಾರತಕ್ಕೆ ಬಂದಿಳಿದ ಅಮೆರಿಕ ಅಧ್ಯಕ್ಷ! ಮೋದಿ ಜತೆ ಬೈಡೆನ್ ಮಾತುಕತೆ

Joe Biden and Narendra Modi

ನವದೆಹಲಿ: ದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ (G20 Summit 2023) ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಶುಕ್ರವಾರ ಸಂಜೆ ಭಾರತಕ್ಕೆ (India) ಬಂದಿಳಿದಿದ್ದಾರೆ. ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಪಿಎಂ ಅವರ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಮನೆಯಲ್ಲಿ ಈ ಮಾತುಕತೆ ನಡೆಯಿತು. ಭೇಟಿಯ ನಂತರ ಖಾಸಗಿಯಾಗಿ ಬೈಡನ್ ಗೆ ರಾತ್ರಿ ಭೋಜನದ ವ್ಯವಸ್ಥೆಯನ್ನು ಮೋದಿ ಅವರು ಮಾಡಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಸಚಿವ ವಿ ಕೆ ಸಿಂಗ್ ಅವರು ಬೈಡನ್ ಅವರನ್ನು ಸ್ವಾಗತಿಸಿದರು.

ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಜೋ ಬೈಡೆನ್ ಅವರು ಭಾರತಕ್ಕೆ ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ತಿಂಗಳ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದಾಗ, ಬೈಡೆನ್ ದಂಪತಿ ಮೋದಿ ಅವರಿಗೆ ಶ್ವೇತಭವನದಲ್ಲಿ ವಿಶೇಷ ಅತಿಥಿ ಸತ್ಕಾರ ನೀಡಿದ್ದರು.

ಏನೇನು ಮಾತುಕತೆ ನಡೆಯಿತು?

ಅಮೆರಿಕ ಅಧ್ಯಕ್ಷ G-20 ಸಭೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ದೆಹಲಿಯ ಲೋಕ ಕಲ್ಯಾಣ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಜೋ ಬೈಡೆನ್‌ರನ್ನು ಪ್ರಧಾನಿ ಮೋದಿ ಅವರು ಆಹ್ವಾನಿಸಿದರು. ಈ ವೇಳೆ, ಎರಡೂ ರಾಷ್ಟ್ರಗಳಿಗೆ ಸಂಬಂಧಿಸಿದ ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಾಢವಾಗಿಸುವ ವಿಷಯಗಳ ಕುರಿತು ಚರ್ಚೆಯಾಗಿದೆ. ಉಭಯ ನಾಯಕರ ಫೋಟೋಗಳನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಹಂಚಿಕೊಂಡಿದೆ. ಜೆಟ್ ಇಂಜಿನ್‌ಗಳ ಒಪ್ಪಂದ, ಡ್ರೋನ್‌ಗಳ ಖರೀದಿ ಮತ್ತು 5G ಮತ್ತು 6G ನೆಟ್‌ವರ್ಕ್‌ಗಳಂತಹ ತಂತ್ರಜ್ಞಾನಗಳ ಸಹಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂದು ಕೇಂದ್ರ ಸರ್ಕಾರ ಉನ್ನತಾಧಿಕಾರಿಗಳು ತಿಳಿಸಿದ್ದಾರೆ

ವಿಶೇಷ ವಿಮಾನದಲ್ಲಿ ದಿಲ್ಲಿಗೆ ಬಂದಿಳಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್

ಪ್ರಧಾನಿ ನಿವಾಸದಲ್ಲಿ ನಡೆಯಲಿರುವ ಉಭಯ ನಾಯಕರ ನಡುವಿನ ಮಾತುಕತೆ ವೇಳೆ, ರಷ್ಯಾ-ಉಕ್ರೇನ್ ಸಂಘರ್ಷ, ಜಂಟಿ ನೆರವು, ಪರಮಾಣ ಶಕ್ತಿ, ರಕ್ಷಣೆ ಮತ್ತು ಜೆಟ್‌ ಒಪ್ಪಂದಗಳು ಏರ್ಪಡಲಿವೆ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ದ್ವಿಪಕ್ಷೀಯ ಮಾತುಕತೆ ನಡೆಯಿತು..

ನಾಳೆ ವಿಧ್ಯುಕ್ತವಾಗಿ ಜಿ20 ಶೃಂಗ ಸಭೆ ಆರಂಭ

ಜಿ20 ಶೃಂಗ ಸಭೆಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ವಿಶ್ವ ನಾಯಕರ ಸಮಾಗಮ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯಲಿದೆ. ಈ ವೇಳೆ, ಜಾಗತಿಕ ಸಮಸ್ಯೆಗಳು ಕುರಿತು ಚಿಂತನ ಮಂಥನ ನಡೆಯಲಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಟ್ವೀಟ್ ಮಾಡಿ, 18ನೇ ಜಿ20 ಶೃಂಗಸಭೆ ದಿಲ್ಲಿಯ ಐಕಾನಿಕ್ ಭಾರತ್ ಮಂಟಪಂನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ರಷ್ಯಾ ಹಾಗೂ ಚೀನಾ ಅಧ್ಯಕ್ಷರನ್ನು ಹೊರತುಪಡಿಸಿ ವಿಶ್ವದ ಪ್ರಮುಖ ನಾಯಕರೆಲ್ಲರೂ ಈಗಾಗಲೇ ದಿಲ್ಲಿ ತಲುಪಿದ್ದಾರೆ. ಸೆಪ್ಟೆಂಬರ್ 9ರಂದು ವಿಶ್ವ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಔತಣಕೂಟವನ್ನೂ ಏರ್ಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: G20 Summit 2023: ಪ್ರಧಾನಿ ಮೋದಿ ನಾಯಕತ್ವಕ್ಕೆ ಮಾಜಿ ಪಿಎಂ ಡಾ. ಮನಮೋಹನ್ ಸಿಂಗ್ ಬಹುಪರಾಕ್!

ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

ಸೆಪ್ಟೆಂಬರ್ 9 ಮತ್ತು 10ರಂದು ದಿಲ್ಲಿಯ ಐಕಾನಿಕ್ ಭಾರತ್ ಮಂಟಪದಲ್ಲಿ 18ನೇ ಜಿ20 ಶೃಂಗಸಭೆಯನ್ನು ಆಯೋಜಿಸಲು ಭಾರತಕ್ಕೆ ಸಂತೋಷವಾಗಿದೆ. ಇದು ಭಾರತ ಆಯೋಜಿಸುತ್ತಿರುವ ಮೊದಲ ಜಿ20 ಶೃಂಗಸಭೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ವಿಶ್ವ ನಾಯಕರೊಂದಿಗೆ ಫಲಪ್ರಧ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ನವದೆಹಲಿ ಜಿ20 ಶೃಂಗಸಭೆಯು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಹಾದಿಯನ್ನು ರೂಪಿಸುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version