Site icon Vistara News

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಿ ಎಂಬ ಮಸ್ಕ್‌ ಆಗ್ರಹಕ್ಕೆ ಅಮೆರಿಕವೂ ಸಾಥ್, ಶೀಘ್ರವೇ ಗುಡ್‌ ನ್ಯೂಸ್?

Modi Biden

US Reacts To Elon Musk's Remarks Backing Permanent UNSC Seat For India

ವಾಷಿಂಗ್ಟನ್:‌ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (UNSC) ಭಾರತಕ್ಕೆ ಕಾಯಂ ಸ್ಥಾನ (UN Permanent Seat) ಸಿಗಲು ಪ್ರಯತ್ನಿಸಲಾಗುವುದು ಎಂಬುದಾಗಿ ಕೆಲ ದಿನಗಳ ಹಿಂದಷ್ಟೇ ಬಿಜೆಪಿಯು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇನ್ನು, ಭಾರತಕ್ಕೆ ಕಾಯಂ ಸ್ಥಾನ ನೀಡಬೇಕು ಎಂದು ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಅವರೂ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕ ಕೂಡ ಭಾರತಕ್ಕೆ ಬೆಂಬಲ ಘೋಷಿಸಿದೆ. ಇದು ಈಗ ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದಿದೆ.

“ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಬೇಕು ಎಂಬುದರ ಕುರಿತು ಅಮೆರಿಕ ಅಧ್ಯಕ್ಷರೇ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ್ದಾರೆ. ವಿಶ್ವಸಂಸ್ಥೆ ಕಾರ್ಯದರ್ಶಿಯವರ ಅಭಿಪ್ರಾಯವೂ ಇದೇ ಆಗಿದೆ. ಆದಾಗ್ಯೂ, ಅಮೆರಿಕವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಲು ಬಯಸುತ್ತದೆ. ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದು, ಸುಧಾರಣೆಯನ್ನು ಬಯಸುತ್ತೇವೆ” ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ಉಪ ವಕ್ತಾರ ವೇದಾಂತ್‌ ಪಟೇಲ್‌ ಅವರು ಹೇಳಿದ್ದಾರೆ. ಹಾಗಾಗಿ, ಶೀಘ್ರದಲ್ಲೇ ಭಾರತಕ್ಕೆ ಕಾಯಂ ಸ್ಥಾನ ಸಿಕ್ಕರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಎಲಾನ್‌ ಮಸ್ಕ್‌ ಹೇಳಿದ್ದೇನು?

“ವಿಶ್ವಸಂಸ್ಥೆಯು ಬದಲಾವಣೆ ತರಲು ಹಿಂಜರಿಯುತ್ತಿದೆ. ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಪಡೆದಿರುವ ಬಲಿಷ್ಠ ರಾಷ್ಟ್ರಗಳು ತಾವು ಹೊಂದಿರುವ ಹೆಚ್ಚಿನ ಅಧಿಕಾರವನ್ನು ಬಳಸಿಕೊಳ್ಳಲು ಬಯಸುತ್ತಿವೆ. ಇದೇ ಕಾರಣಕ್ಕಾಗಿ ಆಫ್ರಿಕಾ ಹಾಗೂ ಭಾರತಕ್ಕೆ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಕ್ಕಿಲ್ಲ. ಹಾಗಾಗಿ, ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ. ಭಾರತ ಹಾಗೂ ಆಫ್ರಿಕಾಗೆ ಕಾಯಂ ಸದಸ್ಯತ್ವ ನೀಡಬೇಕು” ಎಂದು ಎಲಾನ್‌ ಮಸ್ಕ್‌ ಅವರು ಕಳೆದ ಜನವರಿಯಲ್ಲಿ ಆಗ್ರಹಿಸಿದ್ದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯು 5 ಕಾಯಂ ಹಾಗೂ 10 ಕಾಯಂ ಅಲ್ಲದ ಅಥವಾ ತಾತ್ಕಾಲಿಕವಾಗಿ ಸದಸ್ಯತ್ವ ಪಡೆದಿರುವ ರಾಷ್ಟ್ರಗಳನ್ನು ಹೊಂದಿದೆ. ಕಳೆದ 16 ವರ್ಷದಿಂದಲೂ ಭಾರತವು ತಾತ್ಕಾಲಿಕ ಸದಸ್ಯತ್ವ ಪಡೆದಿದೆ. ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಹಾಗೂ ಚೀನಾ ಕಾಯಂ ಸದಸ್ಯತ್ವ ಪಡೆದಿವೆ. ಭಾರತಕ್ಕೆ ಕಾಯಂ ಸ್ಥಾನ ನೀಡಲು ಚೀನಾ ಮಾತ್ರ ವಿರೋಧಿಸುತ್ತಿದ್ದು, ಎಲ್ಲ ದೇಶಗಳು ಬೆಂಬಲಿಸುತ್ತಿವೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.‌ ಜೈಶಂಕರ್‌ ಅವರೊಂದಿಗೆ ನಡೆದ ಸಭೆಯಲ್ಲಿ ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆಯ್‌ ಲಾವ್ರೋವ್‌ ಅವರು ಕೂಡ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: PM Modi: ಅಮೆರಿಕ ಪತ್ರಿಕೆಗೆ ಮೋದಿ ಸಂದರ್ಶನ; ಮಂದಿರ, ಚೀನಾ ಸೇರಿ ಹಲವು ವಿಷಯಗಳ ಬಗ್ಗೆ ಹೇಳಿದ್ದಿಷ್ಟು!

Exit mobile version