Site icon Vistara News

India US Dialogue: ಮೋದಿ-ಬೈಡೆನ್‌ ಭೇಟಿ ಬಳಿಕ ಹೊಸ ಅಧ್ಯಾಯ; 2+2 ಮಾತುಕತೆ ವೇಳೆ ಪ್ರಸ್ತಾಪ

India US Dialogue

US underlines momentum; India says PM Modi's state visit opened new chapter At At 2+2 dialogue

ನವದೆಹಲಿ: ಭಾರತ ಹಾಗೂ ಅಮೆರಿಕ ನಡುವಿನ 2+2 ಸಚಿವರ ಮಟ್ಟದ ಐದನೇ ಸಭೆಯು (India US Dialogue) ದೆಹಲಿಯಲ್ಲಿ ನಡೆಯುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಅಮೆರಿಕ ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌ ಹಾಗೂ ವಿದೇಶಾಂಗ ಸಚಿವ ಆ್ಯಂಟೋನಿ ಬ್ಲಿಂಕನ್‌ ಅವರು ಸಭೆ ನಡೆಸಿದ್ದು, ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ. ಹಾಗೆಯೇ ಇದೇ ವೇಳೆ, ಕಳೆದ ಜೂನ್‌ನಲ್ಲಿ ಅಮೆರಿಕದ ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (Joe Biden) ಅವರು ನಡೆಸಿದ ಮಾತುಕತೆ ಬಳಿಕ ಉಭಯ ದೇಶಗಳ ನಡುವಿನ ಸಂಬಂಧವು ಮತ್ತಷ್ಟು ವೃದ್ಧಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಭೆಯಲ್ಲಿ ಮಾತನಾಡಿದ ಎಸ್‌. ಜಶೈಂಕರ್‌, “ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ಬಳಿಕ ಉಭಯ ದೇಶಗಳ ಸಂಬಂಧದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಜೂನ್‌ನಲ್ಲಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದು, ಸೆಪ್ಟೆಂಬರ್‌ನಲ್ಲಿ ಜೋ ಬೈಡೆನ್‌ ಅವರು ಭಾರತಕ್ಕೆ ಆಗಮಿಸಿದ್ದು ಸಕಾರಾತ್ಮಕ ಪರಿಣಾಮ ಬೀರಿದೆ. ಇದರಿಂದ ನಮ್ಮ ದ್ವಿಪಕ್ಷೀಯ ಸಂಬಂಧ, ವ್ಯಾಪಾರ-ಒಪ್ಪಂದಗಳು ಮತ್ತಷ್ಟು ಗಟ್ಟಿಯಾಗಿವೆ. ಈ ಉತ್ತಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಸಭೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ” ಎಂದು ಹೇಳಿದರು.

ಯಾವ ಕ್ಷೇತ್ರಗಳಲ್ಲಿ ಸಹಕಾರ, ಒಪ್ಪಂದ?

ಭಾರತ ಹಾಗೂ ಅಮೆರಿಕ ಸಂಬಂಧದ ಜತೆಗೆ ಒಪ್ಪಂದದ ಕ್ಷೇತ್ರಗಳ ಕುರಿತು ಆ್ಯಂಟೋನಿ ಬ್ಲಿಂಕನ್‌ ಮಾತನಾಡಿದರು. “ಭಾರತ ಹಾಗೂ ಅಮೆರಿಕ ನಡುವೆ ಉತ್ತಮ ಸಹಕಾರ ಮನೋಭಾವ ಇದೆ. ಸೆಮಿ ಕಂಡಕ್ಟರ್‌ಗಳಲ್ಲಿ ಸುಧಾರಿತ ತಂತ್ರಜ್ಞಾನದ ಅಳವಡಿಕೆ, ಸುಧಾರಿತ ಜೈವಿಕ ತಂತ್ರಜ್ಞಾನ, ತಂತ್ರಜ್ಞಾನದ ಸದ್ಬಳಕೆ ಹಾಗೂ ಸಹಕಾರ ತತ್ವವು ಎರಡೂ ದೇಶಗಳನ್ನು ಏಳಿಗೆಯತ್ತ ಕೊಂಡೊಯ್ಯುತ್ತಿದೆ. ಸ್ವಚ್ಛ ಇಂಧನ, ಪ್ರಾದೇಶಿಕ ಭದ್ರತೆಯೂ ನಮ್ಮ ಆದ್ಯತೆಯಾಗಿದೆ. ಹಾಗೆಯೇ, ವೀಸಾ ನೀಡುವ ಅವಧಿ ಕಡಿತಗೊಳಿಸುವುದು ಸೇರಿ ಹಲವು ನಿರ್ಧಾರಗಳು ಹೃದಯಾಂತರಾಳದಿಂದ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಅಮೆರಿಕದಲ್ಲೂ ‘ಭಾರತ’ ಬ್ರ್ಯಾಂಡ್; ಚುನಾವಣೆಯಲ್ಲಿ ಭಾರತ ಮೂಲದ 10 ಅಭ್ಯರ್ಥಿಗಳಿಗೆ ಜಯ

ಭಾರತ ಭೇಟಿಯೇ ಅದ್ಭುತ ಎಂದ ಲಾಯ್ಡ್‌

ಭಾರತದ ಭೇಟಿಯೇ ಅದ್ಭುತ ಎಂದು ಆಸ್ಟಿನ್‌ ಲಾಯ್ಡ್‌ ಬಣ್ಣಿಸಿದರು. “ಭಾರತ ಹಾಗೂ ಅಮೆರಿಕವು ಜಗತ್ತಿನ ಬೃಹತ್‌ ಪ್ರಜಾಪ್ರಭುತ್ವ ದೇಶಗಳಾಗಿವೆ. ಅದರಲ್ಲೂ ನಾವು ಭಾರತಕ್ಕೆ ಭೇಟಿ ನೀಡುವುದೇ ಅದ್ಭುತ ಅನುಭವವಾಗಿದೆ. ಎರಡೂ ದೇಶಗಳ ಸಂಬಂಧ ವೃದ್ಧಿಯ ಜತೆಗೆ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿಯೂ ಭಾರತ ಹಾಗೂ ಅಮೆರಿಕ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಎರಡೂ ದೇಶಗಳ ಮಧ್ಯೆ ಇರುವ ಸಂಬಂಧ, ಪರಸ್ಪರ ಸಹಕಾರ, ಜನರ ಒಳಿತಿನ ಗುರಿಯೇ ಇಂತಹದ್ದನ್ನು ಸಾಧಿಸಲು ಸಾಧ್ಯವಾಗಿದೆ” ಎಂದು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version